ರಾಹುಲ್ ಗಾಂಧಿ ಸಮ್ಮುಖದಲ್ಲಿ ಇಂದು ರಾಜ್ಯ ನಾಯಕರ ಸಭೆ
News

ರಾಹುಲ್ ಗಾಂಧಿ ಸಮ್ಮುಖದಲ್ಲಿ ಇಂದು ರಾಜ್ಯ ನಾಯಕರ ಸಭೆ

February 24, 2022

ಬೆಂಗಳೂರು, ಫೆ.23(ಕೆಎಂಶಿ)- ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ನಡುವೆ ಮುಸುಕಿನ ಗುದ್ದಾಟಕ್ಕೆ ಇತಿಶ್ರೀ ಹಾಡಲು ಪಕ್ಷದ ದೆಹಲಿ ವರಿಷ್ಠರು ರಾಜ್ಯ ನಾಯಕರಿಗೆ ಬುಲಾವ್ ಮಾಡಿ ದ್ದಾರೆ. ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆ ಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವ ಹೊಸ್ತಿಲಲ್ಲಿದೆ, ಆದರೆ ರಾಜ್ಯ ನಾಯಕರ ಭಿನ್ನಾಭಿಪ್ರಾಯದಿಂದ ಪಕ್ಷಕ್ಕೆ ಹಿನ್ನಡೆ ಯಾಗುವ ಸಾಧ್ಯತೆ ಇದೆ. ಇದರ ಸುಳಿವು ಅರಿತ ರಾಹುಲ್ ಗಾಂಧಿ, ರಾಜ್ಯ ನಾಯಕರಲ್ಲಿರುವ ಭಿನ್ನಾಭಿಪ್ರಾಯ ಕೊನೆ ಗೊಳಿಸಲು ನಾಳೆ ದೆಹಲಿಯಲ್ಲಿ ಸಭೆ ಕರೆದಿದ್ದಾರೆ.

ವರಿಷ್ಠರ ಆಹ್ವಾನದ ಮೇರೆಗೆ ಸಿದ್ದರಾಮಯ್ಯ, ಶಿವಕುಮಾರ್ ಅಲ್ಲದೆ, ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಚುನಾವಣಾ ಪ್ರಚಾರ ಅಧ್ಯಕ್ಷ ಎಂ.ಬಿ.ಪಾಟೀಲ್ ವರಿ ಷ್ಠರ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಗ್ಗೆ ಮತದಾರರ ಮನಸ್ಸಿ ನಲ್ಲಿರುವ ಅಭಿಪ್ರಾಯದ ಬಗ್ಗೆ ಸಿದ್ದರಾಮಯ್ಯ ಮತ್ತು ಶಿವ ಕುಮಾರ್ ಪ್ರತ್ಯೇಕವಾಗಿ ಐದಾರು ಸಂಸ್ಥೆಗಳಿಂದ ಸಮೀಕ್ಷೆ ನಡೆಸು ತ್ತಿದ್ದಾರೆ. ತಾವು ನೇಮಿಸಿರುವ ಸಂಸ್ಥೆಗಳಿಂದ ಪ್ರಾಥಮಿಕ ವರದಿ ಪಡೆದು ಅದನ್ನು ವರಿಷ್ಠರ ಮುಂದಿಟ್ಟು, ಸ್ಥಿತಿಗತಿಗಳನ್ನು ವಿವರಿಸಲಿದ್ದಾರೆ. 2023ರ ಚುನಾವಣೆಗೆ ಒಂದು ತಂಡವನ್ನು ರಚಿಸಿ ಅದರ ಮೂಲಕ ಆಡಳಿತಾರೂಢ ಬಿಜೆಪಿ ವಿರುದ್ಧ ಹೋರಾಟ ನಡೆಸಿ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂಬುದು ಕಾಂಗ್ರೆಸ್ ಲೆಕ್ಕಾಚಾರ, ಆದರೆ, ತಂಡ ರಚನೆಯಲ್ಲೇ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ದೊಡ್ಡ ಕಂದಕವಿದೆ.

ಇವರಿಬ್ಬರ ವೈಮನಸ್ಸಿನಿಂದ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ 18 ತಿಂಗಳು ಕಳೆದರೂ ಇನ್ನೂ ಪದಾಧಿಕಾರಿಗಳ ನೇಮಕವಾಗಿಲ್ಲ. ಪದಾಧಿಕಾರಿಗಳು ಯಾರಿರಬೇಕು ಎಂಬುದರ ಬಗ್ಗೆ ಉಭಯ ನಾಯಕರು ವರಿಷ್ಠರಿಗೆ ಪ್ರತ್ಯೇಕ ಪಟ್ಟಿ ನೀಡಿದ್ದಾರೆ.

ಶಿವಕುಮಾರ್, ಲೆಟರ್‍ಹೆಡ್ ಕಾರ್ಯಕರ್ತರು ಬೇಡ, ಪಕ್ಷ ಸಂಘಟನೆ ಮತ್ತು ಯುವಕರಿಗೆ ಹೆಚ್ಚಿನ ಅವಕಾಶ ನೀಡೋಣ ಎಂದು ವರಿಷ್ಠರಿಗೆ ನೀಡಿರುವ ಪಟ್ಟಿಯಲ್ಲಿ ಶಿಫಾರಸು ಮಾಡಿದ್ದಾರೆ. ಈ ಪಟ್ಟಿಗೆ ಸಿದ್ದರಾಮಯ್ಯ ಸುತಾರಾಂ ಒಪ್ಪಿಲ್ಲ, ತಮ್ಮ ಜೊತೆ ಕಾಂಗ್ರೆಸ್ ಸೇರಿದವರಿಗೆ ಅವಕಾಶ ನೀಡಬೇಕು, ಎಲ್ಲಾ ಸಮಾಜದವರು ಮತ್ತು ಹಿರಿಯರು ಪದಾಧಿಕಾರಿಯಾಗಿರಬೇಕು ಎಂಬ ವಾದ ಮಂಡಿಸಿದ್ದಾರೆ.

Translate »