‘ದೈವ ಸಂಕಲ್ಪ’ಕ್ಕೆ ಮುಖ್ಯಮಂತ್ರಿ ಚಾಲನೆ
ಮೈಸೂರು

‘ದೈವ ಸಂಕಲ್ಪ’ಕ್ಕೆ ಮುಖ್ಯಮಂತ್ರಿ ಚಾಲನೆ

February 24, 2022

ಬೆಂಗಳೂರು: ಬೆರಳ ತುದಿಯಲ್ಲಿ ರಾಜ್ಯದ ದೇವಸ್ಥಾನಗಳ ಸಮಗ್ರ ಮಾಹಿತಿ ಹಾಗೂ ಸೇವೆಯ ಜೊತೆಗೆ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ರೂಪಿಸಲಾಗಿರುವ ‘ದೈವ ಸಂಕಲ್ಪ’ ಹಾಗೂ ಇಂಟಿಗ್ರೇಟೆಡ್ ಟೆಂಪಲ್ ಮ್ಯಾನೇಜ್‍ಮೆಂಟ್ ಸಿಸ್ಟಮ್ ಅನ್ನು (ಐಟಿಎಂಎಸ್ ಸಮಗ್ರ ದೇವಾ ಲಯ ನಿರ್ವಹಣಾ ವ್ಯವಸ್ಥೆ) ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಲೋಕಾರ್ಪಣೆಗೊಳಿಸಿದರು.

ಮುಖ್ಯಮಂತ್ರಿಗಳ ಗೃಹ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯೋಜನೆ ಗಳನ್ನು ಲೋಕಾರ್ಪಣೆಗೊಳಿಸಿ ಮಾತ ನಾಡಿದ ಮುಖ್ಯಮಂತ್ರಿ, ಬೆರಳ ತುದಿಯಲ್ಲಿ ದೇವಸ್ಥಾನದ ಸಮಗ್ರ ಮಾಹಿತಿಯನ್ನು ಒದಗಿಸುವಂತಹ ಅತ್ಯಾಧುನಿಕ ಡಿಜಿಟಲ್ ವ್ಯವಸ್ಥೆ ಇಂದಿನ ಅಗತ್ಯವಾಗಿತ್ತು. ನಮ್ಮ ದೇವಾಲಯಗಳ ಬಗ್ಗೆ ಸಮಗ್ರ ಮಾಹಿತಿ ಹಾಗೂ ಅವುಗಳಲ್ಲಿ ದೊರೆಯುವ ಸೇವೆ ಗಳನ್ನು ಆನ್‍ಲೈನ್ ಮೂಲಕ ಬುಕ್ ಮಾಡುವ ವ್ಯವಸ್ಥೆ ಎಲ್ಲವೂ ಒಳಗೊಂಡಿ ರುವುದು ಸಂತಸದ ವಿಷಯವಾಗಿದೆ. ಈ ಎಲ್ಲಾ ಸೌಲಭ್ಯಗಳ ಜೊತೆಯಲ್ಲಿ ದೇವಸ್ಥಾನ ಗಳಿಗೆ ತೆರಳುವ ಕೆಎಸ್‍ಆರ್‍ಟಿಸಿ ಬಸ್‍ಗಳ ಮಾಹಿತಿಯನ್ನು ಅಳವಡಿಸಬೇಕು. ಪ್ರವಾ ಸದ ಯೋಜನೆಯನ್ನು ಸುಲಭವಾಗಿ ಮಾಡ ಬಹುದಾದ ಮಾಹಿತಿಗಳನ್ನು ಅಳವಡಿಸಿ, ದೇವಸ್ಥಾನಗಳ ಆಸ್ತಿಗಳ ಸಂರಕ್ಷಣೆಯ ಬಗ್ಗೆ ಕಾಳಜಿ ವಹಿಸುವಂತೆಯೂ ಸೂಚಿಸಿದರು.

ಟೆಂಪಲ್ ಟೂರಿಸಂಗೆ ಒತ್ತು: ಉತ್ತರ, ದಕ್ಷಿಣ ಹಾಗೂ ಕರಾವಳಿ ಕರ್ನಾಟಕ ಗಳಲ್ಲಿ ಟೆಂಪಲ್ ಟೂರಿಸಂಗೆ ಹೆಚ್ಚಿನ ಅವ ಕಾಶವಿದೆ. ಈ ಅವಕಾಶಗಳ ಬಗ್ಗೆ ಹೆಚ್ಚಿನ ಪ್ರಚಾರ ನೀಡುವಂತೆ ಪ್ರವಾಸೋದ್ಯಮ ಇಲಾಖೆಗೂ ಸೂಚನೆ ನೀಡಲಾಗಿದೆ. ಈ ಮಾಹಿತಿಯನ್ನೂ ವೆಬ್‍ಸೈಟ್‍ನಲ್ಲಿ ಅಳವಡಿಸಿಕೊಳ್ಳುವ ಅವಕಾಶ ಕಲ್ಪಿಸಿ ಎಂದು ಹೇಳಿದರು. ದೇಶಕ್ಕೆ ಮಾದರಿಯಾದ ಇಂತಹ ವಿನೂತನ ಯೋಜನೆಯನ್ನು ಜಾರಿಗೊಳಿಸಿದ್ದಕ್ಕಾಗಿ ಮುಜ ರಾಯಿ ಸಚಿವರು ಹಾಗೂ ಇಲಾಖೆ ಅಧಿಕಾರಿಗಳನ್ನು ಅಭಿನಂದಿಸಿದರು.

ದೈವ ಸಂಕಲ್ಪ ಯೋಜನೆ: ದೈವ ಸಂಕಲ್ಪ ಯೋಜನೆಯಡಿ ರಾಜ್ಯದಲ್ಲಿರುವ 205ಎ ದರ್ಜೆಯ ದೇವಾಲಯಗಳನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸುವುದು. ಈ ಯೋಜನೆಯ ಮೊದಲು ಹಂತದಲ್ಲಿ ರಾಜ್ಯದ ಪ್ರಮುಖ 25 ದೇವಾಲಯಗಳನ್ನು 1,140 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸಲಾಗುವುದು. ಲಕ್ಷಾಂತರ ಭಕ್ತರು ಆಗಮಿಸುವ ಕುಕ್ಕೆ ಸುಬ್ರಹ್ಮಣ್ಯ, ಮಲೈ ಮಹದೇಶ್ವರ ಸ್ವಾಮಿ ಬೆಟ್ಟ, ಚಾಮುಂಡಿ ದೇವಸ್ಥಾನ, ಕೊಲ್ಲೂರು ಮೂಕಾಂಬಿಕಾ, ಯಡಿಯೂರು ಸಿದ್ಧಲಿಂಗೇಶ್ವರ ದೇವಸ್ಥಾನ, ಸವದತ್ತಿ ಯಲ್ಲಮ್ಮ ಸೇರಿದಂತೆ ಪ್ರಮುಖ ದೇವಸ್ಥಾನಗಳು ಈ ಯೋಜನೆಯ ಅಡಿಯಲ್ಲಿ ಸೇರಿವೆ. ಭಕ್ತಾದಿಗಳಿಗೆ ವಸತಿ ಸೌಲಭ್ಯ, ಉತ್ತಮ ರಸ್ತೆ ಹಾಗೂ ಶುದ್ದ ಕುಡಿಯುವ ನೀರಿನ ವ್ಯವಸ್ಥೆ, ಪಾರಂಪರಿಕ ಶಿಲಾಮಯ ಕಟ್ಟಡಗಳ ನಿರ್ಮಾಣ, ಮಲ್ಟಿ ಲೆವೆಲ್ ಪಾರ್ಕಿಂಗ್ ವ್ಯವಸ್ಥೆ, ಸ್ನಾನ ಘಟ್ಟ ಹಾಗೂ ಸುಸಜ್ಜಿತ ಅನ್ನದಾಸೋಹ ಭವನ, ವಾಣೀಜ್ಯ ಸಂಕೀರ್ಣ ಕಟ್ಟಡಗಳು, ಶೌಚಾಲಯಗಳು, ಒಳಚರಂಡಿ ಹಾಗೂ ಘನತ್ಯಾಜ್ಯ ನಿರ್ವಹಣಾ ಘಟಕ ಹಾಗೂ ಇನ್ನಿತರ ವ್ಯವಸ್ಥೆಗಳನ್ನು ಅಭಿವೃದ್ಧಿಗೊಳಿಸಲಾಗುವುದು.

ಐಟಿಎಂಎಸ್ ಮಾಹಿತಿ: ಒಂದೇ ವೆಬ್‍ಸೈಟ್‍ನಲ್ಲಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಾಲಯಗಳಿಗೆ ಸಂಬಂಧಿಸಿದ ಮಾಹಿತಿಗಳು (ದೇವಾಲಯಗಳ ಇತಿಹಾಸ, ಲಭ್ಯ ವಿರುವ ಸೇವೆಗಳ / ಪೂಜೆಗಳ ವಿವರ, ಲಭ್ಯವಿರುವ ಸೌಲಭ್ಯಗಳು, ಹತ್ತಿರದ ಸ್ಥಳಗಳು ಇತ್ಯಾಧಿ ವಿವರಗಳು) ಲಭ್ಯವಿದೆ. ಜಗತ್ತಿನ ಯಾವುದೇ ಭಾಗದಿಂದ ಆನ್‍ಲೈನ್ ಮೂಲಕ ಕಾಣಿಕೆಯನ್ನು ಸಲ್ಲಿಸಬಹುದಾಗಿದೆ. ದೇವಾಲಯಗಳಲ್ಲಿ ಲಭ್ಯವಿರುವ ಸೇವೆಗಳನ್ನು ಆನ್ ಲೈನ್ ಮೂಲಕ ಬುಕಿಂಗ್ ಮಾಡಬಹುದಾಗಿದೆ. ದೇವಾಲಯಗಳಲ್ಲಿ ನಡೆಯುವ ಉತ್ಸವ, ಜಾತ್ರೆಗಳು, ಹಬ್ಬ ಹರಿದಿನಗಳ ವಿವರಗಳನ್ನು ಭಕ್ತಾದಿಗಳಿಗೆ ಪಡೆಯಲು ಅನುಕೂಲವಾಗುವಂತೆ ಐಟಿಎಂಎಸ್ ತಂತ್ರಾಂಶದಲ್ಲಿ ಸದರಿ ಮಾಹಿತಿ ಗಳನ್ನು ಅಪ್‍ಲೋಡ್ ಮಾಡುವ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ದೇವಾಲಯಗಳ ಆಸ್ತಿಗಳ ವಿವರ ಮತ್ತು ಅವುಗಳ ವಹಿವಾಟಿನ ಮಾಹಿತಿಗಳು ಇದರಲ್ಲಿ ಅಡಕವಾಗಿರ ಲಿವೆ.

Translate »