ಅಪರಿಚಿತ ಯುವತಿಯರ ಮೂಲಕ ಹರ್ಷನ ಹತ್ಯೆ ಸಂಚು
News

ಅಪರಿಚಿತ ಯುವತಿಯರ ಮೂಲಕ ಹರ್ಷನ ಹತ್ಯೆ ಸಂಚು

February 24, 2022

ಶಿವಮೊಗ್ಗ, ಫೆ.23-ಭಜರಂಗ ದಳ ಕಾರ್ಯಕರ್ತ ಹರ್ಷನನ್ನು ಹಂತಕರು ಇಬ್ಬರು ಯುವತಿಯರ ಮೂಲಕ ಹತ್ಯೆ ಮಾಡಿದ ಸಂಶಯ ದಟ್ಟವಾಗುತ್ತಿದೆ. ಹತ್ಯೆ ಯಾಗುವುದಕ್ಕೆ ಕೆಲ ನಿಮಿಷ ಗಳ ಮುನ್ನ ಅಪರಿಚಿತ ಇಬ್ಬರು ಯುವತಿಯರು ಹರ್ಷನ ಮೊಬೈಲ್‍ಗೆ ವೀಡಿಯೋ ಕಾಲ್ ಮಾಡಿ, ಸಹಾಯ ಕೋರಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.

ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತ ನಾಡಿದ ಹರ್ಷನ ಸ್ನೇಹಿತ, ಅಂದು ಯುವತಿಯರು ವೀಡಿಯೋ ಕಾಲ್ ಮಾಡದಿದ್ದರೆ ನಾವು ಘಟನೆ ನಡೆದ ಸ್ಥಳಕ್ಕೆ ಹೋಗುತ್ತಿರಲಿಲ್ಲವೇನೋ ಎಂದು ತಿಳಿಸಿದ್ದಾನೆ. ಘಟನೆ ನಡೆದ ದಿನ ರಾತ್ರಿ 8 ಗಂಟೆ ಸುಮಾರಿನಲ್ಲಿ ಹರ್ಷನ ಮೊಬೈಲ್‍ಗೆ ಅಪರಿಚಿತ ಯುವತಿಯರಿಬ್ಬರು ಕರೆ ಮಾಡಿದ್ದಾರೆ. ತಮಗೆ ಸಹಾಯ ಮಾಡುವಂತೆಯೂ ಕೋರಿದ್ದಾರೆ. ಅದೇ ಯುವತಿಯರು ವೀಡಿಯೋ ಕಾಲ್ ಕೂಡ ಮಾಡಿದ್ದು, ನಾವು ನಿಮ್ಮ ಸ್ನೇಹಿತರು ಎಂದು ಹರ್ಷನಿಗೆ ಹೇಳಿದ್ದಾರೆ. ಆಗ ಆತ ನನಗೆ ನಿಮ್ಮ ಪರಿಚಯವೇ ಇಲ್ಲವಲ್ಲಾ ಎಂದು ಹೇಳಿ ಕರೆ ಕಟ್ ಮಾಡಿದರೂ, ಪದೇ ಪದೆ ಕರೆ ಮಾಡುತ್ತಲೇ ಇದ್ದರು ಎಂದು ಹರ್ಷನ ಸ್ನೇಹಿತ ಮಾಧ್ಯಮಗಳಿಗೆ ತಿಳಿಸಿದ್ದಾನೆ.

ನಂತರ ಹರ್ಷ ಸೇರಿದಂತೆ ನಾವು ನಾಲ್ವರು ಸ್ನೇಹಿತರು ನಡೆದುಕೊಂಡೇ ಹೋಗುತ್ತಿದ್ದೆವು. ಯುವತಿಯರಿಂದ ಬರುತ್ತಿದ್ದ ಕರೆಗಳಿಂದ ಹರ್ಷನಿಗೆ ಏನೋ ಸಂಶಯ ಉಂಟಾ ಗಿದೆ. ನಾವು ವಾಹನದಲ್ಲಿ ಬಂದಿದ್ದರೆ ಚೆನ್ನಾಗಿತ್ತೇನೋ ಎಂದು ಹೇಳಿದ ಹರ್ಷ, ವಾಹನ ತೆಗೆದುಕೊಂಡು ಬರು ವಂತೆ ನಮಗೆ ತಿಳಿಸಿದ. ಇನ್ನು ಸ್ವಲ್ಪ ದೂರವೇ ಹೋಗ ಬೇಕು, ನಡೆದುಕೊಂಡೇ ಹೋಗೋಣ ಎಂದಾಗ ಪರಿಸ್ಥಿತಿ ಸರಿ ಇಲ್ಲ ಎನ್ನಿಸುತ್ತಿದೆ. ವಾಹನ ತೆಗೆದುಕೊಂಡು ಬನ್ನಿ ಎಂದು ಹೇಳಿದ. ನಾವು ವಾಹನ ತೆಗೆದುಕೊಂಡು ಬರಲು ಹೋದಾಗ ಬ್ಯಾಟ್ ಹಿಡಿದುಕೊಂಡು ಹರ್ಷನನ್ನು ಅಟ್ಟಾಡಿ ಸುತ್ತಿದ್ದಾರೆ ಎಂದು ನಮ್ಮ ಮೊಬೈಲ್‍ಗೆ ಕರೆಬಂತು. ತಕ್ಷಣ ಸ್ಥಳಕ್ಕೆ ಬಂದು ನೋಡಿದಾಗ ಆತನ ಕೊಲೆಯಾಗಿತ್ತು ಎಂದು ಸ್ನೇಹಿತ ಮಾಧ್ಯಮಗಳಿಗೆ ತಿಳಿಸಿದ್ದಾನೆ. ಹರ್ಷನ ಲೊಕೇಷನ್ ತಿಳಿದುಕೊಳ್ಳುವ ಸಲುವಾಗಿ

ಹಂತಕರು ಯುವತಿಯರಿಂದ ಕರೆ ಮಾಡಿಸಿರಬಹುದು. ಅಲ್ಲದೇ ಸಹಾಯದ ನೆಪದಲ್ಲಿ ಯುವತಿಯರು ಘಟನಾ ಸ್ಥಳಕ್ಕೆ ಆತ ಬರುವಂತೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮೊದಲು ನಿಶಸ್ತ್ರಧಾರಿಗಳಾಗಿ ಸೆಕೆಂಡ್ ಹ್ಯಾಂಡ್ ಸ್ವಿಫ್ಟ್ ಕಾರಿನಲ್ಲಿ ಬಂದಿದ್ದ ಹಂತಕರು, ಸಹಚರರಿಗೆ ಕರೆ ಮಾಡಿ ಮಾರಕಾಸ್ತ್ರಗಳನ್ನು ತರುವಂತೆ ಹೇಳಿದ್ದಾರೆ. ಆಗ ಆಟೋದಲ್ಲಿ ಬಂದವರು ಕಾರಿನಲ್ಲಿದ್ದವರಿಗೆ ಮಾರಕಾಸ್ತ್ರ ಕೊಟ್ಟಿದ್ದಲ್ಲದೇ ತಾವೂ ಕೂಡ ಹರ್ಷನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.

ಶಿವಮೊಗ್ಗದ ಕಾರ್ ಡೀಲರ್‍ವೊಬ್ಬರ ಪುತ್ರನೇ ಸೆಕೆಂಡ್ ಹ್ಯಾಂಡ್ ಸ್ವಿಫ್ಟ್ ಕಾರ್ ಅನ್ನು ಚಾಲನೆ ಮಾಡಿಕೊಂಡು ಬಂದಿದ್ದ ಎಂದು ಹೇಳಲಾಗಿದ್ದು, ಆತ ಮತ್ತು ಹರ್ಷನ ನಡುವೆ ಯಾವುದೇ ರೀತಿಯ ವೈಷಮ್ಯ ಇರಲಿಲ್ಲ. ಹಂತಕರು ಕಾರ್ ಡೀಲರ್ ಪುತ್ರನನ್ನೂ ಕೂಡ ತಮ್ಮ ಕೃತ್ಯಕ್ಕೆ ಬಳಸಿಕೊಂಡಿರಬಹುದು ಎಂಬ ಮಾತುಗಳು ಕೇಳಿ ಬಂದಿವೆ.

ಮೂಲವೊಂದರ ಪ್ರಕಾರ ಕೃತ್ಯ ನಡೆದ ದಿನ ಬೆಳಗ್ಗೆಯಿಂದಲೇ ಹಂತಕರು ಹರ್ಷನ ಹತ್ಯೆಗಾಗಿ ಹೊಂಚು ಹಾಕಿದ್ದು, ಆತನ ಚಲನ-ವಲನದ ಬಗ್ಗೆ ನಿಗಾ ವಹಿಸಿದ್ದರು ಎಂದು ಹೇಳಲಾಗಿದೆ. ಹಂತಕರು ಕೆಲ ಗುಂಪುಗಳಾಗಿ ವಿಂಗಡಣೆಗೊಂಡು ಮೊಬೈಲ್ ಮೂಲಕ ಪರಸ್ಪರರ ಸಂಪರ್ಕ ಹೊಂದಿ ಹರ್ಷನ ಚಲನ-ವಲನದ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಂಡಿದ್ದರು. ಘಟನೆ ನಡೆದ ದಿನ ರಾತ್ರಿ ಹರ್ಷ ಮನೆಯಿಂದ ಹೊರಟಾಗಲೇ ಒಂದು ತಂಡ ಮತ್ತೊಂದು ತಂಡಕ್ಕೆ ಮಾಹಿತಿ ರವಾನಿಸಿತ್ತು. ಘಟನೆ ನಡೆದ ಸ್ಥಳದಲ್ಲಿ ಸ್ವಿಫ್ಟ್ ಕಾರಿನಲ್ಲಿ ಹೊಂಚು ಹಾಕಿ ಕುಳಿತಿದ್ದ ಹಂತಕರು, ಹರ್ಷನ ಬರುವಿಕೆಯನ್ನು ನೋಡುತ್ತಿದ್ದಂತೆಯೇ ಮಾರಕಾಸ್ತ್ರಗಳೊಂದಿಗೆ ಆಟೋದಲ್ಲಿ ಇದ್ದವರಿಗೆ ಮೊಬೈಲ್‍ನಲ್ಲಿ ಕರೆ ಮಾಡುವ ಮೂಲಕ ಸ್ಥಳಕ್ಕೆ ಕರೆಸಿಕೊಂಡು ಕೃತ್ಯ ಎಸಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Translate »