ಅವಿಶ್ವಾಸ ನೋಟಿಸ್ ಹಿಂಪಡೆದ ಸದಸ್ಯರು
ಮೈಸೂರು

ಅವಿಶ್ವಾಸ ನೋಟಿಸ್ ಹಿಂಪಡೆದ ಸದಸ್ಯರು

July 19, 2021

ತಿ.ನರಸೀಪುರ, ಜು.18(ಎಸ್‍ಕೆ)- ಪಟ್ಟಣದ ಪುರಸಭಾ ಅಧ್ಯಕ್ಷ-ಉಪಾಧ್ಯಕ್ಷರನ್ನು ಪದಚ್ಯುತಗೊಳಿಸಲು ಸಭೆ ಕರೆಯುವಂತೆ ಅಧ್ಯಕ್ಷರಿಗೆ ನೀಡಿದ್ದ ನೋಟಿಸ್ ಅನ್ನು ಕಾಲಾವಧಿ ಮೀರಿದ ಹಿನ್ನೆಲೆಯಲ್ಲಿ ಸದಸ್ಯರು ಹಿಂಪಡೆದಿದ್ದಾರೆ.

ಪಟ್ಟಣದ ಪುರಸಭೆ ಅಧ್ಯಕ್ಷ ಎನ್.ಸೋಮು ಹಾಗೂ ಉಪಾಧ್ಯಕ್ಷೆ ಪ್ರೇಮಾ ಮರಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು 18 ಮಂದಿ ಸದಸ್ಯರ ಸಹಿ ಇರುವ ನೋಟಿಸ್ ಅನ್ನು ಅಧ್ಯಕ್ಷರಿಗೆ ನೀಡಿ ಅವಿಶ್ವಾಸ ಮಂಡನೆ ಸಭೆ ಕರೆಯುವಂತೆ ಒತ್ತಾಯಿಸಿದ್ದರು.

ಇದಕ್ಕೆ ಅಧ್ಯಕ್ಷ ಸೋಮು ಕೋವಿಡ್ ಹಿನ್ನೆಲೆಯಲ್ಲಿ ಸಭೆ ಕರೆಯಲು ಸಾಧ್ಯವಿಲ್ಲ ಎಂದು ಸದಸ್ಯರಿಗೆ ನೋಟಿಸ್ ಮೂಲಕವೇ ತಿಳಿಸಿದ್ದರು. ನಂತರ ನಡೆದ ಬೆಳವಣಿಗೆ ಯಲ್ಲಿ ವಿರೋಧಿ ಗುಂಪಿನ ಸದಸ್ಯರು ಶತಾಯ ಗತಾಯ ಅವಿಶ್ವಾಸ ಮಂಡಿಸಿ ಇಬ್ಬರನ್ನು ಪದಚ್ಯುತಗೊಳಿಸಲು ಇನ್ನಿಲ್ಲದ ಕಾರ್ಯತಂತ್ರ ಹೆಣೆಯಲು ನಿರತ ರಾಗಿದ್ದರು. ಈ ನಡುವೆ ಮುಖ್ಯಾಧಿಕಾರಿ ಆರ್.ಅಶೋಕ್ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ವಿರೋಧಿ ಸದಸ್ಯರ ಗುಂಪಿಗೆ ಹಿನ್ನಡೆಯುಂಟಾಗಿತ್ತು.

ನಂತರ ಪ್ರಭಾರ ಮುಖ್ಯಾಧಿಕಾರಿ ಯಾಗಿ ಅಧಿಕಾರ ಸ್ವೀಕರಿಸಿದ ಲೋಕೇಶ್ವರಿ ಅವರ ಮೇಲೆ ಸಭೆ ಕರೆಯುವಂತೆ ಒತ್ತಡ ಹೇರಿದ ಹಿನ್ನೆಲೆಯಲ್ಲಿ ಅವರು ಚುನಾವಣೆ ನೀತಿ ನಿಯಮಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದ್ದರಿಂದ ಸಭೆ ಕರೆಯುವಂತೆ ನೀಡಿದ್ದ ನೋಟಿಸ್ ಅನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಕಳುಹಿಸಿ ಕೈ ತೊಳೆದುಕೊಂಡಿದ್ದರು. ಜಿಲ್ಲಾಧಿ ಕಾರಿಗಳ ಕಚೇರಿಯಿಂದ ಕಡತ ಚುನಾವಣೆ ವಿಭಾಗಕ್ಕೆ ಹೋಗಿ ಅಲ್ಲಿಂದ ಆದೇಶವಾಗಿ ಬರುವುದು ತಡವಾದ ಹಿನ್ನೆಲೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷರನ್ನು ಕೆಳಗಿಳಿಸಿಯೇ ಸಿದ್ಧ ಎಂದು ಜಾತಕ ಪಕ್ಷಿಗಳಂತೆ ಕಾದಿದ್ದ 18 ಮಂದಿ ಸದಸ್ಯರು ನಿರಾಶರಾಗಿದ್ದು, ಸಭೆ ಕರೆಯಲು ನಿಗದಿಗೊಳಿಸಿದ್ದ ಕಾಲಮಿತಿ ಮುಗಿದ ಹಿನ್ನೆಲೆಯಲ್ಲಿ ಅವಿಶ್ವಾಸ ಗೊತ್ತುವಳಿ ಸಭೆ ಕರೆಯುವಂತೆ ನೀಡಿದ್ದ ನೋಟಿಸ್ ಅನ್ನು ವಾಪಸ್ ಪಡೆದಿದ್ದಾರೆ.

ಪುರಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಸದಸ್ಯರು ಆಯ್ಕೆಯಾಗಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದ ಕೆಲ ಸದಸ್ಯರು ಸೇರಿದಂತೆ ಬಿಜೆಪಿ, ಜೆಡಿಎಸ್ ಹಾಗೂ ಪಕ್ಷೇತರ ಸದಸ್ಯರು ಅವಿಶ್ವಾಸ ಮಂಡನೆ ಸಭೆ ಕರೆಯುವ ಪತ್ರಕ್ಕೆ ಸಹಿ ಹಾಕಿದ್ದರು. ಸ್ವಪಕ್ಷದವರೇ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರನ್ನು ಪದಚ್ಯುತಗೊಳಿಸುವ ವಿಷಯ ತಿಳಿಯುತ್ತಿದ್ದಂತೆ ಕೆಂಡಾಮಂಡಲರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಸದಸ್ಯರನ್ನು ತಮ್ಮ ಮನೆಗೆ ಕರೆಸಿಕೊಂಡು ಎಚ್ಚರಿಕೆ ನೀಡಿದ್ದರು. ಮೊದಲು ಅವಿಶ್ವಾಸ ಮಂಡನೆ ಕರೆ ಯುವಂತೆ ನೀಡಿರುವ ನೋಟಿಸ್ ಅನ್ನು ವಾಪಸ್ ಪಡೆಯುವಂತೆಯೂ ಇಲ್ಲ ದಿದ್ದಲ್ಲಿ ಪಕ್ಷದಿಂದಲೇ ಉಚ್ಚಾಟಿ ಸುವುದಾಗಿ ಬೆದರಿಕೆ ಒಡ್ಡಿದ್ದರು. ಅಲ್ಲದೇ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್ ಪಕ್ಷದ ಸದಸ್ಯರಿಗೆ ಶೋಕಾಸ್ ನೋಟಿಸ್ ನೀಡಿದ್ದರು.

Translate »