ಸಚಿವ ಸಿ.ಟಿ.ರವಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸಂಸದ ತೇಜಸ್ವಿ ಸೂರ್ಯ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ
ಮೈಸೂರು

ಸಚಿವ ಸಿ.ಟಿ.ರವಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸಂಸದ ತೇಜಸ್ವಿ ಸೂರ್ಯ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ

September 27, 2020

ಬೆಂಗಳೂರು, ಸೆ.26(ಕೆಎಂಎಸ್)- ಪ್ರವಾ ಸೋದ್ಯಮ ಸಚಿವ ಸಿ.ಟಿ.ರವಿ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸದಸ್ಯ ತೇಜಸ್ವಿ ಸೂರ್ಯ ಅವರು, ರಾಷ್ಟ್ರೀಯ ಬಿಜೆಪಿಯ ಯುವ ಮೋರ್ಚಾದ ಅಧ್ಯಕ್ಷರಾಗಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು, ರಾಷ್ಟ್ರೀಯ ಬಿಜೆಪಿಯನ್ನು ಪುನಾರಚಿಸಿದ್ದು, ಕರ್ನಾಟಕಕ್ಕೆ ಎರಡು ದೊಡ್ಡ ಉಡುಗೊರೆ ಗಳನ್ನು ನೀಡಿದ್ದಾರೆ. ದಿ.ಅನಂತ್ ಕುಮಾರ್ ನಂತರ ರಾಷ್ಟ್ರೀಯ ಮಟ್ಟದಲ್ಲಿ ಇಂಥ ದೊಡ್ಡ ಹುದ್ದೆ ರಾಜ್ಯಕ್ಕೆ ದೊರೆತಿರಲಿಲ್ಲ. ಸಿ.ಟಿ.ರವಿ ಅವರಿಗೆ ಈ ಹುದ್ದೆಯ ಜತೆಗೆ ದಕ್ಷಿಣ ಭಾರತದ ಯಾವುದಾದರೂ ಒಂದು ರಾಜ್ಯದ ಉಸ್ತುವಾರಿ ವಹಿಸಲಿದ್ದಾರೆ. ಈಗಾಗಲೇ ತಮಿಳುನಾಡಿನಲ್ಲಿ ಚುನಾವಣಾ ಉಸ್ತುವಾರಿ ನೋಡಿಕೊಂಡಿದ್ದರು.

ರವಿ ಅವರಿಗೆ ರಾಷ್ಟ್ರಮಟ್ಟದಲ್ಲಿ ಇಂಥ ದೊಡ್ಡ ಹುದ್ದೆ ಸಿಕ್ಕಿರುವುದರಿಂದ ಪಕ್ಷ, ಸಚಿವ ಸ್ಥಾನದಲ್ಲಿ ಇವರನ್ನು ಮುಂದುವರೆಸುತ್ತದೆಯೋ ಅಥವಾ ಎರಡು ಹುದ್ದೆಗಳಲ್ಲಿ ಮುಂದುವರೆಯುವಂತೆ ಅವಕಾಶ ಮಾಡಿಕೊಡುತ್ತದೆಯೋ ಕಾದು ನೋಡಬೇಕು. ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಲೋಕಸಭೆ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 25+1 ಸ್ಥಾನಗಳನ್ನು ನೀಡಿ ಮತ್ತೆ ಪ್ರಧಾನಿ ನರೇಂದ್ರ ಮೋದಿಗೆ ಬೆಂಬಲ ಸೂಚಿಸಿತ್ತು. ಕರ್ನಾಟಕದಲ್ಲಿ ಪಕ್ಷವನ್ನು ಬಲಗೊಳಿಸುವ ಮತ್ತು ಹಳೇ ಮೈಸೂರು ಭಾಗದಲ್ಲಿ ಹಿಡಿತ ಸಾಧಿಸುವ ಉದ್ದೇಶದಿಂದ  ಒಕ್ಕಲಿಗ ಸಮುದಾಯಕ್ಕೆ ಸೇರಿದ ರವಿ ಅವರಿಗೆ ಈ ಮಹತ್ವದ ಹುದ್ದೆ ದೊರೆತಿದೆ ಎನ್ನಲಾಗಿದೆ.

 

Translate »