ಮೈಸೂರು, ಸೆ.26(ಆರ್‍ಕೆ)- ನಕಲಿ ವಿಶ್ವವಿದ್ಯಾನಿಲಯದ ಹೆಸರಲ್ಲಿ ಡಾಕ್ಟರೇಟ್ ಪದವಿ ನೀಡಿ, ಅಮಾಯಕರಿಂದ ಹಣ ವಸೂಲಿ ಮಾಡುತ್ತಿದ್ದ ದಂಧೆಯನ್ನು ಮೈಸೂರು ಪೊಲೀಸರು ಪತ್ತೆ ಹಚ್ಚಿದ್ದಾರೆ.
ತಮಗೆ ಬಂದ ಖಚಿತ ಮಾಹಿತಿ ಹಿನ್ನೆಲೆ ಕೂಡಲೇ ದಾಳಿ ನಡೆಸಿದ ಮೈಸೂರು ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಡಾ. ಎ.ಎನ್.ಪ್ರಕಾಶ್‍ಗೌಡ ನೇತೃತ್ವದ ಪೊಲೀಸರು, ಮೈಸೂರಿನ ಹುಣಸೂರು ರಸ್ತೆಯ ಖಾಸಗಿ ಹೋಟೆಲ್‍ವೊಂದರ ಸಭಾಂಗಣ ದಲ್ಲಿ ನಡೆಯುತ್ತಿದ್ದ ಡಾಕ್ಟರೇಟ್ ಪದವಿ ಪ್ರದಾನ ಸಮಾರಂಭವನ್ನು ನಿಲ್ಲಿಸಿ, ಆ ಸಂಬಂಧ ಮೂವರನ್ನು ವಶಕ್ಕೆ ಪಡೆದು ವಿಜಯನಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.
ಇಂದು ಬೆಳಿಗ್ಗೆ 10.30 ಗಂಟೆ ವೇಳೆಗೆ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಶ್ರೀ ಗಂಗಮ್ಮದೇವಿ ಶೆಟ್ಟಿ ಪ್ರೀತಂ ಟ್ರಸ್ಟ್, ನ್ಯಾಷನಲ್ ಹ್ಯೂಮನ್ ರೈಟ್ಸ್ ಪೀಸ್ ಕೌನ್ಸಿಲ್, ಪೀಸ್ ಆಫ್ ವಲ್ರ್ಡ್ ಹಾಗೂ ಇಂಟರ್‍ನ್ಯಾಷನಲ್ ಗ್ಲೋಬಲ್ ಪೀಸ್ ಯೂನಿವರ್ಸಿಟಿ ಎಂಬ ಬ್ಯಾನರ್ ಅಡಿ ಗೌರವ ಡಾಕ್ಟರೇಟ್ ಪದವಿ ಪ್ರದಾನ ಹಾಗೂ ವಲ್ರ್ಡ್ ಪೀಸ್ ಎಂಬ ಅಂತಾರಾಷ್ಟ್ರೀಯ ಸಮ್ಮೇಳನ ನಡೆಯುತ್ತಿತ್ತು. ಸಮಾರಂಭದಲ್ಲಿ ಹರಿಹರ ಶಾಸಕ ರಾಮಪ್ಪ ಅವರು ಅತಿಥಿಗಳಾಗಿ ಪಾಲ್ಗೊಂಡಿದ್ದರು. ಸುಮಾರು 150ಕ್ಕೂ ಹೆಚ್ಚು ಮಂದಿ ಯುವಕರು ಉಪಸ್ಥಿತರಿದ್ದು, ಪದವಿ ಪ್ರಮಾಣ ಪತ್ರ ಸ್ವೀಕರಿಸಲು ಸಜ್ಜಾಗಿದ್ದರು. ದಾಳಿ ನಡೆಸಿದ ಡಾ. ಪ್ರಕಾಶ್‍ಗೌಡ ನೇತೃತ್ವದ ಪೊಲೀಸರು ವಿಶ್ವವಿದ್ಯಾಲಯದ ನೈಜತೆ ಬಗ್ಗೆ ಪ್ರಶ್ನಿಸಿದಾಗ ಕಾರ್ಯಕ್ರಮದ ನೇತೃತ್ವ ವಹಿಸಿದವರು ಉತ್ತರಿಸದೆ ತಡಬಡಾಯಿಸಿ ಕಾಲ್ಕೀಳಲು ಮುಂದಾದರು. ನಕಲಿ ವಿಶ್ವವಿದ್ಯಾಲಯದ ಹೆಸರಲ್ಲಿ ಅಮಾಯಕ ರಿಂದ ಹಣ ವಸೂಲಿ ಮಾಡುವ ಜಾಲವಿದು ಎಂಬುದನ್ನು ಡಾ. ಪ್ರಕಾಶ್‍ಗೌಡ ಅವರು ಶಾಸಕ ರಾಮಪ್ಪ ಅವರಿಗೆ ಮನವರಿಕೆ ಮಾಡಿ ಅವರನ್ನು ಅಲ್ಲಿಂದ ಕಳುಹಿಸಿಕೊಟ್ಟರು. ಅಷ್ಟರಲ್ಲಿ ಸಮಾರಂಭದ ವ್ಯವಸ್ಥಾಪಕರು, ವೇದಿಕೆ ಮೇಲಿದ್ದ ಆಹ್ವಾನಿತರು ಹಾಗೂ ಪದವಿ ಸ್ವೀಕರಿಸಲು ಬಂದಿದ್ದ ಯುವಕರೆಲ್ಲರೂ ಸಭಾಂಗಣದಿಂದ ಹೊರ ನಡೆದರು. ಹಾಗಾಗಿ ಕಾರ್ಯಕ್ರಮ ರದ್ದಾಯಿತು. ಈ ಜಾಲದಲ್ಲಿ ಪಾಲ್ಗೊಂ ಡಿದ್ದ ಮೂವರನ್ನು ವಶಕ್ಕೆ ಪಡೆದ ಪೊಲೀಸರು ವಿಜಯನಗರ ಠಾಣೆಗೆ ಕರೆದೊಯ್ದು ತೀವ್ರ ವಿಚಾರಣೆ
ನಡೆಸುತ್ತಿದ್ದಾರೆ. ಇಂಟರ್‍ನ್ಯಾಷನಲ್ ಗ್ಲೋಬಲ್ ಪೀಸ್ ಯೂನಿರ್ವಸಿಟಿ ಎಂಬ ಹೆಸರಿನಲ್ಲಿ ಸಿದ್ದಪಡಿಸಿಕೊಂಡಿದ್ದ ಬೋಗಸ್ ಡಾಕ್ಟರೇಟ್ ಪದವಿ ಪ್ರಮಾಣ ಪತ್ರಗಳು, ಕಾರ್ಯಕ್ರಮದ ವೇದಿಕೆಯಲ್ಲಿ ಹಾಕಿದ್ದ ಬ್ಯಾನರ್ ಅನ್ನು ವಶಪಡಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿ ದ್ದಾರೆ. ಮೈಸೂರು, ಚಾಮರಾಜನಗರ, ಮಂಡ್ಯ, ಕೊಡಗು, ಹಾಸನ ಸೇರಿದಂತೆ ಬೇರೆಬೇರೆ ಜಿಲ್ಲೆಗಳ ಯುವಕರನ್ನು ಸೆಳೆದು, ಗೌರವ ಡಾಕ್ಟರೇಟ್ ಕೊಡಿಸುವುದಾಗಿ ಅವರಿಂದ 25,000 ರೂ., 50,000 ರೂ. ವರೆಗೆ ಹಣ ವಸೂಲಿ ಮಾಡಿ ವಿವಿಧ ನಗರ ಪ್ರದೇಶಗಳ ಹೋಟೆಲ್ ಗಳಲ್ಲಿ ಸಮಾರಂಭವನ್ನು ಏರ್ಪಡಿಸಿ ಅವರಿಗೆ ನಕಲಿ ಡಾಕ್ಟರೇಟ್ ಪದವಿ ಸರ್ಟಿಫಿಕೇಟ್ ನೀಡುವ ಮೂಲಕ ವಂಚನೆ ಮಾಡುತ್ತಿದ್ದರು ಎಂಬುದು ಪ್ರಾಥಮಿಕ ಹಂತದ ವಿಚಾರಣೆ ಯಲ್ಲಿ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗೌರವ ಡಾಕ್ಟರೇಟ್ ಪದವಿ ಆಸೆಗೆ ಬಿದ್ದು ಅಮಾಯಕರು ಲಕ್ಷಾಂತರ ರೂ. ಕಳೆದುಕೊಳ್ಳುತ್ತಿದ್ದಾರೆ. ಏಜೆಂಟ್‍ಗಳ ಮೂಲಕ ಗಾಳ ಹಾಕಿ ಹಣ ವಸೂಲಿ ಮಾಡುವುದು ಈ ಜಾಲದ ಪ್ರವೃತ್ತಿಯಾಗಿದ್ದು, ಈಗಾಗಲೇ ಕರ್ನಾಟಕ ರಾಜ್ಯಾದ್ಯಂತ ಸಾವಿರಾರು ಮಂದಿಯಿಂದ ಲಕ್ಷಾಂತರ ರೂ. ವಸೂಲಿ ಮಾಡಿರುವ ಬಗ್ಗೆ ಶಂಕೆ ಇದೆ. ಈ ಸಂಬಂಧ ವಿಜಯನಗರ ಠಾಣೆ ಇನ್‍ಸ್ಪೆಕ್ಟರ್ ಬಾಲಕೃಷ್ಣ, ಪ್ರಕರಣ ದಾಖಲಿಸಿಕೊಂಡಿದ್ದು, ವಶಕ್ಕೆ ಪಡೆದಿರುವ ಮೂವರಿಂದ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ ಎಂದು ಡಿಸಿಪಿ ಪ್ರಕಾಶ್‍ಗೌಡ `ಮೈಸೂರು ಮಿತ್ರ’ನಿಗೆ ತಿಳಿಸಿದರು.
ಅಮಾಯಕರೇ ವಂಚನೆ ಬಲೆಗೆ: ಹಣವಿರುವ ಅಮಾಯಕರು, ಮುಗ್ಧರನ್ನೇ ಗುರಿ ಮಾಡಿಕೊಂಡು ಈ ಜಾಲ ಬಲೆ ಬೀಸಿ ಅವರಿಗೆ ಗೌರವ ಡಾಕ್ಟರೇಟ್ ನೀಡುವ ಆಸೆ ತೋರಿಸಿ, ವಂಚನೆ ಮಾಡುತ್ತಾ ಬಂದಿದೆ. ಈಗಾಗಲೇ ಸಾವಿರಾರು ಮಂದಿ ಈ ವಂಚನೆ ಜಾಲಕ್ಕೆ ಬಿದ್ದಿದ್ದಾರೆ. ಹಣನೀಡಿ ಗೌರವ ಡಾಕ್ಟರೇಟ್ ಪಡೆದಿದ್ದಾರೆ. ಇಂತಹವುಗಳನ್ನು ತಮ್ಮ ಭಾವಚಿತ್ರದೊಂದಿಗೆ ಪತ್ರಿಕೆಗಳಲ್ಲೂ ನೀಡಿ, ಪ್ರಚಾರ ಪಡೆದಿರುವುದು ಉಂಟು.