ಪ್ರತಿ ತಾಲೂಕಿನಲ್ಲೂ ಕೊರೊನಾ ಸಹಾಯವಾಣಿ ಸ್ಥಾಪನೆಗೆ ಸಚಿವ ಸೋಮಣ್ಣ ಸೂಚನೆ
ಕೊಡಗು

ಪ್ರತಿ ತಾಲೂಕಿನಲ್ಲೂ ಕೊರೊನಾ ಸಹಾಯವಾಣಿ ಸ್ಥಾಪನೆಗೆ ಸಚಿವ ಸೋಮಣ್ಣ ಸೂಚನೆ

April 24, 2021

ಮಡಿಕೇರಿ, ಏ.23- ಕೊಡಗಿನಲ್ಲಿ ಕೊರೊನಾ ನಿಯಂತ್ರಣಕ್ಕೆ 5 ತಾಲೂಕು ಗಳಲ್ಲಿಯೂ ಸಹಾಯವಾಣಿ ಪ್ರಾರಂಭಿಸಲು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರಿಗೆ ಸೂಚನೆ ನೀಡಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣ ಕುರಿತು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಅವರು, ಕಳೆದ ಬಾರಿಯಂತೆ ಈ ಬಾರಿಯೂ ಎಲ್ಲಾ ಇಲಾಖಾಧಿಕಾರಿಗಳು, ಸಿಬ್ಬಂದಿ ಸೂಕ್ತ ಸಮನ್ವಯತೆ ಮತ್ತು ಸಹಕಾರ ನೀಡುವ ಮೂಲಕ ಕೊರೊನಾ ನಿಯಂತ್ರಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಸಲಹೆ ನೀಡಿದರು. ಉಪ ವಿಭಾಗಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ 32 ಇಲಾಖೆಗಳ ಅಧಿಕಾರಿಗಳಿಗೆ ಪ್ರತ್ಯೇಕ ಜವಾಬ್ದಾರಿ ನೀಡಬೇಕು ಎಂದು ಸಚಿವರು ಸೂಚಿಸಿದರು. ಬೇರೆ ಜಿಲ್ಲೆಗಳಂತೆ ಕೊಡಗು ಜಿಲ್ಲೆಯಲ್ಲಿ ಆಕ್ಸಿಜನ್‍ನ ಕೊರತೆ ಇಲ್ಲ. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಈಗಾಗಲೇ 13 ಸಾವಿರ ಲೀಟರ್ ಸಾಮಥ್ರ್ಯದ ಬೃಹತ್ ಟ್ಯಾಂಕನ್ನು ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗಲಿದ್ದು, ಎಲ್ಲಾ ಅಗತ್ಯ ಕ್ರಮಗಳನ್ನೂ ಕೈಗೊಳ್ಳಬೇಕು. ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗಬಾರದು. ಸರಕಾರ ವ್ಯಾಕ್ಸಿನ್, ಔಷಧಿಗಳನ್ನು ಪೂರೈಸಲಿದ್ದು, ಅಧಿಕಾರಿಗಳು ಸಮನ್ವಯತೆ ಸಾಧಿಸಿ ಕೊರೊನಾ ನಿಯಂತ್ರಿಸಲು ಶ್ರಮಿಸಬೇಕು ಎಂದು ಸೂಚಿಸಿದರು. ಜಿಲ್ಲೆಯ ಎಲ್ಲಾ ಚೆಕ್ ಪೋಸ್ಟ್‍ಗಳಲ್ಲಿ ಹೊರ ರಾಜ್ಯಗಳಿಂದ ಬರುವವರು ಕಡ್ಡಾಯವಾಗಿ ಕೋವಿಡ್ ನೆಗೆಟೀವ್ ವರದಿ ತರಬೇಕಿದೆ. ಈ ಬಗ್ಗೆ ಪೊಲೀಸ್ ಇಲಾಖೆ ನಿಘಾ ವಹಿಸುವಂತೆ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸಚಿವ ಸೋಮಣ್ಣ ಸೂಚನೆ ನೀಡಿದರು. ನೈಟ್ ಕಫ್ರ್ಯೂ, ವೀಕೆಂಡ್ ಕಫ್ರ್ಯೂ ಸಂದರ್ಭ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಹೇಳಿದರು.

Translate »