ಅಪ್ರಾಪ್ತ ಬಾಲಕಿ ಅತ್ಯಾಚಾರಕ್ಕೆ ಮರಣದಂಡನೆ ಸುಗ್ರೀವಾಜ್ಞೆ ಹೊರಡಿಸಿದ 48 ಗಂಟೆಯಲ್ಲಿ ಮೈಸೂರಲ್ಲಿ ಬಾಲಕಿ ಬಲಿ
ಮೈಸೂರು

ಅಪ್ರಾಪ್ತ ಬಾಲಕಿ ಅತ್ಯಾಚಾರಕ್ಕೆ ಮರಣದಂಡನೆ ಸುಗ್ರೀವಾಜ್ಞೆ ಹೊರಡಿಸಿದ 48 ಗಂಟೆಯಲ್ಲಿ ಮೈಸೂರಲ್ಲಿ ಬಾಲಕಿ ಬಲಿ

April 24, 2018

ಮೈಸೂರು: ಅಪ್ರಾಪ್ತರ ಮೇಲೆ ಅತ್ಯಾಚಾರ ನಡೆಸುವವರಿಗೆ ಮರಣದಂಡನೆ ವಿಧಿಸುವ ಪೊಕ್ಸೋ ಕಾಯ್ದೆ ತಿದ್ದುಪಡಿಗೆ ಕೇಂದ್ರದಿಂದ ಸುಗ್ರಿವಾಜ್ಞೆ ಘೋಷಣೆಗೊಂಡ 48 ಗಂಟೆಯೊಳಗೆ ಮೈಸೂರಿನಲ್ಲಿ ಅತ್ಯಾಚಾರ ಪ್ರಕರಣ ನಡೆದಿದ್ದು, ಇದಕ್ಕೆ 9 ವರ್ಷದ ಅಪ್ರಾಪ್ತೆ ಬಲಿಯಾಗಿದ್ದಾಳೆ.

ಈ ಘಟನೆ ಕೆಸರೆ ಬಡಾವಣೆಯಲ್ಲಿ ನಡೆದಿದ್ದು, ಇಲ್ಲಿನ ಶಾಲೆಯೊಂದರಲ್ಲಿ 4ನೇತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಬಲಿಯಾಗಿದ್ದಾಳೆ.

ಘಟನೆ ವಿವರ: ಶಾಲೆಗೆ ರಜೆಯಿದ್ದ ಹಿನ್ನೆಲೆಯಲ್ಲಿ ಭಾನುವಾರ ಸ್ನೇಹಿತೆಯರೊಂದಿಗೆ ಆಟವಾಡಲು ತೆರಳಿದ್ದ ಬಾಲಕಿ, ಸ್ವಲ್ಪ ಸಮಯದ ನಂತರ ಮನೆಗೆ ಬಂದಿದ್ದಾಳೆ. ಮರುದಿನ ಬೆಳಿಗ್ಗೆ ತಲೆ ನೋಯುತ್ತಿದೆ ಎಂದು ಪೋಷಕರಿಗೆ ತಿಳಿಸಿದ್ದಾಳೆ. ಪೋಷಕರು ತಲೆನೋವಿನ ಮಾತ್ರೆ ನುಂಗಿಸಿ ಸುಮ್ಮನಾಗಿದ್ದಾರೆ. ಮಾತ್ರೆ ನುಂಗಿದ ಕೆಲವೇ ನಿಮಿಷದಲ್ಲಿ ವಾಂತಿ ಕಾಣ ಸಿಕೊಂಡಿದೆ. ಇದರಿಂದ ಗಾಬರಿಗೊಂಡ ಪೋಷಕರು ಕೂಡಲೇ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ಆಕೆಯ ಮೇಲೆ ಅತ್ಯಾಚಾರ ಎಸಗಿರುವುದಾಗಿ ತಿಳಿಸಿ, ಕೂಡಲೇ ಕೆ.ಆರ್.ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದ್ದಾರೆ.

ನಂತರ ಕೆ.ಆರ್.ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಪರೀಕ್ಷಿಸಿದ ವೈದ್ಯರು ತೀವ್ರವಾಗಿ ರಕ್ತಸ್ರಾವವಾಗಿದ್ದು, ನಮ್ಮಲ್ಲಿ ಹೆಚ್ಚಿನ ಸೌಲಭ್ಯಗಳ ಕೊರತೆಯಿದೆ. ಹಾಗಾಗಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುವಂತೆ ತಿಳಿಸಿದ್ದಾರೆ. ಬೇರೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಕೆಯನ್ನು ಪರೀಕ್ಷಿಸಿ ವೈದ್ಯರು, ಮಾರ್ಗಮಧ್ಯೆ ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದಾರೆ. ಈ ಸಂಬಂಧ ಎನ್.ಆರ್.ಠಾಣೆಯಲ್ಲಿ ದೂರು ದಾಖಲಾಗಿದೆ.

Translate »