ನಾಪತ್ತೆಯಾಗಿದ್ದ ಮಳವಳ್ಳಿ ವಕೀಲೆ ಹತ್ಯೆ
ಮೈಸೂರು

ನಾಪತ್ತೆಯಾಗಿದ್ದ ಮಳವಳ್ಳಿ ವಕೀಲೆ ಹತ್ಯೆ

March 8, 2019

ಮಳವಳ್ಳಿ: 10 ದಿನಗಳ ಹಿಂದೆ ನಾಪತ್ತೆಯಾಗಿದ್ದ ಮಳವಳ್ಳಿ ವಕೀಲೆಯ ಮೃತದೇಹ ತಾಲೂಕಿನ ತಳಗವಾದಿ ಗ್ರಾಮದ ಜಮೀನೊಂದ ರಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಳವಳ್ಳಿ ಗ್ರಾಮಾಂತರ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮಳವಳ್ಳಿಯ ಜೆಎಂಎಫ್‍ಸಿ ನ್ಯಾಯಾ ಲಯದಲ್ಲಿ ವಕೀಲೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ವಿ.ಮಾದಲಾಂಬಿಕ (40) ಹತ್ಯೆಗೊಳಗಾದವರಾಗಿದ್ದು, ಇವರು ಫೆ.25ರಂದು ಸಂಜೆ 6 ಗಂಟೆ ಸುಮಾರಿನಲ್ಲಿ ತಳಗವಾದಿ ಗ್ರಾಮಕ್ಕೆ ಆಟೋದಲ್ಲಿ ತೆರಳಿದ್ದಾರೆ. ಅಲ್ಲಿ ಅಂಗಡಿಯೊಂದರ ಬಳಿ ಇದ್ದ ಅವರ ಪುತ್ರಿ ಭೂಮಿಕಾ ಜೊತೆ ಅವರು ಮಾತನಾಡುತ್ತಿರುವಾಗಲೇ ಮಾದಲಾಂಬಿಕ ಅವರ ಮೊಬೈಲ್‍ಗೆ ಕರೆಯೊಂದು ಬಂದಿದ್ದು, ತಾನು ಮಳವಳ್ಳಿಗೆ ತೆರಳುತ್ತಿದ್ದೇನೆ ಎಂದು ಮಗಳಿಗೆ ತಿಳಿಸಿ ಅವರು ಬೇರೊಂದು ಆಟೋ ಹತ್ತಿ ತೆರಳಿದ್ದಾರೆ.

ಆನಂತರ ಅವರು ಮನೆಗೆ ವಾಪಸ್ಸಾಗದ ಹಿನ್ನೆಲೆಯಲ್ಲಿ ಅವರ ಸಹೋದರಿ ರುದ್ರಮ್ಮ ಅವರು ಫೆ.27ರಂದು ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾದಲಾಂಬಿಕ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ಈ ನಡುವೆ ಬುಧವಾರ ಬೆಳಿಗ್ಗೆ ತಳಗವಾದಿ ಗ್ರಾಮದ ಚಂದ್ರು ಎಂಬುವರ ಜಮೀನಿನಲ್ಲಿ ಮಾದಲಾಂಬಿಕ ಅವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರು ಫೆ.25ರಂದು ಮಳವಳ್ಳಿಗೆ ತೆರಳುವುದಾಗಿ ಆಟೋ ಹತ್ತಿ ಹೋದ ಸಮಯದಲ್ಲೇ ಹತ್ಯೆ ನಡೆದಿರಬಹುದು ಎಂದು ಅವರ ಸಹೋದರಿ ಸಂಶಯ ವ್ಯಕ್ತಪಡಿಸಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ವಕೀಲೆ ಮಾದಲಾಂಬಿಕ ಅವರು ಮುಡುಕುತೊರೆ ಬಳಿ ಇರುವ ಹೊಸ ಹೆಮ್ಮಿಗೆ ಗ್ರಾಮದ ಶಶಿಧರ್ ಎಂಬುವರನ್ನು ಮದುವೆಯಾಗಿದ್ದು, ಕಳೆದ 10 ವರ್ಷದ ಹಿಂದೆಯೇ ಅವರು ಗಂಡನನ್ನು ತೊರೆದು ಮಾದಹಳ್ಳಿ ಗ್ರಾಮದಲ್ಲಿ ವಾಸವಿದ್ದು, ಮಳವಳ್ಳಿಯಲ್ಲಿ ವಕೀಲಿ ವೃತ್ತಿ ನಡೆಸುತ್ತಿದ್ದರು ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‍ಪೆಕ್ಟರ್ ಧರ್ಮೇಂದ್ರ, ಸಬ್ ಇನ್ಸ್‍ಪೆಕ್ಟರ್ ಆನಂದ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಕೀಲೆ ಹತ್ಯೆ ಸಂಬಂಧ ಪೊಲೀಸರು ಈಗಾಗಲೇ ಕೆಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Translate »