ಅಮೇಥಿಯಿಂದ ರಾಹುಲ್, ರಾಯ್‍ಬರೇಲಿಯಿಂದ ಸೋನಿಯಾ ಸ್ಪರ್ಧೆ
ಮೈಸೂರು

ಅಮೇಥಿಯಿಂದ ರಾಹುಲ್, ರಾಯ್‍ಬರೇಲಿಯಿಂದ ಸೋನಿಯಾ ಸ್ಪರ್ಧೆ

March 8, 2019

ನವದೆಹಲಿ: ಮುಂಬರುವ 17ನೇ ಲೋಕ ಸಭಾ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಕಾಂಗ್ರೆಸ್ ಪ್ರಧಾನ ಕಚೇರಿಯಿಂದ ಗುರುವಾರ ರಾತ್ರಿ ಹೊರಬಿದ್ದಿದ್ದು, ಉತ್ತರ ಪ್ರದೇಶದ ಅಮೇಥಿ ಕ್ಷೇತ್ರದಿಂದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ, ರಾಯ್‍ಬರೇಲಿ ಕ್ಷೇತ್ರದಿಂದ ಸೋನಿಯಾ ಗಾಂಧಿ ಅವರು ಸ್ಪರ್ಧಿಸುತ್ತಿದ್ದಾರೆ.

ಮೊದಲ ಪಟ್ಟಿಯಲ್ಲಿ 15 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಲಾಗಿದ್ದು, ರಾಷ್ಟ್ರ ರಾಜಕಾರಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸುವ ಉತ್ತರ ಪ್ರದೇಶ ರಾಜ್ಯದ 11 ಕ್ಷೇತ್ರಗಳು, ಬಿಜೆಪಿ ಪ್ರಾಬಲ್ಯದ ರಾಜ್ಯವಾದ ಗುಜರಾತ್‍ನ 4 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಖೈರುಗೊಳಿಸಲಾಗಿದೆ.

ಒಂದು ಕಾಲದಲ್ಲಿ ಕಾಂಗ್ರೆಸ್ ಪಾಲಿಗೆ ದೆಹಲಿ ಗದ್ದುಗೆಗೆ ಪ್ರವೇಶ ದ್ವಾರವೆನಿಸಿದ್ದ, ಸದ್ಯ ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ ರಾಜ್ಯದ ರಾಯ್‍ಬರೇಲಿ ಕ್ಷೇತ್ರದಲ್ಲಿ ಸೋನಿಯಾ ಗಾಂಧಿ, ಅಮೇಥಿಯಲ್ಲಿ ರಾಹುಲ್ ಗಾಂಧಿ, ಫರೂಖಾಬಾದ್‍ನಲ್ಲಿ ಸಲ್ಮಾನ್ ಖುರ್ಷಿದ್, ಸಹರಾನ್ ಪುರದಲ್ಲಿ ಇಮ್ರಾನ್ ಇಕ್ಬಾಲ್ ಶೇರ್ವಾನಿ, ಧೌರಾಹ್ರಾ ದಲ್ಲಿ ಜಿತಿನ್ ಪ್ರಸಾದ್, ಉನ್ನಾವ್‍ನಲ್ಲಿ ಶ್ರೀಮತಿ ಅನ್ನು ಟಂಡನ್, ಅಕ್ಬರ್‍ಪುರದಲ್ಲಿ ರಾಜರಾಮ್ ಪಾಲ್, ಜಲನ್ (ಎಸ್‍ಸಿ ಮೀಸಲು) ಕ್ಷೇತ್ರದಲ್ಲಿ ಬ್ರಿಜ್ ಲಾಲ್ ಖಾಬ್ರಿ, ಫೈಜಾಬಾದ್‍ನಲ್ಲಿ ನಿರ್ಮಲ್ ಖತ್ರಿ ಮತ್ತು ಕುಶಿನಗರ ಕ್ಷೇತ್ರದಲ್ಲಿ ಆರ್.ಪಿ.ಎನ್.ಸಿಂಗ್‍ಗೆ ಟಿಕೆಟ್ ನೀಡಲಾಗಿದೆ.
ಗುಜರಾತ್‍ನ ಅಹಮದಾಬಾದ್ ಪಶ್ಚಿಮ (ಎಸ್‍ಸಿ ಮೀಸಲು) ಕ್ಷೇತ್ರಕ್ಕೆ ರಾಜು ಪರಮಾರ್, ಆನಂದ್ ನಗರಕ್ಕೆ ಭರತ್ ಸಿಂಗ್ ಎಂ.ಸೋಲಂಕಿ, ವಡೋದರಾಕ್ಕೆ ಪ್ರಶಾಂತ್ ಪಟೇಲ್ ಮತ್ತು ಛೋಟಾ ಉದಯ್‍ಪುರ (ಎಸ್‍ಟಿ) ಕ್ಷೇತ್ರಕ್ಕೆ ರಂಜಿತ್ ಮೋಹನ್‍ಸಿನ್ಹ ರಥ್ವಾ ಅವರ ಹೆಸರು ಪ್ರಕಟವಾಗಿದೆ. ಕಾಂಗ್ರೆಸ್‍ನ ಕೇಂದ್ರ ಚುನಾವಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ಶುಕ್ರವಾರ ರಾತ್ರಿ ಮೊದಲ ಪಟ್ಟಿ ಟ್ವೀಟ್ ಮಾಡಿದ್ದಾರೆ.

Translate »