ಮುಡಾ ಅಧ್ಯಕ್ಷರಾಗಿ ಹೆಚ್.ಎನ್.ವಿಜಯ್ ಅಧಿಕಾರ ಸ್ವೀಕಾರ
ಮೈಸೂರು

ಮುಡಾ ಅಧ್ಯಕ್ಷರಾಗಿ ಹೆಚ್.ಎನ್.ವಿಜಯ್ ಅಧಿಕಾರ ಸ್ವೀಕಾರ

March 8, 2019

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಹೆಚ್.ಎನ್.ವಿಜಯ್ ಅಧಿಕಾರ ವಹಿಸಿಕೊಂಡರು.

ಕಚೇರಿ ಸಭಾಂಗಣದಲ್ಲಿ ಗುರುವಾರ ಸಂಜೆ ಮುಡಾ ಆಯುಕ್ತ ಕಾಂತರಾಜ್ ಅವರಿಂದ ಹೂ ಗುಚ್ಛ ಸ್ವೀಕರಿಸಿ, ಕಡತಗಳಿಗೆ ಸಹಿ ಹಾಕುವ ಮೂಲಕ ವಿಧ್ಯುಕ್ತವಾಗಿ ಅಧಿಕಾರ ವಹಿಸಿಕೊಂಡರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕ ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಟಿ.ದೇವೇಗೌಡ ಅವರ ಸಹಕಾರದಿಂದ ಉನ್ನತ ಹುದ್ದೆ ದೊರೆತಿದ್ದು, ಅವರಿಗೆ ಅಭಾರಿಯಾಗಿರುತ್ತೇನೆ. ಅಧಿಕಾರಿಗಳು ಹಾಗೂ ಸದಸ್ಯರ ಸಲಹೆ ಮತ್ತು ಸೂಚನೆಗಳೊಂದಿಗೆ ಎಲ್ಲರನ್ನೂ ಒಗ್ಗೂಡಿಸಿ ಮುಂದಿನ ಕಾರ್ಯಚಟುವಟಿಕೆಗಳನ್ನು ಕೈಗೊಳ್ಳುತ್ತೇನೆ ಎಂದರು. ಈಗಾಗಲೇ ಮುಡಾ ವಾರ್ಷಿಕ ಬಜೆಟ್ ಮಂಡನೆಯಾಗಿದ್ದು, ನಗರದ ಅಭಿವೃದ್ಧಿಗೆ  ಕೈಗೊಂಡಿರುವ ಯೋಜನೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಹಂತ ಹಂತವಾಗಿ ಕೈಗೊಳ್ಳಲಾಗುವುದು. ಮೈಸೂರಿನ ಜನರ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ಸಾರ್ವಜನಿಕರು ನನ್ನ ಮೇಲೆ ಸಂಪೂರ್ಣ ನಂಬಿಕೆ ಇಡಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಾನು ಮೈಸೂರಿನ ಕೆ.ಆರ್.ನಗರ ತಾಲೂಕಿನ ಹರದನಹಳ್ಳಿಯಿಂದ ಬಂದಿದ್ದೇನೆ. ಬಡವ ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲಕರವಾದ ಯೋಜನೆಗಳನ್ನು ರೂಪಿಸುತ್ತೇನೆ ಎಂದು ನುಡಿದರು. ಕಳೆದ 13 ವರ್ಷಗಳಿಂದ ಜೆಡಿಎಸ್ ಕಾರ್ಯಕರ್ತನಾಗಿ ಸೇವೆ ಸಲ್ಲಿಸಿದ್ದು, ಜಿಲ್ಲಾ ಪಂಚಾಯ್ತಿ ಸದಸ್ಯನಾಗಿ ಕೆಲಸ ಮಾಡಿದ ಅನುಭವ ಕೂಡ ನನಗಿದೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಒಗ್ಗಟ್ಟಾಗಿ ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತೇವೆ ಎಂದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧೀಕ್ಷಕ ಇಂಜಿನಿಯರ್ ಸುರೇಶ್ ಬಾಬು, ನಗರ ಯೋಜನಾ ಸದಸ್ಯ ಗಿರೀಶ್, ಮುಖ್ಯ ಲೆಕ್ಕಾಧಿಕಾರಿ ಮುತ್ತಾ, ವಿಶೇಷ ಭೂ ಸ್ವಾಧೀನಾಧಿಕಾರಿ ವೈ.ಎನ್.ಚಂದ್ರಮ್ಮ, ಮುಡಾ ಸದಸ್ಯರೂ ಆದ ಕಾರ್ಪೊರೇಟರ್ ಎಸ್.ಬಿ.ಎಂ.ಮಂಜು, ಜೆಡಿಎಸ್ ನಗರ ಉಪಾಧ್ಯಕ್ಷ ಮಹದೇವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾಲ್ಕನ್ ಬೋರೇಗೌಡ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.

 

Translate »