ದೀಪಾವಳಿಗೆ ಮೋದಿ ಸರ್ಕಾರದ ಗಿಫ್ಟ್ ರಾಜ್ಯದಲ್ಲಿ ಯುವಕರಿಗೆ ಉದ್ಯೋಗದ ನೇಮಕಾತಿ ಪತ್ರ ವಿತರಿಸಿದ ಜೋಶಿ
News

ದೀಪಾವಳಿಗೆ ಮೋದಿ ಸರ್ಕಾರದ ಗಿಫ್ಟ್ ರಾಜ್ಯದಲ್ಲಿ ಯುವಕರಿಗೆ ಉದ್ಯೋಗದ ನೇಮಕಾತಿ ಪತ್ರ ವಿತರಿಸಿದ ಜೋಶಿ

October 23, 2022

ಬೆಂಗಳೂರು: ದೀಪಾವಳಿ ಹಬ್ಬಕ್ಕೆ ದೇಶದ ಯುವಕರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬಂಪರ್ ಕೊಡುಗೆ ನೀಡಿದ್ದಾರೆ. ವರ್ಚುವಲ್ ಮೂಲಕ ಇಂದು 75 ಸಾವಿರ ಯುವಕರಿಗೆ ಉದ್ಯೋಗದ ನೇಮಕಾತಿ ಪತ್ರ ವಿತರಿಸಿದ್ದಾರೆ. ಇದರ ಭಾಗವಾಗಿ ಬೆಂಗಳೂರಿನಲ್ಲೂ ಇಂದು ಶನಿವಾರ ರೋಜ್‍ಗಾರ್ ಮೇಳ ನಡೆಯಿತು. ಸರ್ಕಾರದ ವಿವಿಧ ಹುದ್ದೆಗಳಿಗೆ ಆಯ್ಕೆಯಾದ ಯುವಕರಿಗೆ ಕೇಂದ್ರ ಸಂಸದೀಯ ಮತ್ತು ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ನೇಮಕಾತಿ ಪತ್ರವನ್ನು ವಿತರಿಸಿದರು. ನೇಮಕಗೊಂಡ ಯುವಕರಿಗೆ ಶುಭ ಕೋರಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರ ನುಡಿದಂತೆ ನಡೆಯುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು. 10 ಲಕ್ಷ ಆಕಾಂಕ್ಷಿಗಳಿಗೆ ಉದ್ಯೋಗದ ಭರವಸೆಯನ್ನು ನೀಡಿರುವ ಪ್ರಧಾನಿ ಮೋದಿಯವರು, ಅದನ್ನು ಶೀಘ್ರದಲ್ಲಿಯೇ ನೆರವೇರಿಸಲಿದ್ದಾರೆ. ಇದರ ಮೊದಲ ಹಂತವಾಗಿ ಇಂದು 75,000 ಯುವಕರಿಗೆ ನೇಮಕಾತಿ ಪತ್ರವನ್ನು ಪ್ರಧಾನಿ ಮೋದಿ ಅವರು ಖುದ್ದಾಗಿ ವರ್ಚುವಲ್ ವೇದಿಕೆಯ ಮೂಲಕ ಹಸ್ತಾಂತರಿಸಿದ್ದಾರೆ ಎಂದರು.

ಕೊಟ್ಟ ಮಾತಿನಂತೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದಲ್ಲಿ ಹೊಸ ಉದ್ಯೋಗಗಳನ್ನು ಸೃಷ್ಟಿಸುವತ್ತ ಹೆಜ್ಜೆ ಹಾಕುತ್ತಿದ್ದಾರೆ. ಅಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ನೇಮಕಾತಿಗಳನ್ನು ಮಾಡುವತ್ತ ಮಹತ್ತರ ಹೆಜ್ಜೆಗಳನ್ನು ಇಟ್ಟಿದ್ದಾರೆ. ಒಬ್ಬ ದೂರ ದೃಷ್ಟಿಯುಳ್ಳ ನಾಯಕ ದೇಶದ ಅಭಿವೃದ್ಧಿಗಾಗಿ ಯಾವ ರೀತಿ ಬದಲಾವಣೆಗಳನ್ನು ತರಬಹುದು ಎಂಬುದಕ್ಕೆ ಇದೇ ಉದಾಹರಣೆ ಎಂದು ಪ್ರಹ್ಲಾದ್ ಜೋಶಿ ಅಭಿಪ್ರಾಯ ವ್ಯಕ್ತಪಡಿಸಿದರು. ದೇಶಾದ್ಯಂತ 75 ಸಾವಿರ ಯುವಕರಿಗೆ ಉದ್ಯೋಗದ ನೇಮಕಾತಿ ಪತ್ರ ನೀಡುವ ಈ ಮಹತ್ವದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಬೆಂಗಳೂರಿನಿಂದ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಸಚಿವರಾದ ಡಾ. ಅಶ್ವತ್ಥ್ ನಾರಾಯಣ್, ಸಂಸದ ಪಿ.ಸಿ.ಮೋಹನ್, ಹಾಗೂ ತೇಜಸ್ವಿ ಸೂರ್ಯ ಉಪಸ್ಥಿತರಿದ್ದರು.

Translate »