ಕೃಷಿ ವಲಯಕ್ಕೆ 1 ಲಕ್ಷ ಕೋಟಿ ರೂ.ಗಳ ಹಣಕಾಸು ನೆರವು ಯೋಜನೆಗೆ ಮೋದಿ ಚಾಲನೆ
ಮೈಸೂರು

ಕೃಷಿ ವಲಯಕ್ಕೆ 1 ಲಕ್ಷ ಕೋಟಿ ರೂ.ಗಳ ಹಣಕಾಸು ನೆರವು ಯೋಜನೆಗೆ ಮೋದಿ ಚಾಲನೆ

August 10, 2020

ನವದೆಹಲಿ, ಆ.9- ಕೃಷಿ ವಲಯದಲ್ಲಿ ನವೋದ್ಯಮಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ದೇಶದ ವಿವಿಧೆಡೆ 350ಕ್ಕೂ ಹೆಚ್ಚು ಅಗ್ರಿ ಸ್ಟಾರ್ಟ್ ಅಪ್ ಆರಂಭಕ್ಕೆ ಕೇಂದ್ರ ಸರ್ಕಾರ ಹಣಕಾಸು ನೆರವು ನೀಡಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ರೈತರು ಮತ್ತು ಬೆಳೆಗಾರರ ಹಿತರಕ್ಷಣೆಗಾಗಿ ಕೃಷಿ ಉತ್ಪಾದಕರ ಸಂಘಟನೆ (ಎಫ್‍ಪಿಒ)ಗಳ ಜಾಲವನ್ನು ಸಹ ಸೃಷ್ಟಿಸಲಾಗುವುದು ಎಂದು ಅವರು ಘೋಷಿಸಿದರು.

ಕೃಷಿ ಮೂಲ ಸೌಕರ್ಯಾಭಿವೃದ್ಧಿಗಾಗಿ ರೈತರಿಗೆ ಒಂದು ಲಕ್ಷ ಕೋಟಿ ರೂ.ಗಳ ಹಣಕಾಸು ನೆರವಿನ ಸೌಲಭ್ಯ ಒದಗಿಸುವ ಮಹತ್ವದ ಯೋಜನೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದರು.

ಇದೇ ವೇಳೆ, ಪಿಎಂ ಕಿಸಾನ್ (ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್) ಯೋಜನೆ ಅಡಿ ದೇಶದ 8.5 ಕೋಟಿ ಕೃಷಿಕರಿಗೆ 17,000 ಕೋಟಿ ರೂ.ಗಳ 6ನೇ ಕಂತನ್ನು ಸಹ ಬಿಡುಗಡೆಗೊಳಿಸಿ ಮೋದಿ ರೈತ ಸಮುದಾಯವನ್ನು ಉದ್ದೇ ಶಿಸಿ ಮಾತನಾಡಿದರು. ಕೃಷಿ ಮೂಲಸೌಕರ್ಯ ಉದ್ಯೋಗ ಸೃಷ್ಟಿ ಜೊತೆಗೆ ಗ್ರಾಮಗಳಲ್ಲಿ ಸುಧಾರಿತ ಗೋದಾಮುಗಳು ಮತ್ತು ಆಧುನಿಕ ಶೈತ್ಯಾಗಾರ ಗಳನ್ನು ಸ್ಥಾಪಿಸಲು ನೆರವಾಗಲಿದೆ ಎಂದು ಹೇಳಿದರು.

ಆಧುನಿಕ ತಂತ್ರಜ್ಞಾನದಿಂದ ಕೃಷಿ ಉತ್ಪಾದನೆಯಲ್ಲಿ ಸಮಸ್ಯೆಯಾಗುತ್ತಿಲ್ಲ. ಆದರೆ ಕೊಯ್ಲು ನಂತರದ ನಷ್ಟವಾಗುತ್ತಿರುವುದು ಸಮಸ್ಯೆಗೆ ಕಾರಣವಾಗಿದೆ ಇದನ್ನು ನಿಭಾಯಿಸಲು ರೈತರಿಗೆ ಕೇಂದ್ರ ಸರ್ಕಾರ ಅಗತ್ಯವಾದ ಎಲ್ಲಾ ನೆರವು ನೀಡುತ್ತಿದೆ. ರೈತರು ತಮ್ಮ ಉತ್ಪನ್ನಗಳು, ಬೆಳೆಗಳ ಮಾರಾಟ ವಿಳಂಬ ಮತ್ತು ನಷ್ಟವನ್ನು ತಪ್ಪಿಸಲು ಕೇಂದ್ರ ಸರ್ಕಾರ ಇತ್ತೀಚೆಗೆ ಕಿಸಾಸ್ ರೈಲುಗಳನ್ನು ಆರಂಭಿಸಿದೆ ಎಂದು ಪ್ರಧಾನಿ ತಿಳಿಸಿದರು.

ಕೊರೊನಾ ವೈರಸ್ ಪಿಡುಗಿನ ವೇಳೆ ದೇಶದಲ್ಲಿ ಆಹಾರ ಪೂರೈಕೆಯನ್ನು ಸುಗಮ ಗೊಳಿಸಲು ರೈತರು ಮತ್ತು ಬೆಳೆಗಾರರು ದೊಡ್ಡ ಮಟ್ಟದಲ್ಲಿ ನೆರವಾಗಿದ್ದಾರೆ ಎಂದು ಮೋದಿ ಕೃಷಿಕ ಸಮುದಾಯವನ್ನು ಪ್ರಶಂಸಿಸಿದರು. ರೈತರು ಕೋವಿಡ್-19 ಪಿಡುಗಿನ ಸಂದರ್ಭದಲ್ಲಿ ಆರೋಗ್ಯದ ಕಡೆ ನಿಗಾ ವಹಿಸಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ಪ್ರಧಾನಿ ಸಲಹೆ ಮಾಡಿದರು.