ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತ
ಮೈಸೂರು

ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತ

August 10, 2020

ನಂಜನಗೂಡು,ಆ.9(ರವಿ)-ಕಪಿಲಾ ನದಿಯ ಪ್ರವಾಹ ಇಳಿಮುಖ ವಾಗಿದ್ದು, ಮಲ್ಲನಮೂಲೆ ಮಠದ ಬಳಿ ಜಲಾವೃತಗೊಂಡು ಬಂದ್ ಆಗಿದ್ದ ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿ ಭಾನುವಾರದಿಂದ ಸಂಚಾರಕ್ಕೆ ಮುಕ್ತವಾಗಿದೆ. ಕೇರಳದ ವೈನಾಡಿನಲ್ಲಿ ಕೆಲ ದಿನಗಳಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದ ಕಾರಣ ಬೀಚನಹಳ್ಳಿ ಕಬಿನಿ ಜಲಾಶಯಕ್ಕೆ ಭಾರೀ ಪ್ರಮಾಣದ ನೀರು ಹರಿದುಬರುತ್ತಿತ್ತು. ಇದರಿಂದ ಸುಮಾರು 78 ಸಾವಿರ ಕ್ಯೂಸೆಕ್ ನೀರನ್ನು ಜಲಾಶಯದಿಂದ ನದಿಗೆ ಬಿಡಲಾಗಿತ್ತು. ಪರಿಣಾಮ ಕಪಿಲಾ ನದಿ ನೀರಿನ ಮಟ್ಟ ಏರಿಕೆಯಾಗಿ ನಂಜನಗೂಡು ನಗರ ಹೊರವಲಯದ ಮಲ್ಲನಮೂಲೆ ಮಠದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ 3 ಅಡಿಗಳಷ್ಟು ನೀರು ನಿಂತಿತ್ತು. ಇದರಿಂದ ಶುಕ್ರವಾರ ರಾತ್ರಿಯಿಂದಲೇ ಜಿಲ್ಲಾಡಳಿತದ ಆದೇಶ ಮೇರೆಗೆ ಹೆದ್ದಾರಿ ಸಂಚಾರ ಬಂದ್ ಮಾಡಿ, ಬದಲಿ ಮಾರ್ಗದಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ವೈನಾಡಿನಲ್ಲಿ ಪ್ರಸ್ತುತ ಮಳೆ ಪ್ರಮಾಣ ತಗ್ಗಿದ್ದು, ಶನಿವಾರದಿಂದ ಕಬಿನಿ ಜಲಾಶಯದ ಒಳ ಹರಿವು ಇಳಿಮುಖವಾಗಿದೆ. ಹೊರ ಹರಿವು ಸಹ 16600 ಕ್ಯೂಸೆಕ್‍ಗೆ ಇಳಿಕೆಯಾಗಿದೆ. ಇದರಿಂದ ಕಪಿಲಾ ನದಿ ನೀರಿನ ಹರಿವು ಕಡಿಮೆ ಇದ್ದು, ಹೆದ್ದಾರಿ ಆವರಿಸಿಕೊಂಡಿದ್ದ ನೀರು ಇಳಿಮುಖವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನದಿಂದ ಯಥಾಸ್ಥಿತಿ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಬದಲಿ ಮಾರ್ಗದಲ್ಲಿ ತ್ರಾಸದಾಯಕವಾಗಿ ಸಂಚರಿಸುತ್ತಿದ್ದ ಸಹಸ್ರಾರು ಸಂಖ್ಯೆಯ ವಾಹನ ಸವಾರರು, ಪ್ರಯಾಣಿಕರು ಹರ್ಷಗೊಂಡಿದ್ದಾರೆ. ಅಲ್ಲದೆ ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ನೀರು ನಿಧಾನವಾಗಿ ವಾಪಸ್ ಹರಿದು ಹೋಗುತ್ತಿದ್ದು, ನಗರ ಸೇರಿ ದಂತೆ ತಾಲೂಕಿನ ಗ್ರಾಮಾಂತರ ತಗ್ಗು ಪ್ರದೇಶದ ಜನತೆ ನಿಟ್ಟಿಸಿರು ಬಿಡುವಂತಾಗಿದೆ.

Translate »