ಕೆಆರ್‍ಎಸ್‍ಗೆ ಪ್ರವಾಸಿಗರ ದಂಡು
ಮೈಸೂರು

ಕೆಆರ್‍ಎಸ್‍ಗೆ ಪ್ರವಾಸಿಗರ ದಂಡು

August 10, 2020

ಕೆಆರ್‍ಎಸ್, ಆ.9(ಎಂಟಿವೈ)- ಕೊಡಗು ಜಿಲ್ಲೆ ಸೇರಿದಂತೆ ಕಾವೇರಿ ಕಣಿವೆಯಲ್ಲಿ ಸುರಿ ಯುತ್ತಿರುವ ಧಾರಾಕಾರ ಮಳೆಯಿಂದ ಜೀವನದಿ ಕಾವೇರಿ ಉಕ್ಕಿ ಹರಿಯುತ್ತಿದ್ದು, ಕೆಆರ್‍ಎಸ್ ಅಣೆಕಟ್ಟೆಯಿಂದ 73 ಸಾವಿರ ಕ್ಯೂಸೆಕ್ಸ್ ನೀರು ನದಿಗೆ ಬಿಡಲಾಗುತ್ತಿದೆ. ಕ್ರೆಸ್ಟ್‍ಗೇಟ್ ಮೂಲಕ ಹಾಲಿನ ನೊರೆಯಂತೆ ಉಕ್ಕುತ್ತಿರುವ ರಮ ಣೀಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಭಾನು ವಾರ ಪ್ರವಾಸಿಗರು ಮುಗಿಬಿದ್ದರು.

ಪ್ರತಿ ವರ್ಷ ಕೆಆರ್‍ಎಸ್ ಅಣೆಕಟ್ಟೆಯಿಂದ ನದಿಗೆ ನೀರು ಬಿಡುವುದನ್ನು ನೋಡಲೆಂದು ವಿವಿ ಧೆಡೆಯಿಂದ ಪ್ರವಾಸಿಗರು ಆಗಮಿಸುವ ಪರಿ ಪಾಠ ಹೊಂದಿದ್ದು, ಈ ಬಾರಿ ಕೊರೊನಾ ಆತಂಕದಿಂದ ಪ್ರವಾಸಿಗರು ಉಕ್ಕಿ ಹರಿಯುತ್ತಿ ರುವ ನದಿ ವೀಕ್ಷಣೆಗೆ ಹಿಂದೇಟು ಹಾಕಬಹು ದೆಂದು ಅನುಮಾನಿಸಲಾಗಿತ್ತು. ಆದರೆ ರಜೆ ದಿನವಾದ ಭಾನುವಾರ ಭಾಗಶಃ ತುಂಬಿರುವ ಕೆಆರ್‍ಎಸ್ ಅಣೆಕಟ್ಟೆ ವೀಕ್ಷಣೆಗೆ ಪ್ರವಾಸಿಗರು ಮುಗಿಬಿದ್ದರು. ಕೊರೊನಾ ಆತಂಕವಿಲ್ಲದೆ ಕುಟುಂ ಬದ ಸದಸ್ಯರು, ಸ್ನೇಹಿತರೊಂದಿಗೆ ತಂಡೋಪ ತಂಡವಾಗಿ ಮೈಸೂರು, ಬೆಂಗಳೂರು ಸೇರಿ ದಂತೆ ವಿವಿಧೆಡೆಯಿಂದ ಜಲಾಶಯದ ಬಳಿ ಬಂದಿದ್ದ ಅಪಾರ ಸಂಖ್ಯೆಯ ಪ್ರವಾಸಿಗರು ಹಾಲಿನ ನೊರೆಯಂತೆ ಕ್ರೆಸ್ಟ್ ಗೇಟ್ ಮೂಲಕ ರಭಸವಾಗಿ ನದಿಗೆ ಹರಿಯುತ್ತಿರುವ ನೀರನ್ನು ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು. ಅಣೆಕಟ್ಟೆ ಯಿಂದ ಕಾವೇರಿ ನದಿ ಹಾಗೂ ನಾಲೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡುತ್ತಿರುವ ಸುದ್ದಿ ತಿಳಿದು ಬೇರೆ ಬೇರೆ ಸ್ಥಳದಿಂದ ಪ್ರವಾಸಿಗರು ಮಾತ್ರವಲ್ಲದೆ, ಸ್ಥಳೀಯರು ಭಾನುವಾರ ಬೆಳಗ್ಗಿನಿಂದ ಸಂಜೆವರೆಗೂ ಪ್ರವಾಸಿಗರ ದಂಡು ಕೆಆರ್‍ಎಸ್‍ನತ್ತ ಮುಖ ಮಾಡಿತ್ತು. ತುಂತುರು ಮಳೆಯ ನಡುವೆಯೂ ತಂಡೋಪತಂಡವಾಗಿ ಆಗಮಿಸುತ್ತಲೇ ಇದ್ದ ಪ್ರವಾಸಿಗರು, ರಭಸವಾಗಿ ಹರಿಯುತ್ತಿರುವ ನೀರನ್ನು ಕಂಡು ಮೂಕವಿಸ್ಮಿತರಾದರು.

ಭದ್ರತೆಗೆ ಕ್ರಮ: ಡ್ಯಾಂನಿಂದ ನದಿಗೆ ಹರಿಯುತ್ತಿದ್ದ ಜಲಧಾರೆಯನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದ ಹಿನ್ನೆಲೆಯಲ್ಲಿ ಕೆಆರ್‍ಎಸ್ ಅಣೆಕಟ್ಟೆಯ ಮುಖ್ಯ ದ್ವಾರದ ಕಡೆಗೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿತ್ತು. ಪ್ರತೀ ವರ್ಷ ಮಹದ್ವಾರದ ಮೂಲಕ ಅಣೆಕಟ್ಟೆಯಿಂದ ನಾಲೆ ಹಾಗೂ ನದಿಗೆ ಹರಿಯುವ ನೀರನ್ನು ಸಮೀಪ ದಿಂದಲೇ ನೋಡುವ ಅವಕಾಶ ಪ್ರವಾಸಿಗರಿಗೆ ಕಲ್ಪಿಸಲಾಗುತ್ತಿತ್ತು. ಆದರೆ ಈ ಬಾರಿ ಮುಂಜಾಗ್ರತಾ ಕ್ರಮವಾಗಿ ಅಣೆಕಟ್ಟೆಯ ಸಮೀಪಕ್ಕೆ ಜನರು ಬರದಂತೆ ಬ್ಯಾರಿಕೇಡ್ ಅಳವಡಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು. ಇದರಿಂದ ಡ್ಯಾಂ ಬಳಿ ಆಗಮಿಸಿದ್ದ ನೂರಾರು ಮಂದಿ ದೂರದಿಂದಲೇ ನೀರು ಧುಮ್ಮಿಕ್ಕುವುದನ್ನು ಕಂಡು ಪುಳಕಗೊಂಡರು.

ಫೋಟೋಗ್ರಫಿಗೆ ಆಧ್ಯತೆ: ವಿವಿಧೆಡೆಯಿಂದ ಆಗಮಿಸಿದ್ದ ಪ್ರವಾಸಿಗರು ಕ್ರೆಸ್ಟ್ ಗೇಟ್‍ನಿಂದ ಧುಮ್ಮಿಕ್ಕುವ ಜಲಧಾರೆಯನ್ನು ತಮ್ಮ ಕ್ಯಾಮರಾ ಮತ್ತು ಮೊಬೈಲ್‍ಗಳಲ್ಲಿ ಸೆರೆ ಹಿಡಿಯುವಲ್ಲಿ ಮಗ್ನರಾಗಿದ್ದರು. ಹಲವು ಯುವಕ-ಯುವತಿಯರು ಹಿಮ್ಮೇಳದಲ್ಲಿ ನೀರು ಕಾಣುವಂತೆ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಉದ್ಯಾನವನಕ್ಕಿಲ್ಲ ಜನ: ಹರಿಯುವ ನೀರನ್ನು ನೋಡಲೆಂದು ವಿವಿಧೆಡೆಯಿಂದ ಅಪಾರ ಸಂಖ್ಯೆಯಲ್ಲಿ ಕೆಆರ್‍ಎಸ್ ಡ್ಯಾಂ ಬಳಿ ಜನರು ಆಗಮಿಸಿದ್ದರೂ, ಉದ್ಯಾನವನ ವೀಕ್ಷಣೆಗೆ ಬಂದವರ ಸಂಖ್ಯೆ ವಿರಳವಾಗಿತ್ತು. ಕ್ರೆಸ್ಟ್ ಗೇಟ್ ಮೂಲಕ ಹೊರ ಬರುತ್ತಿದ್ದ ನೀರನ್ನು ಕೆಲ ಕಾಲ ನಿಂತು ವೀಕ್ಷಿಸಿದ ಪ್ರವಾಸಿಗರು ಬಳಿಕ ಕೆಆರ್‍ಎಸ್ ಮುಖ್ಯ ರಸ್ತೆಯ ಮೇಲ್ಸೇತುವೆಯಿಂದ ಅಣೆಕಟ್ಟಿನ ಕ್ರೆಸ್ಟ್ ಗೇಟ್‍ನಿಂದ ಬರುತ್ತಿದ್ದ ನೀರು, ಮತ್ತೊಂದು ಬದಿಯಲ್ಲಿ ಹರಿಯುತ್ತಿದ್ದ ಕಾವೇರಿ ನದಿಯನ್ನು ವೀಕ್ಷಿಸಿ ವಾಪಸಾಗುತ್ತಿದ್ದರು.

ಮೀನಿಗೆ ಬೇಡಿಕೆ: ಕೆಆರ್‍ಎಸ್ ಜಲಾಶಯದ ವೀಕ್ಷಣೆಗೆ ಬಂದಿದ್ದ ಬಹುತೇಕರು ಕೆಆರ್‍ಎಸ್‍ನ ರಸ್ತೆ ಬದಿ ಮೀನಿನ ಖಾದ್ಯ ಸೇವಿಸಲು ಮುಗಿ ಬಿದ್ದರು. ಕೆಆರ್‍ಎಸ್ ಹಿನ್ನೀರಿನ ಬಳಿಯೂ ಪ್ರವಾಸಿಗರ ದಂಡು ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಬಹುತೇಕ ಬೀದಿ ವ್ಯಾಪಾರಿಗಳಿಗೆ ಭಾನುವಾರ ಭರ್ಜರಿ ವ್ಯಾಪಾರ ನಡೆಯಿತು. ನದಿ ಪಾತ್ರದಲ್ಲಿ ಹಿಡಿದು ತಂದು ಮೀನಿನಿಂದ ತಯಾರಿಸಿದ್ದ ಖಾದ್ಯಕ್ಕೆ ಎಲ್ಲಿಲ್ಲದ ಬೇಡಿಕೆ ವ್ಯಕ್ತವಾಗಿತ್ತು. ಸ್ಥಳದಲ್ಲಿಯೇ ತಯಾರಿಸಿದ ತಾಜಾ ಮೀನಿನ ಖಾದ್ಯಕ್ಕೆ ಭಾರೀ ಬೇಡಿಕೆ ವ್ಯಕ್ತವಾಗುತ್ತಿತ್ತು.

ಕೆಆರ್‍ಎಸ್ ಅಣೆಕಟ್ಟೆಯಿಂದ ಕಾವೇರಿ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಿಡು ತ್ತಿರುವುದನ್ನು ವೀಕ್ಷಿಸಲು ಬಂದಿದ್ದೇವೆ. ಅಣೆಕಟ್ಟು ತುಂಬಿದಾಗ ಮಾತ್ರ ಭಾರೀ ಪ್ರಮಾಣದ ನೀರು ಕ್ರೆಸ್ಟ್ ಗೇಟ್ ಮೂಲಕ ಹೊರ ಬರುವುದನ್ನು ನೋಡುವ ಅವಕಾಶ ದೊರೆಯುತ್ತದೆ. ವರ್ಷದ ಎಲ್ಲಾ ದಿನಗಳಲ್ಲಿಯೂ ಇಂತಹ ಅವಕಾಶ ಸಿಗುವುದಿಲ್ಲ. ಭಾರೀ ರಭಸವಾಗಿ ಹೊರ ಬರುವ ನೀರನ್ನು ನೋಡುವುದೇ ಆನಂದ. ಎದೆ ಜಲ್ಲೆನ್ನಿಸುವ ಹಾಗೂ ರುದ್ರರಮಣೀಯವಾದ ದೃಶ್ಯ ನೋಡುವ ಸೌಭಾಗ್ಯ ನಮ್ಮದಾಗಿದೆ. ಕ್ರೆಸ್ಟ್ ಗೇಟ್ ಮೂಲಕ ರಭಸವಾಗಿ ಹರಿಯುವ ನೀರನ್ನು ಗಮನಿಸಿದರೆ ಅಣೆಕಟ್ಟು ಇನ್ನೆಷ್ಟು ರಭಸ ತಡೆದುಕೊಂಡಿರಬಹುದು ಎಂಬುದನ್ನು ಊಹಿಸಲು ಅಸಾಧ್ಯ ಎಂದು ರಾಮಕೃಷ್ಣನಗರದ ಪ್ರೇಮ ಬೋಧಿ `ಮೈಸೂರು ಮಿತ್ರ’ನಿಗೆ ತಿಳಿಸಿದರು.