ಸೆ.12ರಿಂದ ವಿಧಾನಮಂಡಲ ಮಳೆಗಾಲದ ಅಧಿವೇಶನ
News

ಸೆ.12ರಿಂದ ವಿಧಾನಮಂಡಲ ಮಳೆಗಾಲದ ಅಧಿವೇಶನ

August 26, 2022

ಬೆಂಗಳೂರು, ಆ. 25(ಕೆಎಂಶಿ)-ರಾಜ್ಯ ವಿಧಾನಮಂಡಲ ಮಳೆಗಾಲದ ಅಧಿವೇಶನವನ್ನು ಸೆಪ್ಟೆಂಬರ್ 12ರಿಂದ ನಡೆಸಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿದೆ.

ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಜೆ.ಸಿ.ಮಾಧುಸ್ವಾಮಿ, ಅಧಿವೇಶನ 15 ದಿನಗಳ ಕಾಲ ನಡೆಯಲಿದ್ದು, ಇದರಲ್ಲಿ ಹತ್ತು ದಿನ ಸರ್ಕಾರಿ ಕಾರ್ಯಕಲಾಪ ನಡೆಯಲಿದೆ. ಉಳಿದ ಐದು ದಿನ ಸರ್ಕಾರಿ ರಜೆ ಇರಲಿದೆ ಎಂದರು. ಕೆಪಿಎಸ್‍ಸಿಯಲ್ಲಿ, ಸಿ, ಡಿ ಗ್ರೂಪ್ ನೌಕರರ ನೇಮಕಾತಿ ಸಂದರ್ಭದಲ್ಲಿ ಮೌಖಿಕ ಸಂದರ್ಶನ ಇನ್ನು ಮುಂದೆ ಇರುವುದಿಲ್ಲ. ರಾಜ್ಯ ಸರ್ಕಾರ ಸಿ ಮತ್ತು ಡಿ ದರ್ಜೆ ನೌಕರರ ನೇಮಕಾತಿ ಸಂದರ್ಭದಲ್ಲಿ ಇದನ್ನು ಪಾಲನೆ ಮಾಡುತ್ತಿಲ್ಲ. ಕೆಪಿಎಸ್‍ಸಿ ಕಾಯ್ದೆಗೆ ತಿದ್ದುಪಡಿ ತಂದು ಈ ಮೌಖಿಕ ಸಂದರ್ಶನವನ್ನು ಈ ವರ್ಗದ ನೌಕರರ ನೇಮಕಾತಿ ಸಂದರ್ಭದಲ್ಲಿ ಕೈಬಿಡಲಾಗುವುದು ಎಂದರು. ರಾಜ್ಯದಲ್ಲಿ ಹೊಸತಾಗಿ 4244 ಅಂಗನವಾಡಿ ಕೇಂದ್ರಗಳನ್ನು ಸ್ಥಾಪಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಇದೇ ಸಂದರ್ಭ ದಲ್ಲಿ ತಿಳಿಸಿದರು. ರಾಜ್ಯ ಪ್ರಾರಂಭಿಸುತ್ತಿರುವ ಕೇಂದ್ರಗಳಿಗೆ ಕೇಂದ್ರ ಸರ್ಕಾರದಿಂದ ಯಾವುದೇ ರೀತಿಯ ಅನುದಾನ ದೊರೆಯುವುದಿಲ್ಲ. ಸೇನೆಯಲ್ಲಿ ಸೇವೆ ಸಲ್ಲಿಸುವಾಗಲೇ ಸೈನಿಕರು ಮೃತಪಟ್ಟರೆ ಅವರ ಕುಟುಂಬದ ಒಬ್ಬರಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಹುದ್ದೆ ನೀಡಲು ಇಂದಿನ ಸಭೆ ಸಮ್ಮತಿಸಿದೆ. ರಾಜ್ಯದಲ್ಲಿ ಸೇವೆಯಲ್ಲಿದ್ದು, ಮೃತಪಟ್ಟವರ ಸಂಖ್ಯೆ 400 ಮಂದಿ ಇದ್ದು, ಅದರಲ್ಲಿ 200 ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ದೊರೆತಿದೆ. ಉಳಿದ ಕುಟುಂಬದವರಿಗೆ ಅನುಕಂಪದ ಆಧಾರದ ಮೇಲೆ ನೌಕರಿ ನೀಡಲಾಗುವುದು. ಇದುವರೆಗೂ ನೀಡುತ್ತಿದ್ದ ಇತರೆ ಸೌಲಭ್ಯ, ಇನ್ನು ಮುಂದೆ ನೀಡುವುದಿಲ್ಲ ಎಂದರು.

ಕೃಷಿ ಕಾರ್ಮಿಕರ ಮಕ್ಕಳಿಗೂ ವಿದ್ಯಾನಿಧಿ:ವಿದ್ಯಾನಿಧಿ ಯೋಜನೆಯಡಿ ರೈತರ ಮಕ್ಕಳಿಗೆ ಓದಲು ನೆರವು ನೀಡ ಲಾಗುತ್ತಿತ್ತು. ಇದನ್ನೇ ಇನ್ನು ಮುಂದೆ ಕೃಷಿ ಕಾರ್ಮಿಕರ ಮಕ್ಕಳಿಗೂ ವಿಸ್ತರಿಸಲು ಸಂಪುಟ ಸಭೆ ತೀರ್ಮಾನಿಸಿದೆ ಎಂದರು. ಈ ವರ್ಷದಿಂದಲೇ ಕೃಷಿ ಕಾರ್ಮಿಕರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯ ನೆರವು ದಕ್ಕಲಿದೆ ಎಂದು ಇದೇ ಸಂದರ್ಭದಲ್ಲಿ ಅವರು ಸ್ಪಷ್ಟಪಡಿಸಿದರು.

ಗ್ರಾಮೀಣ ಪ್ರದೇಶದ ರೈತರು `ಭೂಕಬಳಿಕೆದಾರರಲ್ಲ’: ನಗರ ಮತ್ತು ಪಾಲಿಕೆ ವ್ಯಾಪ್ತಿ ಹೊರತುಪಡಿಸಿ, ಯಾವುದೇ ರೈತರು ಕಂದಾಯ ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿದ್ದರೆ, ಅಂತಹವರನ್ನು ಭೂ ಕಬಳಿಕೆ ವ್ಯಾಪ್ತಿಗೆ ತರದಿರಲು ತೀರ್ಮಾನಿಸಲಾಗಿದೆ ಎಂದರು. ಸರ್ಕಾರಿ ಭೂಮಿ ಎಂದು ತಿಳಿಯದೆ, ರೈತರು ಕೃಷಿ ಚಟುವಟಿಕೆ ಮಾಡಿ ಕೊಂಡಿರುತ್ತಾರೆ. ಅಂತಹವರನ್ನು ಭೂಗಳ್ಳರು ಎನ್ನಲಾಗದು. ಈ ದೃಷ್ಟಿಯಿಂದ ಕಂದಾಯ ಇಲಾಖೆ ಕಾನೂನಿಗೆ ತಿದ್ದುಪಡಿ ತಂದು ಗ್ರಾಮೀಣ ಭಾಗದಲ್ಲಿ ಭೂಕಬಳಿಕೆ ಎನ್ನುವ ಪದದಿಂದ ಹೊರಗಿಡಲಾಗುವುದು ಎಂದರು. ಯಾಕೆಂದರೆ ಗ್ರಾಮೀಣ ಭಾಗಗಳಲ್ಲಿ ರೈತರು ಹಲವು ಕಾರಣಗಳಿಂದ ಜಮೀನನ್ನು ಸ್ವಾಧೀನದಲ್ಲಿಟ್ಟುಕೊಂಡಿರಬಹುದು. ಆದರೆ ಈ ಕಾರಣಕ್ಕಾಗಿಯೇ ಅವರನ್ನು ಭೂ ಕಬಳಿಕೆದಾರರು ಎಂದು ಗುರುತಿಸುವುದು ಸರಿಯಲ್ಲ ಎಂದು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ ಎಂದರು.

ಹೀಗಾಗಿ ಇನ್ನು ಮುಂದೆ ಮಹಾನಗರ ಪಾಲಿಕೆ ಮತ್ತು ನಗರಪ್ರದೇಶಗಳಲ್ಲಿ ಭೂ ಒತ್ತುವರಿ ಪ್ರಕರಣ ನಡೆದರೆ ಒತ್ತುವರಿ ಮಾಡಿದವರನ್ನು ಭೂ ಕಬಳಿಕೆದಾರರು ಎಂದು ಪರಿಗಣಿಸುವುದಾಗಿ ಅವರು ವಿವರಿಸಿದರು. ಕೊಂಕಣ ರೈಲ್ವೇ ಅಭಿವೃದ್ಧಿಗೆ 73 ಕೋಟಿ ರೂಪಾಯಿ ನೀಡಲಾಗುವುದು, ಕೇಂದ್ರದ ನೀತಿ ಆಯೋಗದ ಮಾದರಿಯಲ್ಲಿ ರಾಜ್ಯದಲ್ಲಿ ನೀತಿ ಆಯೋಗ ರಚನೆಗೆ ಸಂಪುಟ ಘಟನೋತ್ತರ ಅನುಮೋದನೆ ನೀಡಿದೆ ಎಂದರು.
ಸಿಂಗನಾಯಕನಹಳ್ಳಿ ಸೇರಿದಂತೆ ರಾಜಧಾನಿಯ ನಾಲ್ಕು ಭಾಗಗಳಲ್ಲಿ ಹಣ್ಣು ಮತ್ತು ತರಕಾರಿ ಮಾರುಕಟ್ಟೆಗಳನ್ನು ಸ್ಥಾಪಿಸಲು ಐವತ್ತೆರಡು ಕೋಟಿ ರೂ.ಗಳನ್ನು ನೀಡಲು ತೀರ್ಮಾನಿಸಲಾಗಿದೆ ಎಂದರು. ಶಿರಾದಲ್ಲಿ ಅಪಘಾತದಿಂದ ಮೃತಪಟ್ಟ ಒಂಭತ್ತು ಮಂದಿಯ ಕುಟುಂಬಗಳಿಗೆ ತಲಾ ಐದು ಲಕ್ಷ ರೂ. ಪರಿಹಾರ ನೀಡಲು ತೀರ್ಮಾನಿಸಲಾಗಿದೆ ಎಂದರು.

Translate »