ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ ಸೇರಿ ರಾಜ್ಯದಲ್ಲಿ 8 ವಿಶ್ವವಿದ್ಯಾನಿಲಯ ಸ್ಥಾಪನೆ  ರಾಜ್ಯ ಸಚಿವ ಸಂಪುಟ ಸಭೆ ಅನುಮತಿ
News

ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ ಸೇರಿ ರಾಜ್ಯದಲ್ಲಿ 8 ವಿಶ್ವವಿದ್ಯಾನಿಲಯ ಸ್ಥಾಪನೆ ರಾಜ್ಯ ಸಚಿವ ಸಂಪುಟ ಸಭೆ ಅನುಮತಿ

August 26, 2022

ಬೆಂಗಳೂರು, ಆ. 25 (ಕೆಎಂಶಿ)-ರಾಜ್ಯದಲ್ಲಿ 8 ನೂತನ ವಿಶ್ವವಿದ್ಯಾಲಯಗಳ ಸ್ಥಾಪನೆಗೆ ಸೇರಿದ್ದ ರಾಜ್ಯ ಸಚಿವ ಸಂಪುಟ ಸಭೆ ಅನುಮತಿ ನೀಡಿದೆ.
ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ್‍ನಾರಾಯಣ್, ಚಾಮರಾಜ ನಗರ, ಕೊಡಗು, ಮಂಡ್ಯ, ಹಾಸನ, ಹಾವೇರಿ, ಕೊಪ್ಪಳ, ಬಾಗಲಕೋಟೆ ಮತ್ತು ಬೀದರ್ ನಲ್ಲಿ ವಿವಿಗಳು ಸ್ಥಾಪನೆಯಾಗಲಿವೆ ಎಂದರು.

ಹೊಸ ವಿಶ್ವವಿದ್ಯಾಲಯಗಳ ಸ್ಥಾಪನೆ ಗಾಗಿ ಕರ್ನಾಟಕ ವಿವಿಗಳ ಕಾಯ್ದೆ 2000ಕ್ಕೆ ತಿದ್ದುಪಡಿಗೆ ಸಂಪುಟ ಸಮ್ಮತಿಸಿದೆ. ಈಗಾ ಗಲೇ ಈ ಜಿಲ್ಲೆಗಳಲ್ಲಿ ಸ್ನಾತಕೋತ್ತರ ಕೇಂದ್ರಗಳು ಆರಂಭವಾಗಿದ್ದು, ಅಲ್ಲಿಯೇ ವಿಶ್ವವಿದ್ಯಾಲಯ ಸ್ಥಾಪನೆಯಾಗಲಿವೆ.

ಯುಜಿಸಿ ನಿಯಮಾವಳಿಗಳ ಅಡಿ ಯಲ್ಲೇ ವಿವಿಗಳು ಸ್ಥಾಪನೆಯಾಗುತ್ತಿದ್ದು, ಪ್ರತಿ ವಿವಿ ಸ್ಥಾಪನೆಗೆ ಮೂಲಸೌಕರ್ಯ ಕಲ್ಪಿಸಲು ಯುಜಿಸಿ 20 ರಿಂದ 30 ಕೋಟಿ ರೂ. ಅನುದಾನ ನೀಡಲಿದೆ ಎಂದರು. ಹೊಸ ವಿವಿಗಳ ಪೈಕಿ ಕ್ರಮವಾಗಿ ಚಾಮ ರಾಜನಗರ ವಿವಿಯಲ್ಲಿ 18, ಹಾಸನ ವಿ.ವಿ.ಯಲ್ಲಿ 36, ಹಾವೇರಿ 40, ಬೀದರ್ 140, ಕೊಡಗು 24, ಕೊಪ್ಪಳ 40 ಮತ್ತು ಬಾಗಲಕೋಟೆ ವಿವಿಗಳು 71 ಕಾಲೇಜುಗಳನ್ನು ಹೊಂದಿರಲಿವೆ. ಇವುಗಳ ಜತೆಗೆ ಮಂಡ್ಯ ವಿವಿ ವ್ಯಾಪ್ತಿಗೆ ಆ ಜಿಲ್ಲೆಯ ಪ್ರಥಮ ದರ್ಜೆ ಕಾಲೇಜುಗಳು ಬರಲಿವೆ ಎಂದು ಅವರು ವಿವರಿಸಿದರು. ಮಂಡ್ಯ ವಿವಿ ಒಂದನ್ನು ಹೊರತು ಪಡಿಸಿ ಮಿಕ್ಕ 7 ವಿವಿಗಳ ಆರಂಭವನ್ನು ಈ ವರ್ಷದ ಬಜೆಟ್‍ನಲ್ಲಿ ಘೋಷಿಸಲಾಗಿತ್ತು. ಇದಕ್ಕಾಗಿ ಈಗಾಗಲೇ ತಲಾ 2 ಕೋಟಿ ರೂ.ಗಳಂತೆ ಒಟ್ಟು 14 ಕೋಟಿ ರೂಪಾಯಿ ಒದಗಿಸಲಾಗಿದೆ. ಏಕೀಕೃತ ವಿವಿಯಾಗಿದ್ದ ಮಂಡ್ಯದ ಸರಕಾರಿ ಕಾಲೇಜನ್ನು ಪೂರ್ಣ ಪ್ರಮಾಣದ ವಿ.ವಿ.ಯಾಗಿ ಮಾಡುವ ತೀರ್ಮಾ ನವನ್ನು ಇತ್ತೀಚೆಗೆ ಕೈಗೊಳ್ಳಲಾಗಿತ್ತು ಎಂದು ಅವರು ವಿವರಿಸಿದರು. ಜಿಲ್ಲೆಗೊಂದು ವಿವಿ ಇರಬೇಕು ಎನ್ನುವುದು ಸರಕಾರದ ತೀರ್ಮಾನವಾಗಿದೆ. ಈ ಮೂಲಕ ಶೈಕ್ಷಣಿಕ ಅಸಮತೋಲನ ನಿವಾರಣೆ ಮಾಡಲಾಗುವುದು. ಜೊತೆಗೆ, ಯುವಜನರಿಗೆ ಮನೆ ಬಾಗಿಲಲ್ಲೇ ಗುಣಮಟ್ಟದ ಶಿಕ್ಷಣ ನೀಡುವ ಸದಾಶಯ ಇದರ ಹಿಂದಿದೆ ಎಂದು ಸಚಿವರು ಹೇಳಿದರು. ನೂತನ ವಿವಿಗಳ ಸ್ಥಾಪನೆಗೆ ಆರ್ಥಿಕ ಮತ್ತು ಯೋಜನಾ ಇಲಾಖೆಗಳು ಒಪ್ಪಿಗೆ ನೀಡಿವೆ.

Translate »