ಮೈಸೂರಿನಲ್ಲಿ ಧಾರಾಕಾರ ಮಳೆ
ಮೈಸೂರು

ಮೈಸೂರಿನಲ್ಲಿ ಧಾರಾಕಾರ ಮಳೆ

August 27, 2022

ಮೈಸೂರು, ಆ.26(ಜಿಎ)- ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ ಸತತ ಮೂರನೇ ದಿನವಾದ ಶುಕ್ರವಾರ ಸಂಜೆ ಧಾರಾಕಾರ ಮಳೆ ಸುರಿದ ಪರಿಣಾಮ ಜನಜೀವನ ಮತ್ತು ವಾಹನ ಸಂಚಾರ ಅಸ್ತವ್ಯಸ್ತಗೊಂಡು ಪರದಾಡುವಂತಾಯಿತು.

ಶುಕ್ರವಾರ ಸಂಜೆ ಆರಂಭವಾದ ಮಳೆ ಮೈಸೂರಿನ ವಿಜಯನಗರ, ಬನ್ನಿಮಂಟಪ, ಕುವೆಂಪುನಗರ, ಯಾದವಗಿರಿ, ಸಿದ್ದಾರ್ಥನಗರ, ಒಂಟಿಕೊಪ್ಪಲ್, ಗೋಕುಲಂ, ಸರಸ್ವತಿಪುರಂ, ಶಾರದಾದೇವಿ ನಗರ, ರಾಮಕೃಷ್ಣನಗರ, ಕೂರ್ಗಳ್ಳಿ, ದಟ್ಟಗಳ್ಳಿ, ಜೆಪಿ ನಗರ, ಅಗ್ರಹಾರ, ಸುಣ್ಣಕೇರಿ, ಲಕ್ಷ್ಮಿ ಪುರಂ, ಜಯಲಕ್ಷ್ಮಿ ಪುರಂ, ಸೇರಿದಂತೆ ನಗರದ ಎಲ್ಲಾ ಭಾಗಗಳಲ್ಲಿಯೂ ಮಧ್ಯರಾತ್ರಿವರೆಗೂ ಧಾರಾಕಾರವಾಗಿ ಸುರಿಯಿತು.

ಮಳೆಯಿಂದ ರಸ್ತೆಗಳೆಲ್ಲವೂ ಕೆರೆಗಳಂತಾಗಿ ವಾಹನ ಸವಾರರು ಪರದಾಡುವಂತಾ ಯಿತು. ಕೆಲವು ಕಡೆ ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನೀರು ನುಗ್ಗಿತು. ಕುರುಬಾರಳ್ಳಿ ವೃತ್ತದ ಬಳಿ ಮರವೊಂದು ಉರುಳಿ ಬಿದ್ದಿದ್ದು, ಈ ಸಂದರ್ಭದಲ್ಲಿ ಯಾರು ಮರದ ಕೆಳಗೆ ಇಲ್ಲದ ಕಾರಣ ಅನಾಹುತ ತಪ್ಪಿದೆ. ಆದಿಚುಂಚನಗಿರಿ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿದ್ದು, ರಸ್ತೆಯಲ್ಲಿ ಭಾರೀ ಗಾತ್ರದ ಗುಂಡಿಗಳಿವೆ. ಮಳೆ ನೀರು ತುಂಬಿರುವುದರಿಂದ ರಸ್ತೆ ಗುಂಡಿ ಕಾಣದೆ ಹಾಗೂ ಈ ರಸ್ತೆ ಕೆಸರು ಗದ್ದೆಯಂತಾಗಿ ರುವುದರಿಂದ ಕೆಲ ವಾಹನ ಸವಾರರು ಗುಂಡಿಗಳು ಕಾಣದೆ ಜಾರಿ ಬಿದ್ದಿದ್ದಾರೆ. ಅಲ್ಲದೆ ಮೈಸೂರಿನ ಹಲವೆಡೆ ನಗರ ಪಾಲಿಕೆಯಿಂದ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಅಂತಹ ರಸ್ತೆಗಳಲ್ಲಿ ಸಣ್ಣ ಪುಟ್ಟ ಅಪಘಾತಗಳಾದ ಬಗ್ಗೆ ವರದಿಯಾಗಿದೆ. ರಾಜ್ಯದಲ್ಲಿ ಇನ್ನೂ ಮೂರ್ನಾಲ್ಕು ದಿನಗಳು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Translate »