ಶೇ.40 ಕಮಿಷನ್ ವಿಚಾರ: ಹೈಕೋರ್ಟ್  ನ್ಯಾಯಾಧೀಶರಿಂದ ತನಿಖೆ ಮಾಡಿಸಲಿ
ಮೈಸೂರು

ಶೇ.40 ಕಮಿಷನ್ ವಿಚಾರ: ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ಮಾಡಿಸಲಿ

August 27, 2022

ಮೈಸೂರು, ಆ.26 (ಆರ್‍ಕೆಬಿ)- ಶೇ.40 ಕಮಿಷನ್ ಆರೋಪಕ್ಕೆ ಸಂಬಂಧಿಸಿ ದಂತೆ ಸರ್ಕಾರ ಹೈಕೋರ್ಟ್ ನ್ಯಾಯಾ ಧೀಶರ ನೇತೃತ್ವದ ಸಮಿತಿ ರಚಿಸಿ, ತನಿಖೆ ನಡೆಸಲಿ. ಅದು ಬಿಟ್ಟು ತಮ್ಮದು ಪ್ರಾಮಾ ಣಿಕ, ಸತ್ಯನಿಷ್ಠ ಸರ್ಕಾರ ಎಂದು ಕೊಚ್ಚಿ ಕೊಳ್ಳುವುದನ್ನು ಬಿಡಲಿ ಎಂದು ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದ ರಾಮಯ್ಯ ಇಂದಿಲ್ಲಿ ಸರ್ಕಾರವನ್ನು ಆಗ್ರಹಿ ಸಿದರು. ಮೈಸೂರು ಪತ್ರಕರ್ತರ ಭವನದಲ್ಲಿ ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಭಾಗ ವಹಿಸಿ ಮಾತನಾಡಿದ ಅವರು, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮಾಡಿರುವ ಆರೋಪದ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರಿಂದ ಸ್ವತಂತ್ರ ತನಿಖೆ ನಡೆಸಲಿ ಇಲ್ಲವೇ ಸಿಬಿಐ ತನಿಖೆ ನಡೆಸಲಿ ಎಂದು ಒತ್ತಾಯಿಸಿದರು. ತಮ್ಮ ಸಂವಾ ದದ ಉದ್ದಕ್ಕೂ ಸಿದ್ದರಾಮಯ್ಯ ಬಿಜೆಪಿ ಸರ್ಕಾರವನ್ನು ಅತೀ ಭ್ರಷ್ಟ ಸರ್ಕಾರ ಎಂದು ದೂಷಿಸಿದರು.

ಸತ್ಯ ಹೊರಬರಬೇಕು. ಜಿಲ್ಲೆ, ಕ್ಷೇತ್ರಗಳಲ್ಲಿ ಸಣ್ಣಪುಟ್ಟ ಕೆಲಸಗಳಿಗೂ ಎಲ್ಲ ಸಚಿವರು ನಾಚಿಕೆಯಿಲ್ಲದೆ ಕಮಿಷನ್ ಕೇಳುತ್ತಿರುವ ಕಾರಣ ನಾನು ಇದನ್ನು 50 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಕರೆಯುವುದಾಗಿ ಹೇಳಿದ ಅವರು, ದೊಡ್ಡ ಅಥವಾ ಸಣ್ಣ ಯಾವುದೇ ಕೆಲಸವನ್ನು ಕಮಿಷನ್ ಆಧಾರದ ಮೇಲೆ ತೆಗೆದುಕೊಳ್ಳಲಾಗುತ್ತದೆ. ಶೇ.40ರಷ್ಟು ಹಣ ಸಚಿವರಿಗೆ, ಶೇ.20ರಷ್ಟು ಗುತ್ತಿಗೆದಾರರ ಲಾಭ, ಶೇ.15ರಷ್ಟು ಜಿಎಸ್‍ಟಿ ಮತ್ತು ಉಳಿದ ಶೇ.25ರಷ್ಟು ಅನುದಾನ ದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ. ಇದರಿಂದ ಯಾವ ಗುಣಮಟ್ಟವನ್ನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದರು. ಗುತ್ತಿಗೆ ದಾರರ ಸಂಘ ಭ್ರಷ್ಟಾಚಾರದ ದಾಖಲೆಗಳನ್ನು ನೀಡಬೇಕು ಎಂದು ಸರ್ಕಾರ ಹೇಳುತ್ತಿದೆ. ವ್ಯವಹಾರಗಳ ದಾಖಲೆ ಇಡಲು ಮಂತ್ರಿಗಳು ದಡ್ಡರೇ? ಸ್ವತಂತ್ರ ತನಿಖೆಯಿಂದ ಮಾತ್ರ ಸತ್ಯಾಂಶ ಹೊರಬರಲಿದೆ. ಕೊಡಗು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ರವಿ ಚಂಗಪ್ಪ ಕೂಡ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಅವರು ಲಂಚ ಪಡೆದಿದ್ದಾರೆ. ಅಮಾನತುಗೊಂಡಿರುವ ಹಿರಿಯ ಪಿಡಬ್ಲ್ಯುಡಿ ಅಧಿಕಾರಿ ಶ್ರೀಕಂಠಯ್ಯ ಅವರನ್ನು ಮತ್ತೆ ಅದೇ ಹುದ್ದೆಗೆ ಮರು ನೇಮಕಗೊಳಿಸಲು ಎರಡೂವರೆ ಕೋಟಿ ರೂ. ಪಡೆದಿದ್ದಾರೆಂದು ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ಸರ್ಕಾರದ ಉತ್ತರವೇನು ಎಂದು ಪ್ರಶ್ನಿಸಿದರು. ಇದಕ್ಕಿಂತ ಭ್ರಷ್ಟ ಸರ್ಕಾರ ಮತ್ತೊಂದಿಲ್ಲ ಎಂದು ಗುತ್ತಿಗೆದಾರರು ದೂರಿದ್ದಾರೆ. ಸತ್ಯಾಂಶ ಪತ್ತೆ ಹಚ್ಚುವ ನ್ಯಾಯಾಂಗ ತನಿಖೆಯನ್ನು ನಿರಾಕರಿಸುವ ಮೂಲಕ ಸರ್ಕಾರವು ಭ್ರಷ್ಟಾಚಾರದ ವ್ಯಾಪಕತೆಯನ್ನು ಪರೋಕ್ಷವಾಗಿ ಒಪ್ಪಿಕೊಳ್ಳುತ್ತಿದೆ. ಗುತ್ತಿಗೆದಾರರು ಸಾಕ್ಷ್ಯ, ದಾಖಲೆಗಳನ್ನು ಒದಗಿಸಲು ಸಿದ್ದರಿದ್ದಾರೆ. ಅವರು ತಮ್ಮ ಆರೋಪ ಸುಳ್ಳು ಎಂದು ಸಾಬೀತಾದರೆ ಕಾನೂನು ಪ್ರಕಾರ ಶಿಕ್ಷೆ ಎದುರಿಸಲು ಸಿದ್ದರಾಗಿರುವುದಾಗಿ ಹೇಳುತ್ತಿದ್ದಾರೆ. ಅಂದ ಮೇಲೆ ಸರ್ಕಾರ ತನಿಖೆ ನಡೆಸಲು ಹಿಂದೇಟು ಹಾಕುತ್ತಿರುವುದಾದರೂ ಏಕೆ? ಇದರಲ್ಲೇ ಅವರ ಭ್ರಷ್ಟತೆ ಎಷ್ಟಿದೆ ಎಂಬುದರ ಅರಿವಾಗುತ್ತದೆ ಎಂದು ಸಿದ್ದರಾಮಯ್ಯ ಆರೋಪಿಸಿದರು. ಸರ್ಕಾರದ ವಿರುದ್ಧ ಭ್ರಷ್ಟಾಚಾರ ಕೆಟ್ಟ ಆಡಳಿತ ಕುರಿತ ಆರೋಪ ಬಂದಾಗಲೆಲ್ಲಾ ಬಿಜೆಪಿಯವರು ಮೊಟ್ಟೆ ಎಸೆಯುವುದು, ಮಾಂಸ ತಿನ್ನುವುದು ಮತ್ತು ಇತರೆ ಧಾರ್ಮಿಕ ಮತ್ತು ಭಾವನಾತ್ಮಕ ವಿಷಯಗಳಂತಹ ಸೂಕ್ತ್ಮ ವಿಷಯಗಳತ್ತ ಹೊರಳುತ್ತಾರೆ. ಮುಖ್ಯಮಂತ್ರಿಗಳು, ಸಚಿವರು ಸೇರಿದಂತೆ ಪಕ್ಷದ ನಾಯಕರು ಕೋಮು ಭಾವನೆ ಕೆರಳಿಸುವಂತಹ ಹೇಳಿಕೆಗಳನ್ನು ನೀಡಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ತಮ್ಮ ಅವಧಿಯಲ್ಲಿ ಸಿಬಿಐಗೆ ಐದು ಪ್ರಕರಣ ಒಪ್ಪಿಸಿದ್ದೆ: ಸಂವಾದದ ವೇಳೆ ಸಿದ್ದರಾಮಯ್ಯ ಅವರು ತಮ್ಮ ಸರ್ಕಾರವಿದ್ದಾಗ, ತಾವು ಸಿಎಂ ಆಗಿ ಕೈಗೊಂಡ ಜನಪರ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು. ಭ್ರಷ್ಟಾಚಾರದ ಸುಳಿವು ಸಿಕ್ಕಿದ್ದರಿಂದ ಐದು ಪ್ರಕರಣಗಳನ್ನು ಸಿಬಿಐಗೆ ವಹಿಸಿದ್ದೇನೆ. ಬಿಜೆಪಿ ಸರ್ಕಾರವೂ ಅದೇ ರೀತಿ ಮಾಡುವ ಧೈರ್ಯ ತೋರಲಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.

ಆರೋಪಗಳ ತನಿಖೆಗೆ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಬೇಕೆಂಬ ಬೇಡಿಕೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಒಪ್ಪಿಕೊಳ್ಳದಿದ್ದರೆ ಜನತಾ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

ನ್ಯಾಯಾಂಗ ತನಿಖೆಯನ್ನು ನಿರಾಕರಿಸುವ ಮೂಲಕ, ಸರ್ಕಾರವು ಭ್ರಷ್ಟಾಚಾರವನ್ನು ಒಪ್ಪಿಕೊಳ್ಳುತ್ತಿದೆ. ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲದಿದ್ದರೆ, ನೀವು ತನಿಖೆಗೆ ಏಕೆ ಹೆದರುತ್ತೀರಿ? ಸಾಕ್ಷಿ ಇಲ್ಲ ಎಂದು ಹೇಳಿ ನುಣುಚಿಕೊಳ್ಳುವ ಪ್ರಯತ್ನ ಏಕೆ? ಎಂದು ಪ್ರಶ್ನಿಸಿದ ಅವರು, ಗುತ್ತಿಗೆದಾರರು ತಮ್ಮ ಬಳಿ ಹಲವು ದಾಖಲೆಗಳಿವೆ ಎಂದು ಹೇಳುತ್ತಿದ್ದಾರೆ. ಹಾಗಾಗಿ ನ್ಯಾಯಾಂಗ ತನಿಖೆಗೆ ಸಮಿತಿ ರಚಿಸಿದರೆ ಸಾಕ್ಷ್ಯಗಳನ್ನು ಒದಗಿಸಲು ಸಿದ್ದ ಎಂದು ಗುತ್ತಿಗೆದಾರರೇ ಹೇಳುತ್ತಿದ್ದಾರೆ. ಅಂದ ಮೇಲೆ ಇವರಿಗೆ ಹೆದರಿಕೆ ಏಕೆ ಎಂದು ಪ್ರಶ್ನಿಸಿದರು. ಸಂವಾದದ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ನಗರ ಉಪಾಧ್ಯಕ್ಷ ಅನುರಾಗ್ ಬಸವರಾಜ್, ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ, ನಗರ ಕಾರ್ಯದರ್ಶಿ ರಂಗಸ್ವಾಮಿ ಉಪಸ್ಥಿತರಿದ್ದರು.

Translate »