ಗುಲಾಂ ನಬಿ ಆಜಾದ್ ಕಾಂಗ್ರೆಸ್‍ಗೆ ಗುಡ್‍ಬೈ
News

ಗುಲಾಂ ನಬಿ ಆಜಾದ್ ಕಾಂಗ್ರೆಸ್‍ಗೆ ಗುಡ್‍ಬೈ

August 27, 2022

ನವದೆಹಲಿ, ಆ.26-ಹಿರಿಯ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಮೂಲಕ ಕಾಂಗ್ರೆಸ್‍ಗೆ ಆಘಾತ ನೀಡಿದ್ದಾರೆ. ಅವರು ತಮ್ಮ ರಾಜೀನಾಮೆ ಯೊಂದಿಗೆ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ 5 ಪುಟಗಳ ಪತ್ರವನ್ನು ಸಲ್ಲಿಸಿದ್ದಾರೆ.
ಪಕ್ಷದಲ್ಲಿ ರಾಹುಲ್ ಗಾಂಧಿಯವರ ನಡವಳಿಕೆ ಬಗ್ಗೆ ಕಿಡಿಕಾರಿರುವ ಅವರು, ಹಿರಿಯ ಕಾಂಗ್ರೆಸ್ ನಾಯಕರನ್ನು ಮೂಲೆಗುಂಪು ಮಾಡಿರುವುದು ಮತ್ತು ಅನನುಭವಿ ಭಟ್ಟಂಗಿಗಳ ಗುಂಪಿನ ಒಡನಾಟ ವನ್ನು ಹೆಚ್ಚಿಸಿಕೊಂಡಿರುವುದೇ ತಾವು ಪಕ್ಷದಿಂದ ನಿರ್ಗಮಿಸಲು ಪ್ರಮುಖ ಕಾರಣ ಎಂದು ಹೇಳಿದ್ದಾರೆ. ಕಳೆದ 8 ವರ್ಷದಲ್ಲಿ ಪಕ್ಷವನ್ನು ಸಂಪೂರ್ಣವಾಗಿ ನಾಶ ಮಾಡಲಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ತನಗೆ ಲಭ್ಯವಿದ್ದ ಸ್ಥಾನವನ್ನು ಬಿಜೆಪಿಗೆ ಮತ್ತು ರಾಜ್ಯ ಮಟ್ಟದ ಸ್ಥಾನಗಳನ್ನು ಪ್ರಾದೇಶಿಕ ಪಕ್ಷಗಳಿಗೆ ಕಾಂಗ್ರೆಸ್ ಬಿಟ್ಟುಕೊಟ್ಟಿದೆ. ಪಕ್ಷವನ್ನು ಸುಧಾರಿಸಲು ಸಾಧ್ಯವಾಗದ ಸ್ಥಿತಿಗೆ ತಲುಪಿ ಸಲಾಗಿದೆ ಎಂದು ಅವರು ತಮ್ಮ ಪತ್ರದಲ್ಲಿ ದೂರಿದ್ದಾರೆ.
ಗಂಭೀರವಲ್ಲದ ವ್ಯಕ್ತಿಯ ಕೈಗೆ ಪಕ್ಷದ ಚುಕ್ಕಾಣಿ ನೀಡುವ ಯತ್ನಗಳು ನಡೆದಿವೆ. ಪಕ್ಷಕ್ಕಾಗಿ ಜೀವನವನ್ನು ಮುಡುಪಾಗಿಟ್ಟ ಪ್ರಮುಖ ನಾಯಕರನ್ನು ಕಡೆಗಣಿಸ ಲಾಯಿತು. ಭಾರತಕ್ಕೆ ಯಾವುದು ಸರಿ ಎಂಬುದನ್ನು ನಿರ್ಧರಿಸಲು ಎಐಸಿಸಿಯನ್ನು ನಡೆಸುತ್ತಿರುವ ಕೂಟವು ಇಚ್ಛಾಶಕ್ತಿ ಮತ್ತು ಸಾಮಥ್ರ್ಯ ಎರಡನ್ನೂ ಕಳೆದುಕೊಂಡಿದೆ. ಚುನಾವಣೆಗಳಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲಲು ರಾಹುಲ್ ಗಾಂಧಿಯವರ ಅಪ್ರಬುದ್ಧತೆಯೇ ಕಾರಣ ಎಂದಿರುವ ಆಜಾದ್, ಮಾಧ್ಯಮಗಳ ಮುಂದೆಯೇ ಸರ್ಕಾರಿ ಸುಗ್ರೀವಾಜ್ಞೆಯನ್ನು ಹರಿದು ಹಾಕಿದ್ದು, ಅವರ ಅಪ್ರಬುದ್ಧತೆಯ ಅತ್ಯಂತ ಜ್ವಲಂತ ಉದಾ ಹರಣೆಯಾಗಿದೆ. ಈ ಒಂದು ವರ್ತನೆಯೇ 2014ರಲ್ಲಿ ಯುಪಿಎ ಸೋಲಿಗೆ ಕಾರಣವಾಯಿತು ಎಂದು ತಿಳಿಸಿರುವ ಅವರು, 2014 ರಿಂದ 2022ರ ನಡುವೆ ನಡೆದ 49 ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ 39ರಲ್ಲಿ ಪರಾಭವ ಗೊಂಡಿದೆ ಎಂಬುದನ್ನು ಉಲ್ಲೇಖಿಸಿದ್ದಾರೆ. 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ಬಳಿಕ ರಾಹುಲ್ ಗಾಂಧಿ ಪಕ್ಷದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನಂತರ ಹಂಗಾಮಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿರುವ ನೀವು, ಕೇವಲ ನಾಮ ಮಾತ್ರಕ್ಕೆ ಅಧ್ಯಕ್ಷರಾಗಿದ್ದೀರಿ ಎಂದು ಒತ್ತಿ ಹೇಳಿರುವ ಆಜಾದ್, ಪಕ್ಷದ ಎಲ್ಲಾ ನಿರ್ಧಾರಗಳನ್ನು ರಾಹುಲ್ ಗಾಂಧಿ ಅಥವಾ ಅವರ ಭದ್ರತಾ ಸಿಬ್ಬಂದಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಎಐಸಿಸಿಯಲ್ಲಿ ವ್ಯವಸ್ಥಿತ ಬದಲಾವಣೆಗಳನ್ನು ಬಯಸಿದ ಜಿ-23 ಗುಂಪಿನ ಸದಸ್ಯರಾಗಿದ್ದ ಗುಲಾಂ ನಬಿ ಆಜಾದ್ ಅವರು ಆಗಸ್ಟ್ 16ರಂದು ಜಮ್ಮು ಮತ್ತು ಕಾಶ್ಮೀರ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನವನ್ನು ತ್ಯಜಿಸಿದ್ದರು. ಜಿ-23 ಗುಂಪು ಪಕ್ಷದ ನಾಯಕತ್ವವನ್ನು ಟೀಕಿಸುತ್ತಿದೆ ಮತ್ತು ಸಂಘಟನೆಯ ಬದಲಾವಣೆಯನ್ನು ಒತ್ತಾಯಿಸುತ್ತಿದೆ ಎಂಬ ಕಾರಣಕ್ಕಾಗಿ ಈ ಗುಂಪಿನ ವಿರುದ್ಧ ಪಕ್ಷದ ಕೆಲವರು ಕೆಂಡಾಮಂಡಲವಾಗಿದ್ದರು ಎಂದು ಹೇಳಲಾಗಿದೆ. ರಾಜ್ಯಸಭೆಯಿಂದ ನಿವೃತ್ತರಾದ ನಂತರ ಗುಲಾಂ ನಬಿ ಆಜಾದ್ ಅವರನ್ನು ಮತ್ತೆ ರಾಜ್ಯಸಭೆಗೆ ಕಳುಹಿಸದೇ ಇರುವುದನ್ನು ಜಿ-23 ಗುಂಪಿನ ಕೆಲ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.
ಆಜಾದ್ ಅವರು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿಯಾಗಿ, ಯುಪಿಎ ಸರ್ಕಾರದ ಅವಧಿಯಲ್ಲಿ ಕೇಂದ್ರ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಎಐಸಿಸಿ ನಾಯಕಿ ಸೋನಿಯಾ ಗಾಂಧಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಇತ್ತೀಚೆಗಷ್ಟೇ ಹಿರಿಯ ಕಾಂಗ್ರೆಸ್ ನಾಯಕರಾದ ಕಪಿಲ್ ಸಿಬಲ್, ಅಶ್ವಿನಿ ಕುಮಾರ್ ಅವರುಗಳು ಪಕ್ಷ ತೊರೆದಿದ್ದು, ಹಿಮಾಚಲ ಪ್ರದೇಶದ ಹಿರಿಯ ನಾಯಕ ಆನಂದ್ ಶರ್ಮಾ ಅವರು ಪಕ್ಷದ ಪ್ರಮುಖ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇದೀಗ ಹಿರಿಯ ನಾಯಕ ರಾಜೀನಾಮೆ ನೀಡಿರುವುದು ಕಾಂಗ್ರೆಸ್‍ನಲ್ಲಿ ಆಘಾತವನ್ನುಂಟು ಮಾಡಿದೆ.

Translate »