ನನಗೇ ಚುನಾವಣಾ ಸಾರಥ್ಯ ನೀಡಿ; ಮತ್ತೆ ಪಕ್ಷ ಅಧಿಕಾರಕ್ಕೆ ತರುವ ಹೊಣೆ ನನ್ನದು
News

ನನಗೇ ಚುನಾವಣಾ ಸಾರಥ್ಯ ನೀಡಿ; ಮತ್ತೆ ಪಕ್ಷ ಅಧಿಕಾರಕ್ಕೆ ತರುವ ಹೊಣೆ ನನ್ನದು

August 27, 2022

ಬೆಂಗಳೂರು, ಆ. 26 (ಕೆಎಂಶಿ)-ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯು ನನ್ನ ನೇತೃತ್ವ ದಲ್ಲೇ ನಡೆಯಲು ಅವಕಾಶ ಮಾಡಿಕೊಡಿ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಹೊಣೆ ನನ್ನದು ಎಂದು ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ವರಿಷ್ಠರಲ್ಲಿ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ಸ್ಥಾನದಿಂದ ಇಳಿದ ನಂತರ ವರಿಷ್ಠರನ್ನು ದೆಹಲಿಯಲ್ಲಿ ಶುಕ್ರವಾರ ಭೇಟಿ ಮಾಡಿದ ಯಡಿಯೂರಪ್ಪ, ವಿಧಾನಸಭೆ ಚುನಾವಣೆ ತಂತ್ರಗಾರಿಕೆಗೆ ಸಂಬಂಧಿಸಿದಂತೆ ಸಮಾಲೋಚನೆ ನಡೆಸಿದ್ದಾರೆ. ಪಕ್ಷದ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯರ ನ್ನಾಗಿ ನೇಮಕ ಮಾಡಿದ್ದಕ್ಕೆ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಆರ್‍ಎಸ್‍ಎಸ್‍ನ ದತ್ತಾತ್ರೇಯ ಹೊಸಬಾಳೆ, ಕೇಂದ್ರ ಗೃಹಸಚಿವ ಅಮಿತ್‍ಷಾ ಅವರಿಗೆ ಧನ್ಯವಾದ
ಅರ್ಪಿಸಲು ದೆಹಲಿಗೆ ತೆರಳಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಿಂದ ಇಳಿದ ನಂತರ ಬೆಂಗಳೂರಿಗೆ ಬಂದಾಗಲಷ್ಟೇ ವರಿಷ್ಠರನ್ನು ಭೇಟಿ ಮಾಡುತ್ತಿದ್ದರೇ ಹೊರತು, ದೆಹಲಿಗೆ ತೆರಳಿ ವರಿಷ್ಠರೊಂದಿಗೆ ಮಾತುಕತೆ ನಡೆಸುವ ಪ್ರಯತ್ನ ಮಾಡಿರಲಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ದಿನದಿಂದ ದಿನಕ್ಕೆ ಬಲಗೊಳ್ಳುತ್ತಿದೆ ಎಂಬ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರನ್ನು ಮತ್ತೆ ಮುನ್ನೆಲೆಗೆ ತರಲು ವರಿಷ್ಠರು ಅವರಿಗೆ ಸಂಸದೀಯ ಮಂಡಳಿ ಸದಸ್ಯತ್ವ ನೀಡಿದ್ದು, ಪುತ್ರನಿಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸ್ಥಾನ ನೀಡುವ ಸಾಧ್ಯತೆ ಇದೆ. ಆರ್‍ಎಸ್‍ಎಸ್ ಮುಖಂಡರ ಆಹ್ವಾನದ ಮೇರೆಗೆ ದೆಹಲಿಗೆ ತೆರಳಿದ ಯಡಿಯೂರಪ್ಪ, ಆರ್‍ಎಸ್‍ಎಸ್‍ನ ಪ್ರಮುಖ ಸಹ ಸಂಚಾಲಕ ದತ್ತಾತ್ರೇಯ ಹೊಸಬಾಳೆ ಜತೆಗೆ ಚುನಾವಣೆಗೆ ಸಂಬಂಧಿಸಿದಂತೆ ಸುದೀರ್ಘ ಚರ್ಚೆ ನಡೆಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಅವಧಿ ಆ.28ಕ್ಕೆ ಪೂರ್ಣ ಗೊಳ್ಳಲಿದ್ದು, ಅವರಿಂದ ತೆರವಾಗುವ ಸ್ಥಾನಕ್ಕೆ ಹೊಸಬರ ನೇಮಕಾತಿ ಸಂಬಂಧ ಈ ನಾಯಕರು ಚರ್ಚೆ ಮಾಡಿದ್ದಾರೆ. ಈ ಸ್ಥಾನಕ್ಕೆ ಮೂವರ ಹೆಸರು ಮುನ್ನೆಲೆಗೆ ಬಂದಿದ್ದು, ಆರ್‍ಎಸ್‍ಎಸ್ ಮುಖಂಡರು, ಬಿಜೆಪಿ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ ನಂತರ ಅಂತಿಮಗೊಳ್ಳಲಿದೆ ಎನ್ನಲಾಗಿದೆ.

ವರಿಷ್ಠರನ್ನು ಭೇಟಿಯಾದ ಸಂದರ್ಭದಲ್ಲಿ ಯಡಿಯೂರಪ್ಪ, ಕರ್ನಾಟಕದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಹೊಣೆಗಾರಿಕೆ ನನ್ನದು ಎಂದಿದ್ದಾರೆ. ಆದರೆ, ನಾನು ನೀಡುವ ಕೆಲವು ಸಲಹೆಗಳನ್ನು ಅನುಷ್ಠಾನಗೊಳಿಸುವಂತೆ ಸಲಹೆ ಮಾಡಿದ್ದಾರೆ ಎನ್ನಲಾಗಿದೆ. ಗಣೇಶ ಹಬ್ಬ ಮುಗಿದ ತಕ್ಷಣವೇ ರಾಜ್ಯಾದ್ಯಂತ ತಾವು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಪ್ರತ್ಯೇಕವಾಗಿ ಪ್ರವಾಸ ಕೈಗೊಂಡು ಕಾರ್ಯಕರ್ತರನ್ನು ಸಂಘಟಿಸುವುದಲ್ಲದೆ, ಪ್ರತಿಪಕ್ಷ ಕಾಂಗ್ರೆಸ್‍ನ ಆರೋಪಗಳಿಗೆ ಸಾರ್ವಜನಿಕವಾಗಿ ಉತ್ತರ ನೀಡುತ್ತೇವೆ. ಬಿಜೆಪಿ ಸರ್ಕಾರಕ್ಕೆ ಮೂರು ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ರಾಜ್ಯದ ಏಳು ಕಡೆ ಜನೋತ್ಸವ ಬೃಹತ್ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದು, ಪ್ರತಿ ಕಾರ್ಯಕ್ರಮದಲ್ಲಿ ವರಿಷ್ಠರೊಬ್ಬರು ಭಾಗವಹಿಸುವಂತೆ ನಡ್ಡಾ ಅವರಿಗೆ ಮನವಿ ಮಾಡಿದ್ದಾರೆ. ಸಂಸದೀಯ ಮಂಡಳಿ ಸದಸ್ಯರನ್ನಾಗಿ ನೇಮಕ ಮಾಡಿದ ನಂತರ ಯಡಿಯೂರಪ್ಪ ಅವರಲ್ಲಿ ಮತ್ತೆ ರಾಜಕೀಯದ ಹುರುಪು ಮೂಡಿದ್ದು, ಸ್ವಯಂಪ್ರೇರಿತವಾಗಿ ಪಕ್ಷವನ್ನು ಸಂಘಟಿಸಿ ನಾಯಕರನ್ನು ಬೀದಿಗಿಳಿಸಿ ಪಕ್ಷಕ್ಕೆ ಚೈತನ್ಯ ತುಂಬುವ ಉತ್ಸಾಹದಲ್ಲಿದ್ದಾರೆ.

Translate »