ಮೈಸೂರು, ನ.8(ಪಿಎಂ)- ಮೈಸೂರು ಮಹಾರಾಜರು ಮತ್ತು ಬ್ರಿಟಿಷರ ಕಾಲದ ರೈಲ್ವೆ ವ್ಯವಸ್ಥೆ ಮೇಲೆ ಬೆಳಕು ಚೆಲ್ಲುವ ಮೈಸೂ ರಿನ ಕೆಆರ್‍ಎಸ್ ರಸ್ತೆಯ `ಮೈಸೂರು ರೈಲ್ ಮ್ಯೂಸಿಯಂ (ಮೈಸೂರು ರೈಲು ವಸ್ತು ಸಂಗ್ರಹಾಲಯ)’ ನವರಾತ್ರಿಯಲ್ಲಿ ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸಿತ್ತು. ಪರಿಣಾಮ ದಸರಾ ವೇಳೆಯ 10 ದಿನ ಗಳಲ್ಲಿ 7 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ನೀಡಿ ಮ್ಯೂಸಿಯಂನ ಅಂದ-ಚೆಂದ ಕಣ್ತುಂಬಿಕೊಂಡರು. ಪ್ರವೇಶ ಶುಲ್ಕದಿಂ ದಲೇ ಮ್ಯೂಸಿಯಂಗೆ ಅಕ್ಟೋಬರ್‍ನಲ್ಲಿ 3.60 ಲಕ್ಷ ರೂ. ವರಮಾನ ಬಂದಿದೆ.
1979ರಲ್ಲಿ ಸ್ಥಾಪನೆಯಾಗಿರುವ, 3 ಎಕರೆ ವಿಸ್ತಾರವಾಗಿರುವ ಈ ವಸ್ತು ಸಂಗ್ರ ಹಾಲಯ ಅತ್ಯಂತ ಹಳೆಯ ರೈಲು ಮ್ಯೂಸಿಯಂ ಎಂಬ ಹೆಗ್ಗಳಿಕೆ ಹೊಂದಿದೆ. ವರ್ಷಕ್ಕೆ ಕನಿಷ್ಠ ಲಕ್ಷ ಮಂದಿ ಭೇಟಿ ನೀಡು ತ್ತಾರೆ(ಕೊರೊನಾ ಪೂರ್ವ). 9 ಕೋಟಿ ರೂ. ವೆಚ್ಚದಲ್ಲಿ ವರ್ಷ ಕಾಲ ನವೀಕರಣ ಕಾಮಗಾರಿ ನಡೆದು ಇದೇ ಮಾರ್ಚ್ 14ರಂದು ಮರು ಉದ್ಘಾಟನೆಗೊಂಡಿತು.
ಅಕ್ಟೋಬರ್ ತಿಂಗಳಲ್ಲಿ 10 ಸಾವಿರಕ್ಕೂ ಹೆಚ್ಚು ಮಂದಿ ಮ್ಯೂಸಿಯಂಗೆ ಭೇಟಿ ನೀಡಿ ರುವುದು ವಿಶೇಷ. ದಸರಾ ಮಹೋತ್ಸವ ದಲ್ಲಿ ವಿಶೇಷ ದೀಪಾಲಂಕಾರದಿಂದ ಕಂಗೊ ಳಿಸಿದ ಮ್ಯೂಸಿಯಂ, ಅ.17ರಿಂದ ಅ.26 ರವರೆಗೆ ಅಪಾರ ಸಂಖ್ಯೆಯ ವೀಕ್ಷಕರನ್ನು ತನ್ನತ್ತ ಸೆಳೆದಿತ್ತು. ದೀಪಾಲಂಕಾರ ವೀಕ್ಷಿ ಸಲು ಅನುಕೂಲವಾಗಲಿ ಎಂಬ ಕಾರಣಕ್ಕೆ ದಸರಾ ಅವಧಿಯಲ್ಲಿ ರಾತ್ರಿ 8ರವರೆಗೆ ಭೇಟಿ ಸಮಯ ನಿಗದಿ ಮಾಡಲಾಗಿತ್ತು (ಸಾಮಾನ್ಯ ದಿನಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 6).
ಇಲ್ಲಿನ ಪ್ರಮುಖ ಆಕರ್ಷಣೆಯಾದ ಮಕ್ಕಳ ರೈಲು ವಿದ್ಯುತ್ ದೀಪಗಳ ವಿನ್ಯಾಸ ದಲ್ಲಿ ಕಂಗೊಳಿಸಿತು. ಮಕ್ಕಳ ರೈಲು 4 ಬೋಗಿಗಳನ್ನು ಹೊಂದಿದ್ದು, ಒಂದು ಸುತ್ತಿಗೆ 600 ಮೀ. ವೃತ್ತಾಕಾರದಲ್ಲಿ ಕ್ರಮಿ ಸಲಿದೆ. ಡೀಸೆಲ್ ಯಂತ್ರದ ಮೂಲಕ ಚಲಿಸುವ ಈ ರೈಲಿನಲ್ಲಿ 30 ಮಂದಿ ಆಸೀನರಾಗಬಹುದು. ರೈಲ್ವೆ ಪರಂಪರೆ ಅನಾವರಣಗೊಳಿಸುವ ಈ ಮ್ಯೂಸಿಯಂ ಭಾರತ ರೈಲ್ವೆಯ ಮೊಟ್ಟ ಮೊದಲ ಪ್ರಾದೇಶಿಕ ಮ್ಯೂಸಿಯಂ ಕೂಡ ಆಗಿದೆ. ಈ ಹಿಂದಿನಿಂದಲೂ ಇಲ್ಲಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ `ಮಹಾರಾಣಿ ಸಲೂನ್’ ವಿಶೇಷ ಬೋಗಿ. ಇದಕ್ಕೆಂದರೆ ವಿಶೇಷ ದೀಪಾಲಂಕಾರ ಮಾಡದಿದ್ದರೂ ಮ್ಯೂಸಿಯಂ ಆವರಣದ ಬೆಳಕಿನ ಚಿತ್ತಾರ ಪ್ರತಿಬಿಂಬಗೊಂಡು ಇದೂ ದಸರಾ ವೇಳೆ ನೋಡುಗರನ್ನು ಬೆರಗುಗೊಳಿಸಿದೆ. ಈ ಬೋಗಿ ಹಿಂದೆ ಮೈಸೂರು ಮಹಾ ರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಧರ್ಮಪತ್ನಿ ಬಳಸುತ್ತಿದ್ದರು. ಇದು ರೋಸ್ ವುಡ್ ಮರದ ಅಲಂಕಾರ ಹೊಂದಿದೆ. ಇದರಲ್ಲಿ ಓದುವ ಕೊಠಡಿ, ಸೇವಕರ ಕೊಠಡಿ, ಮಡಿಸಬಹುದಾದ ವಾಶ್ ಬೇಸಿನ್, ಸ್ನಾನದ ಕೋಣೆ ಸೇರಿದಂತೆ ಹಲವು ಸೌಲಭ್ಯಗಳಿವೆ. ಒಂದು ಕಾಲದ ಐಷಾರಾಮಿ ವ್ಯವಸ್ಥೆಯ ಬೋಗಿ ಇದು.