ಸೋರುತಿಹುದು ಮೈಸೂರು ಚೆಲುವಾಂಬ ಆಸ್ಪತ್ರೆ ಕಟ್ಟಡ
ಮೈಸೂರು

ಸೋರುತಿಹುದು ಮೈಸೂರು ಚೆಲುವಾಂಬ ಆಸ್ಪತ್ರೆ ಕಟ್ಟಡ

November 20, 2021

ಮೈಸೂರು,ನ.19-ಕೆಲವು ದಿನಗಳಿಂದ ಸುರಿ ಯುತ್ತಿರುವ ಮಳೆಯಿಂದಾಗಿ ಮೈಸೂರಲ್ಲಿ ಅನೇಕ ಹಳೆಯ ಕಟ್ಟಡಗಳು ಕುಸಿಯುತ್ತಿವೆ. ಅಗ್ರಹಾರದ ಉತ್ತರಾದಿ ಮಠದ ರಸ್ತೆ, ಅಶೋಕ ರಸ್ತೆ, ಕೆ.ಟಿ.ಸ್ಟ್ರೀಟ್ ಹೀಗೆ ದಿನನಿತ್ಯ ಒಂದಿಲ್ಲೊಂದು ಕಟ್ಟಡ ಧರೆಗುರು ಳುತ್ತಿವೆ. ಇತ್ತೀಚೆಗೆ ಮೈಸೂರು ಮಾನಸಗಂಗೋ ತ್ರಿಯ ಜಯಲಕ್ಷ್ಮಿ ವಿಲಾಸ ಅರಮನೆಯ ಮೊದಲ ಮಹಡಿಯ ಮೇಲ್ಛಾವಣಿ ಸಹ ಕುಸಿದಿತ್ತು.

ಇದೀಗ ಅದೇ ಕುಸಿತದ ಹಾದಿಗೆ ಮೈಸೂರಿನ ಕೆ.ಆರ್.ಆಸ್ಪತ್ರೆ ಆವರಣದಲ್ಲಿರುವ ಪಾರಂಪರಿಕ ಕಟ್ಟಡ ಚೆಲುವಾಂಬ ಆಸ್ಪತ್ರೆಯೂ ಸೇರ್ಪಡೆಯಾಗುವ ಆತಂಕ ಮನೆ ಮಾಡಿದೆ. ಆಸ್ಪತ್ರೆಯ ಬಹುತೇಕ ಹೆರಿಗೆ ವಾರ್ಡ್‍ಗಳ ಗೋಡೆಗಳು ವಸ್ತಿ ಹಿಡಿದಿದ್ದು, ಕೈಯ್ಯಲ್ಲಿ ಮುಟ್ಟಿದರೆ ನೀರು ಅಂಟುತ್ತಿದೆ. ಕೆಲವು ವಾರ್ಡ್‍ಗಳಲ್ಲಿ ಆರ್‍ಸಿಸಿ ಮತ್ತು ಗೋಡೆಯ ನಡು ವಿನಿಂದ ನೀರು ಜಿನುಗತೊಡಗಿದೆ. ಗೋಡೆ ಮತ್ತು ಪಿಲ್ಲರ್‍ಗಳು ಸಂಪೂರ್ಣ ವಸ್ತಿ ಬಂದಿದೆ. ಪ್ರಯೋ ಗಾಲಯದೊಳಗೆ ಆರ್‍ಸಿಸಿ ಬಿರುಕು ಬಿಟ್ಟು ನೀರು ಸೋರಿಕೆಯಾಗಿ ನೆಲಕ್ಕೆ ನೀರು ತೊಟ್ಟಿಕ್ಕುತ್ತಿದೆ. ಆರ್‍ಸಿಸಿ, ಗೋಡೆ, ಪಿಲ್ಲರ್‍ಗಳು ನೀರು ಶೀತ ಹಿಡಿದಿವೆ. ಹಲವು ಗೋಡೆಗಳು ವಸ್ತಿ ಬಂದಿವೆ. ಆಸ್ಪತ್ರೆಯ ಒಳಾಂಗಣ ದಲ್ಲಿ ಒಮ್ಮೆ ಸುತ್ತಲೂ ಕಣ್ಣು ಹಾಯಿಸಿದರೆ ಕಟ್ಟಡದ ಗೋಡೆಗಳೆಲ್ಲವೂ ಮಳೆಯ ನೀರು ಹೀರಿಕೊಂಡು ಪಾಚಿ ಕಟ್ಟಿಕೊಂಡಿರುವುದು ಕಂಡು ಬರುತ್ತಿದೆ.

ಕೆಳ ಅಂತಸ್ತಿನ ಹೆರಿಗೆ ಕೊಠಡಿ, ವಾರ್ಡ್ ಸಂಖ್ಯೆ 3 ಮತ್ತು ಮೇಲಂತಸ್ತಿನ ವಾರ್ಡ್ ಸಂಖ್ಯೆ 8ರಲ್ಲಿ ಆರ್‍ಸಿಸಿ ಲೀಕೇಜ್ ಆಗುತ್ತಿದೆ. ವಾರ್ಡ್ ಸಂಖ್ಯೆ 6ರಲ್ಲಿ ಬಾಗಿಲೊಂದು ಬೀಳುವ ಸ್ಥಿತಿಯಲ್ಲಿದೆ. ಹೆರಿಗೆ ಗೆಂದು ಬರುವ ಗರ್ಭಿಣಿಯರು, ನವಜಾತ ಶಿಶುಗಳ ಆರೈಕೆದಾರರು ಸೇರಿದಂತೆ ಪ್ರತಿದಿನ ನೂರಾರು ಮಂದಿ ಓಡಾಡುವ ಆಸ್ಪತ್ರೆಯಲ್ಲಿ ಎಲ್ಲರೂ ಆತಂಕ ದಿಂದಲೇ ಓಡಾಡುವಂತಾಗಿದೆ ಎಂದು ಹೆರಿಗೆಗೆಂದು ತಮ್ಮ ಮಗಳನ್ನು ದಾಖಲು ಮಾಡಲು ಬಂದಿದ್ದ ಹೆಸರು ಹೇಳಲಿಚ್ಛಿಸದ ಮಹಿಳೆಯೊಬ್ಬರು `ಮೈಸೂರು ಮಿತ್ರ’ನಲ್ಲಿ ದೂರಿದರು.

130 ವರ್ಷಗಳಷ್ಟು ಹಳೆಯದಾದ ಚೆಲುವಾಂಬ ಆಸ್ಪತ್ರೆ ದೇಶದಲ್ಲಿ ವಾರ್ಷಿಕವಾಗಿ ಅತೀ ಹೆಚ್ಚು ಮಕ್ಕಳ ಜನನವಾಗುವ 2ನೇ ಹೆರಿಗೆ ಆಸ್ಪತ್ರೆ ಎಂಬ ಹೆಗ್ಗಳಿ ಕೆಗೆ ಪಾತ್ರವಾಗಿದೆ. ಇಲ್ಲಿ ವಾರ್ಷಿಕ ಸುಮಾರು 12 ಸಾವಿರ ಶಿಶುಗಳ ಜನನವಾಗುತ್ತದೆ. 15ಕ್ಕೂ ಹೆಚ್ಚು ಸಿಸೇರಿಯನ್ ಸೇರಿದಂತೆ 40-45 ಹೆರಿಗೆಗಳನ್ನು ನಿತ್ಯ ನಡೆಸುತ್ತದೆ. ಪ್ರತಿದಿನ ಮೈಸೂರು ಮತ್ತು ಇತರೆ ಜಿಲ್ಲೆಗಳಿಂದ 500 ರಿಂದ 600 ಹೊರ ರೋಗಿಗಳು ಭೇಟಿ ನೀಡುತ್ತಾರೆ. ಎಲ್ಲಾ ರೀತಿಯ ಸೌಲಭ್ಯಗಳನ್ನು ಹೊಂದಿರುವ ಚೆಲುವಾಂಬ ಆಸ್ಪತ್ರೆಯೇ ಸುರಕ್ಷಿತ ಹೆರಿಗೆಗೆ ಸೂಕ್ತ ಎಂಬುದು ಮಹಿಳೆಯರ ನಂಬಿಕೆ. ಹಾಗಾಗಿ ಈ ಆಸ್ಪತ್ರೆಗೆ ಮೈಸೂರು ನಗರ ಮತ್ತು ಜಿಲ್ಲೆಯಷ್ಟೇ ಅಲ್ಲ, ನೆರೆಯ ಜಿಲ್ಲೆಗಳಾದ ಚಾಮ ರಾಜನಗರ, ಮಂಡ್ಯ, ಕೊಡಗು, ಹಾಸನ ಸೇರಿದಂತೆ ಇನ್ನಿತರೆ ಜಿಲ್ಲೆಗಳಿಂದಲೂ ಹೆರಿಗೆಗೆ ದಾಖಲಾಗು ತ್ತಾರೆ. ಉತ್ತಮ ವೈದ್ಯರಿದ್ದಾರೆ ಎಂಬ ಕಾರಣಕ್ಕೆ ಹೊರ ರೋಗಿಗಳ ಭೇಟಿಯೂ ಹೆಚ್ಚಾಗಿದೆ.

420 ಹಾಸಿಗೆಗಳ ಈ ಹೆರಿಗೆ ಆಸ್ಪತ್ರೆಯಲ್ಲಿ ನವ ಜಾತ ಶಿಶುಗಳ ಆರೈಕೆ, ಮಕ್ಕಳ ಶಸ್ತ್ರಚಿಕಿತ್ಸೆ, ಅತಿ ಸಾರ ರೋಗಗಳ ಚಿಕಿತ್ಸೆ ಇನ್ನಿತರೆ ಚಿಕಿತ್ಸೆ ಒದಗಿ ಸುವ ವಿಶೇಷ ಘಟಕಗಳನ್ನು ಹೊಂದಿದೆ. 130 ಮಕ್ಕಳ ಹಾಸಿಗೆ ಮತ್ತು ಪ್ರಸೂತಿ ಮತ್ತು ಸ್ರ್ತೀರೋಗ ವಿಭಾಗದಲ್ಲಿ 280 ಹಾಸಿಗೆಗಳು ಸೇರಿದಂತೆ ಒಟ್ಟು 420 ಹಾಸಿಗೆಗಳನ್ನು ಹೊಂದಿದೆ. ನವಜಾತ ಶಿಶು ಗಳ ವಾರ್ಡ್, ಅತಿಸಾರ ರೋಗಗಳ ಘಟಕವನ್ನು ಸಹ ಹೊಂದಿದೆ. ಆಸ್ಪತ್ರೆಗೆ ಮೈಸೂರು, ಚಾಮ ರಾಜನಗರ, ಮಂಡ್ಯ, ಕೊಡಗು, ಹಾಸನ ಇನ್ನಿತರೆ ಜಿಲ್ಲೆಗಳಿಂದಲೂ ಹೆರಿಗೆಗಾಗಿ ದಾಖಲಾಗುವುದು ಸಾಮಾನ್ಯವಾಗಿದೆ. ಹೆರಿಗೆಗೆ ಬರುವವರು, ಅವರ ಆರೈಕೆದಾರರು, ಶಿಶು ಜನನದ ಬಳಿಕ ಬಾಣಂತಿ ಮತ್ತು ಶಿಶುವನ್ನು ನೋಡಲು ಬರುವವರ ಸಂಖ್ಯೆ ಸಾವಿರಕ್ಕೂ ಹೆಚ್ಚಾಗಿದೆ. ಹಾಗಾಗಿ ಈ ಆಸ್ಪತ್ರೆಗೆ ಕಾಯಕಲ್ಪ ಆಗಬೇಕು ಎಂಬುದು ಆಸ್ಪತ್ರೆಗೆ ಭೇಟಿ ನೀಡುತ್ತಿರುವವರ ಒತ್ತಾಯವಾಗಿದೆ.

 

Translate »