ಮೈಸೂರು ವಿವಿ ವಿಳಂಬ ಧೋರಣೆಗೆ ಸಂಸದ ಪ್ರತಾಪ್ ಸಿಂಹ ಅಸಮಾಧಾನ
ಮೈಸೂರು

ಮೈಸೂರು ವಿವಿ ವಿಳಂಬ ಧೋರಣೆಗೆ ಸಂಸದ ಪ್ರತಾಪ್ ಸಿಂಹ ಅಸಮಾಧಾನ

February 15, 2023

ಮೈಸೂರು, ಫೆ.14(ಎಂಕೆ)- ಮೈಸೂರು ವಿವಿ ಮಾನಸಗಂಗೋತ್ರಿ ಕ್ಯಾಂಪಸ್‍ನಲ್ಲಿರುವ ಜಯ ಲಕ್ಷ್ಮಿ ವಿಲಾಸ ಅರಮನೆಯಲ್ಲಿ ‘ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ’ ಸ್ಥಾಪನೆ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೊಂದಿಗಿನ ಒಡಂಬಡಿಕೆಗೆ(ಎಂಒಯು) ಮೈಸೂರು ವಿವಿ ಒಪ್ಪಿಗೆ ನೀಡದಿರುವುದಕ್ಕೆ ಸಂಸದ ಪ್ರತಾಪ್ ಸಿಂಹ ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರು ವಿವಿ ಕ್ರಾಫರ್ಡ್ ಭವನದ ಶಿಕ್ಷಣ ಮಂಡಳಿ ಸಭಾಂಗಣದಲ್ಲಿ ಮಂಗಳವಾರ ಮೈಸೂರು ವಿವಿ ಪ್ರಭಾರ ಕುಲಪತಿ ಪ್ರೊ.ಹೆಚ್.ರಾಜಶೇಖರ್, ಕುಲಸಚಿವೆ(ಆಡಳಿತ) ವಿ.ಆರ್.ಶೈಲಜಾ ಹಾಗೂ ಸಿಂಡಿಕೇಟ್ ಸದಸ್ಯರೊಂದಿಗೆ ಸಭೆ ನಡೆಸಿದ ಅವರು, ಜಯಲಕ್ಷ್ಮಿ ವಿಲಾಸ ಅರಮನೆ ಕಟ್ಟಡದಲ್ಲಿ ‘ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ’ ಸ್ಥಾಪನೆ ಸಂಬಂಧ ಒಂದು ನಿರ್ದಿಷ್ಟ ಅವಧಿಗೆ ಒಡಂಬಡಿಕೆ ಮಾಡಿಕೊಳ್ಳಲು ಈಗಾಗಲೇ ಸಿಂಡಿಕೇಟ್ ಸಭೆಯಲ್ಲಿ ಒಪ್ಪಿಗೆ ಪಡೆದು ಉನ್ನತ ಶಿಕ್ಷಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅನುಮೋದನೆ ಪಡೆದ ಬಳಿಕ ಮತ್ತೊಮ್ಮೆ ಹೊಸದಾಗಿ ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಎಂಒಯು ಸಿದ್ಧಪಡಿಸಿ, ಅನುಮೋದನೆ ಪಡೆಯುವಂತೆ ಕಳುಹಿಸುವುದು ಎಷ್ಟು ಸರಿ? ಮತ್ತೆ ಮತ್ತೆ ಅಧಿಕಾರಿಗಳ ಬಳಿ ಅಲೆದಾಡಿ ಒಪ್ಪಿಗೆ ಪಡೆಯುವುದು ಎಷ್ಟು ಕಷ್ಟವೆಂದು ಅಲೆದಾಡಿ ದವರಿಗೆ ಗೊತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತು ಎಂಟು ವರ್ಷಗಳಾದರೂ ಇಂದಿಗೂ ಸ್ವಂತ ಕಟ್ಟಡ ಇಲ್ಲ. ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರ ಸಂಸ್ಥೆಯನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುವ ನಿರ್ಧಾರ ಮಾಡಿತ್ತು. ಬಳಿಕ 2019 ರಲ್ಲಿ ಸಿ.ಟಿ.ರವಿ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದಾಗ ಮೈಸೂರಿನಲ್ಲೇ ಸಂಸ್ಥೆ ಉಳಿಯುವಂತೆ ಹಾಗೂ ಒಂದು ಸ್ವಂತ ಕಟ್ಟಡಕ್ಕೆ ಅನುದಾನ ನೀಡುವ ಬಗ್ಗೆ ನಿರ್ಣಯಿಸಿದ್ದರು. ಇದಾದ ನಂತರ ಮಾನಸಗಂಗೋತ್ರಿಯಲ್ಲಿ 4 ಎಕರೆ ಜಾಗ ನೀಡುವ ಬಗ್ಗೆ ಮಾತುಕತೆಯೂ ಆಗಿತ್ತು. ಹೊಸದಾಗಿ ಕಟ್ಟಡ ನಿರ್ಮಾಣಕ್ಕೆ ಹೆಚ್ಚು ಸಮಯ ವ್ಯರ್ಥವಾಗುವುದರಿಂದ ಮಾನಸ ಗಂಗೋತ್ರಿಯಲ್ಲಿ ಸಂಪೂರ್ಣವಾಗಿ ಶಿಥಿಲವಾ ಗಿರುವ ಜಯಲಕ್ಷ್ಮೀ ವಿಲಾಸ ಅರಮನೆಯನ್ನು ದುರಸ್ತಿ ಮಾಡಿಕೊಂಡು ಕಟ್ಟಡ ಬಳಕೆ ಮಾಡಿ ಕೊಳ್ಳಲು ನಿರ್ಧರಿಸಿ, ಪರಸ್ಪರ ಒಪ್ಪಂದ ಮಾಡಿ ಕೊಂಡು ಅದಕ್ಕೆ ಸಿಂಡಿಕೇಟ್‍ನಲ್ಲೂ ಒಪ್ಪಿಗೆ ಪಡೆಯಲಾಗಿದೆ. ಹೀಗಿದ್ದರೂ ಮೈಸೂರು ವಿಶ್ವವಿದ್ಯಾಲಯ ಕಟ್ಟಡ ಬಳಕೆಗೆ ಒಪ್ಪಿಗೆ ನೀಡು ತ್ತಿಲ್ಲವೇಕೆ ಎಂದು ಪ್ರಶ್ನಿಸಿದರು.

ಒಡಂಬಡಿಕೆ ಪ್ರಕಾರ ವಿಶ್ವವಿದ್ಯಾಲಯದ ಜಯಲಕ್ಷ್ಮಿ ವಿಲಾಸ ಅರಮನೆ ಕಟ್ಟಡವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ಬರುವ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಬಳಕೆ ಮಾಡಿಕೊಳ್ಳುವುದರ ಜೊತೆಗೆ ಇಡೀ ಕಟ್ಟಡವನ್ನು ದುರಸ್ತಿ ಮಾಡಲಾಗುವುದು. ಅದಕ್ಕಾಗಿ 27.5 ಕೋಟಿ ರೂ. ಅನುದಾನಕ್ಕೆ ಸಿದ್ಧಪಡಿಸಿದ್ದ ಡಿಪಿಆರ್‍ಗೂ ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿ ಸಿದ್ದರು. ಕಟ್ಟಡ ದುರಸ್ತಿಯಾದ ಬಳಿಕ ಒಂದು ಭಾಗದಲ್ಲಿ ಸಂಸ್ಥೆ ಕಾರ್ಯ ನಿರ್ವಹಿಸಿದರೆ ಉಳಿದ ಭಾಗಗಳನ್ನು ವಿಶ್ವವಿದ್ಯಾಲಯವೇ ಬಳಸಿಕೊಳ್ಳ ಬಹುದು. ಅಲ್ಲದೆ ಒಡಂಬಡಿಕೆ ಪ್ರಕಾರ ಕಾರ್ಯ ಚಟುವಟಿಕೆಗಳು ನಡೆಯದಿದ್ದರೆ ರದ್ದು ಮಾಡಿ ಕೊಳ್ಳಬಹುದು ಎಂದು ಅರ್ಥ ಮಾಡಿಸುವ ಪ್ರಯತ್ನ ಮಾಡಿದರು. ಬಳಿಕ ಮಾತನಾಡಿದ ವಿಶ್ವವಿದ್ಯಾಲಯ ಕುಲಸಚಿವೆ ಶೈಲಜಾ, ಎಂಒಯುಗೆ ಸಿಂಡಿಕೇಟ್‍ನಲ್ಲಿ ಅನುಮೋದನೆ ಪಡೆಯುವಾಗ ಕಾನೂನು ಅಭಿಪ್ರಾಯ ಪಡೆದಿ ರುವುದಿಲ್ಲ. ಹಾಗಾಗಿ ಮತ್ತೊಂದು ಎಂಒಯು ಸಿದ್ಧಪಡಿಸಲಾಗಿದ್ದು, ಅದನ್ನು ಸಿಂಡಿಕೇಟ್‍ನಲ್ಲಿಟ್ಟು ಒಪ್ಪಿಗೆ ಪಡೆಯಲಾಗುವುದು ಎಂದರಲ್ಲದೆ ಕಟ್ಟಡದಲ್ಲಿ ಜಾನಪದ ವಸ್ತು ಸಂಗ್ರಹಾಲಯ ಇರುವುದರಿಂದ ಡೆಕ್ಕನ್ ಹೆರಿಟೇಜ್‍ನಿಂದ ಜಾನಪದ ವಸ್ತುಗಳ ಸಂರಕ್ಷಣೆಗೆ ಅನುದಾನ ಪಡೆಯಲು ಎಂಒಯು ಮಾಡಿಕೊಳ್ಳಲಾಗಿದೆ. ಇದರಿಂದ ಕಟ್ಟಡ ಬೇರೆ ಉದ್ದೇಶಗಳಿಗೆ ನೀಡಲು ಅವಕಾಶವಿಲ್ಲ ಎಂದು ತಿಳಿಸಿದರು. ಇದಕ್ಕೆ ಸಿಡಿ ಮಿಡಿಗೊಂಡ ಸಂಸದರು, ಕಟ್ಟಡದ ಒಳಗಿರುವ ವಸ್ತುಗಳ ಸಂರಕ್ಷಣೆಗಾಗಿ ಕಟ್ಟಡವನ್ನೇ ಅವನತಿಗೆ ದೂಡುವುದು ಎಷ್ಟು ಸರಿ. ನಮಗೆ ಅಗತ್ಯವಿರು ವುದು ನಾಲ್ಕು ಕೊಠಡಿಗಳು ಮಾತ್ರ. ಉಳಿದವನ್ನು ನೀವೇ ಬಳಸಿಕೊಳ್ಳಿ. ಕನ್ನಡ ಭಾಷೆ ಉಳಿಸುವ ಕಾರ್ಯಮಾಡಿ. ಈಗಾಗಲೇ ಸಿನಿಮಾ ಶೂಟಿಂಗ್ ಗಳಿಂದ ಜಯಲಕ್ಷ್ಮಿ ವಿಲಾಸ ಅರಮನೆ ಕಟ್ಟಡ ಬಹುತೇಕ ಹಾಳಾಗಿದೆ. ‘ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ’ ಸ್ಥಾಪನೆಯ ಮೂಲಕವಾ ದರೂ ಮೈಸೂರು ಮಹಾರಾಜರು ನೀಡಿದ ಕೊಡುಗೆಯನ್ನು ಉಳಿಸುವ ಪ್ರಯತ್ನ ಇದಾಗಿದೆ. ಪದೇ ಪದೆ ಎಂಒಯು ಸಿದ್ಧಪಡಿಸಿ ಒಪ್ಪಿಗೆ ಪಡೆಯ ಬೇಕೆಂದರೆ ಕಷ್ಟ. ಐಎಎಸ್ ಅಧಿಕಾರಿಗಳು ಎಷ್ಟು ಬಾರಿ ಒಪ್ಪಿಗೆ ಸೂಚಿಸುವುದು ಎನ್ನುತ್ತಾರೆ. ನಾನೂ ಒಬ್ಬ ಕನ್ನಡ ಬರಹಗಾರ ಆಗಿರುವುದ ರಿಂದ ಕನ್ನಡ ಭಾಷೆಯ ಬೆಳವಣಿಗೆಗೆ ಸಣ್ಣ ಪ್ರಯತ್ನ ಮಾಡುತ್ತಿರುವೆ ಹೊರತು ಇದರಿಂದ ನನಗ್ಯಾವ ಮತಗಳು ಬರುವುದಿಲ್ಲ ಎಂದು ಸಿಟ್ಟಾದರು.

ಇನ್ನೆರಡು ದಿನದಲ್ಲಿ ನಿರ್ಧಾರ: ಪ್ರಭಾರ ಕುಲಪತಿ ಪ್ರೊ.ಹೆಚ್.ರಾಜಶೇಖರ್ ಮಾತನಾಡಿ, ಮೈಸೂರು ವಿವಿ ಮಾನಸಗಂಗೋತ್ರಿಯಲ್ಲಿಯೇ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಕಾರ್ಯನಿರ್ವಹಿಸಿದರೆ ವಿವಿಗೂ ಘನತೆ ಹೆಚ್ಚಲಿದೆ. ಜೊತೆಗೆ ನಮ್ಮ ವಿದ್ಯಾರ್ಥಿಗಳಿಗೂ ಅನುಕೂಲವಾಗ ಲಿದೆ. ಹಾಗೆಯೇ ಕನ್ನಡ ಭಾಷೆ ಬೆಳವಣಿಗೆ ಸಂಶೋ ಧನೆಗೆ ನೆರವಾಗಲಿದೆ. ಎರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಉಪ ನಿರ್ದೇಶಕ ಸುದರ್ಶನ್ ಹಾಗೂ ಸಿಂಡಿಕೇಟ್ ಸದಸ್ಯರು ಉಪಸ್ಥಿತರಿದ್ದರು.

Translate »