ಬೆಳೆಗಾರರ ಸಾಲದ ಮೇಲಿನ ಬಡ್ಡಿ ಮನ್ನಾಗೆ ಒತ್ತಾಯ
ನವದೆಹಲಿ, ಸೆ.24-ಲೋಕಸಭೆಯಲ್ಲಿ ಗುರುವಾರ ಕಾಫಿ ಬೆಳೆಗಾರರ ಸಂಕಷ್ಟವನ್ನು ಎಳೆ ಎಳೆಯಾಗಿ ಬಿಡಿಸಿಟ್ಟ ಕೊಡಗು-ಮೈಸೂರು ಸಂಸದ ಪ್ರತಾಪ್ ಸಿಂಹ ಅವರು, ಕಾಫಿ ಬೆಳೆಗಾರರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಬೇಕೆಂದು ಒತ್ತಾಯಿಸಿದರು. ದೇಶದ ಕಾಫಿ ಉತ್ಪಾದನೆ ಪೈಕಿ ಶೇ.70ರಷ್ಟು ಕಾಫಿ ಕರ್ನಾಟಕದಲ್ಲೇ ಉತ್ಪಾದನೆಯಾಗಲಿದೆ. ಶೇ.98 ರಷ್ಟು ಬೆಳೆಗಾರರು ಸಣ್ಣ ಮತ್ತು ಮಧ್ಯಮ ವರ್ಗದವರಿದ್ದಾರೆ. 2016-17ರಲ್ಲಿ ಅನಾವೃಷ್ಟಿಯಿಂದ ಕಾಫಿ ಬೆಳೆಗಾರರು ತತ್ತರಿಸಿದ್ದರು. ನಂತರ 2018ರಿಂದ ಸತತ 3 ವರ್ಷ ಕಾಲ ಮಹಾಮಳೆ, ಪ್ರವಾಹ ಹಾಗೂ ಭೂ ಕುಸಿತ ದಿಂದ ಕೊಡಗಿನ ಕಾಫಿ ಬೆಳೆಗಾರರು ತಾವು ಬೆಳೆದಿದ್ದ ಕಾಫಿ ಹಾಗೂ ಕರಿಮೆಣಸು ಬೆಳೆ ಯನ್ನು ಸಂಪೂರ್ಣವಾಗಿ ಕಳೆದುಕೊಂಡು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಭೂ ಕುಸಿತದ ಪರಿಣಾಮ ಕಾಫಿ ಮರುನಾಟಿ ಮಾಡಲೂ ಕೂಡ ಸಾಧ್ಯವಾಗುತ್ತಿಲ್ಲ ಎಂದು ವಿವರಿಸಿದರು. ಕಾಫಿ ಬೆಳೆಗಾರರಿಗೆ ಎನ್‍ಡಿಆರ್‍ಎಫ್ ಮಾರ್ಗಸೂಚಿ ಅನ್ವಯ ನೀಡಲಾಗುತ್ತಿರುವ ಪರಿಹಾರ ಯಾವುದಕ್ಕೂ ಸಾಲದಾಗಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದಾರೆ. ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ವಿತ್ತ ಸಚಿವರು ಕೂಡಲೇ ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಬೇಕು. ಕೊಡಗು ಜಿಲ್ಲೆಯಲ್ಲಿ ಸುಮಾರು 3 ಸಾವಿರ ಎಕರೆ ಕಾಫಿ ಬೆಳೆಯುವ ಭೂಮಿ ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, ಬೆಳೆಗಾರರು ದಿಕ್ಕು ತೋಚದಂತಾಗಿದ್ದಾರೆ. ಹಾಗಾಗಿ ಕಾಫಿ ಬೆಳೆಗಾರರ ಸಾಲದ ಮೇಲಿನ ಎಲ್ಲಾ ರೀತಿಯ ಬಡ್ಡಿಯನ್ನು ಮನ್ನಾ ಮಾಡಬೇಕೆಂದು ಪ್ರತಾಪ್ ಸಿಂಹ ಒತ್ತಾಯಿಸಿದರು.