ಡ್ರಗ್ಸ್ ಪ್ರಕರಣ: ನಿರೂಪಕಿ ಅನುಶ್ರೀಗೆ ಮಂಗಳೂರು ಸಿಸಿಬಿ ನೋಟಿಸ್ ಜಾರಿ ಇಂದು ವಿಚಾರಣೆಗೆ ಹಾಜರು
ಮೈಸೂರು

ಡ್ರಗ್ಸ್ ಪ್ರಕರಣ: ನಿರೂಪಕಿ ಅನುಶ್ರೀಗೆ ಮಂಗಳೂರು ಸಿಸಿಬಿ ನೋಟಿಸ್ ಜಾರಿ ಇಂದು ವಿಚಾರಣೆಗೆ ಹಾಜರು

September 25, 2020

ಬೆಂಗಳೂರು, ಸೆ.24-ಡ್ರಗ್ಸ್ ಪ್ರಕರಣಕ್ಕೆ ಸಂಬಂ ಧಿಸಿದಂತೆ ಕಿರುತೆರೆ ನಿರೂಪಕಿ ಅನುಶ್ರೀ ಅವರಿಗೆ ಮಂಗಳೂರು ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಬೆಂಗ ಳೂರಿನ ಮಹಾಲಕ್ಷ್ಮಿ ಲೇಔಟ್‍ನಲ್ಲಿರುವ ಅವರ ಫ್ಲಾಟ್‍ಗೆ ಗುರುವಾರ ಸಂಜೆ ಭೇಟಿ ನೀಡಿದ ಸಿಸಿಬಿ ಅಧಿಕಾರಿಗಳು, ಖುದ್ದು ನೋಟಿಸ್ ಜಾರಿ ಮಾಡಿ ಸೆ.26ರೊಳಗೆ ವಿಚಾರಣೆಗಾಗಿ ಮಂಗಳೂರು ಸಿಸಿಬಿ ಕಚೇರಿಗೆ ಹಾಜರಾಗುವಂತೆ ತಿಳಿಸಿದ್ದಾರೆ. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ಯಾನ್ಸರ್ ಗಳಾದ ಕಿಶೋರ್ ಶೆಟ್ಟಿ ಮತ್ತು ತರುಣ್ ಎಂಬುವರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದರು. ಇವರಿಬ್ಬರು ನೀಡಿದ ಹೇಳಿಕೆಯಂತೆ ಕಳೆದ 12 ವರ್ಷಗಳಿಂದ ಕಿಶೋರ್ ಶೆಟ್ಟಿ ಜೊತೆ ಸ್ನೇಹ ಹೊಂದಿರುವ ಅನುಶ್ರೀ ಅವರು, ಪಾರ್ಟಿಗಳಲ್ಲಿ ಡ್ರಗ್ಸ್ ಸೇವನೆ ಮಾಡು ತ್ತಿದ್ದರು. ಲಾಕ್‍ಡೌನ್ ಸಮಯದಲ್ಲೂ ಮಂಗಳೂರಿನಲ್ಲಿ ಆಯೋಜಿಸಲಾಗಿದ್ದ ಪಾರ್ಟಿಗಳಲ್ಲಿ ಅನುಶ್ರೀ ಭಾಗವಹಿಸಿದ್ದರು ಎಂದು ಹೇಳಲಾಗಿದೆ.

ಈ ಹಿನ್ನೆಲೆಯಲ್ಲಿ ಅನುಶ್ರೀ ಅವರಿಗೆ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಈ ಸಂಬಂಧ ಮಾಧ್ಯಮಗಳ ಜೊತೆ ಮಾತನಾಡಿದ ಅನುಶ್ರೀ, ತಾವು ನಾಳೆಯೇ (ಶುಕ್ರವಾರ) ಸಿಸಿಬಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಲಿರುವುದಾಗಿ ತಿಳಿಸಿದ್ದಾರೆ. ನಾನೇನೂ ತಪ್ಪು ಮಾಡಿಲ್ಲ. ನನಗೆ ಯಾವುದೇ ಭಯವಿಲ್ಲ ಎಂದಿರುವ ಅವರು, ಕಿರಣ್ ಶೆಟ್ಟಿ ಮತ್ತು ತರುಣ್ ತನಗೆ ಪರಿಚಯಸ್ಥರಷ್ಟೇ ಹೊರತು, ಆಪ್ತರಲ್ಲ ಎಂದು ಅವರು ಹೇಳಿದ್ದಾರೆ. ಕಳೆದ 12 ವರ್ಷಗಳ ಹಿಂದೆ ಡ್ಯಾನ್ಸರ್ ಆಗಿದ್ದ ತಮಗೆ ಕಿಶೋರ್ ಶೆಟ್ಟಿ ಕೊರಿಯೋಗ್ರಾಫರ್ ಆಗಿದ್ದರು. ತರುಣ್ ಡ್ಯಾನ್ಸ್ ತಂಡದಲ್ಲಿದ್ದರು ಎಂದು ಹೇಳಿದ ಅನುಶ್ರೀ, ಆನಂತರ ತಾವು ಕಿರು ತೆರೆಯ ನಿರೂಪಕರಾಗಿದ್ದರಿಂದ ಅವರ ಜೊತೆ ಯಾವುದೇ ರೀತಿಯ ಸಂಬಂಧವಿರಲಿಲ್ಲ. ಕಳೆದ ಮೂರು ವರ್ಷಗಳ ಹಿಂದೆ ಕಿಶೋರ್ ಶೆಟ್ಟಿಯವರ ಡ್ಯಾನ್ಸ್ ಕ್ಲಾಸ್ ಅನ್ನು ನಾನು ಉದ್ಘಾಟಿಸಿದ್ದೆ. ಅದನ್ನು ಬಿಟ್ಟರೆ ನಾನು ಯಾವುದೇ ಪಾರ್ಟಿಗೆ ಹೋಗಲಿಲ್ಲ. ಡ್ರಗ್ ಸೇವಿಸಿಯೂ ಇಲ್ಲ ಎಂದು ಅನುಶ್ರೀ ಸ್ಪಷ್ಟಪಡಿಸಿದ್ದಾರೆ.

ರಾಗಿಣಿ, ಸಂಜನಾಗೆ ಜೈಲಿನಲ್ಲಿಯೇ ಇಡಿ ಡ್ರಿಲ್
ಡ್ರಗ್ಸ್ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದ ಸೆರೆವಾಸದಲ್ಲಿರುವ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿಯನ್ನು ಇಡಿ (ಜಾರಿ ನಿರ್ದೇಶನಾಲಯ) ವಿಚಾರಣೆ ನಡೆಸಲಿದೆ. ನಾಳೆಯಿಂದ ಜೈಲಿನಲ್ಲಿಯೇ ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯ ನ್ಯಾಯಾಲಯದ ಅನುಮತಿ ಪಡೆದುಕೊಂಡಿದೆ.

ಡ್ರಗ್ಸ್ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪ ಕೇಳಿ ಬಂದ ಹಿನ್ನೆಲೆ ಇಡಿ ಪ್ರಕರಣ ದಾಖಲಿಸಿಕೊಂಡಿತ್ತು. ಡ್ರಗ್ಸ್ ಪ್ರಕರಣದಲ್ಲಿ ಇಬ್ಬರೂ ನಟಿಯರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿತ್ತು. ಐದು ದಿನಗಳ ಕಾಲ ಇಡಿ ಅಧಿಕಾರಿಗಳು ಜೈಲಿನಲ್ಲಿ ವಿಚಾರಣೆಗೆ ಕೋರ್ಟ್ ಅನುಮತಿ ನೀಡಿದೆ. ನಾಳೆಯಿಂದ ಒಟ್ಟು ಐದು ದಿನ ಇಡಿ ಇಬ್ಬರು ನಟಿಯರನ್ನು ವಿಚಾರಣೆಗೆ ಒಳಪಡಿಸಲಿದೆ. ರವಿಶಂಕರ್, ವೀರೇನ್ ಖನ್ನಾ, ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ. ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಜಾಮೀನು ಅರ್ಜಿಯ ವಿಚಾರಣೆ ನಾಳೆಗೆ ಮುಂದೂಡಿಕೆ ಆಗಿದೆ. ಪ್ರತೀಕ್ ಶೆಟ್ಟಿ ಜಾಮೀನು ಅರ್ಜಿ ವಿಚಾರಣೆ 28ಕ್ಕೆ ಮುಂದೂಡಿಕೆಯಾಗಿದೆ. ಆರೋಪಿಗಳಾದ ನಿಯಾಜ್ ಅಹಮ್ಮದ್ ಮತ್ತು ವೈಭವ್ ಜೈನ್ ಜಾಮೀನು ಅರ್ಜಿ ಸಹ ಸೆಪ್ಟೆಂಬರ್ 29ಕ್ಕೆ ಮುಂದೂಡಿಕೆಯಾಗಿದೆ.

ಮತ್ತೆ ಕಾರ್ತಿಕ್ ರಾಜು ಸಿಸಿಬಿ ವಶಕ್ಕೆ: ಚಂದನವನಕ್ಕೆ ಮಾದಕ ಜಾಲದ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೆÇಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಮಾದಕ ಜಾಲದ ನಂಟು ಆರೋಪದಡಿ ಈಗಾಗಲೇ ವಿಚಾರಣೆ ಎದುರಿಸಿದ್ದ ಆರೋಪಿ ಕಾರ್ತಿಕ್ ರಾಜುನನ್ನು ಸಿಸಿಬಿ ಪೆÇಲೀಸರು ಮತ್ತೆ ವಶಕ್ಕೆ ಪಡೆದಿದ್ದಾರೆ. ಸದ್ಯ ಚಾಮರಾಜಪೇಟೆಯ ಸಿಸಿಬಿ ಕಚೇರಿಯಲ್ಲಿ ಕಾರ್ತಿಕ್ ವಿಚಾರಣೆ ನಡೆಸಲಾಗುತ್ತಿದೆ.

ಕಾರ್ತಿಕ್, ಪ್ರತಿಷ್ಠಿತ ರೆಸಾರ್ಟ್‍ವೊಂದರ ಮಾಲೀಕರಾಗಿದ್ದಾರೆ. ಇವರ ರೆಸಾರ್ಟ್‍ನಲ್ಲಿ ಡ್ರಗ್ಸ್ ಪಾರ್ಟಿಗಳು ನಡೆಯುತ್ತಿದ್ದವು ಎನ್ನಲಾಗಿದೆ. ಬಂಧಿತ ಆರೋಪಿ ಕಾರ್ತಿಕ್ ಅವರ ರೆಸಾರ್ಟ್‍ನಲ್ಲಿ ಡ್ರಗ್ಸ್ ಪಾರ್ಟಿ ಮಾಡಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟ ಹಿನ್ನೆಲೆಯಲ್ಲಿ ಕಾರ್ತಿಕ್‍ರನ್ನು ಮತ್ತೊಮ್ಮೆ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ತಿಳಿದು ಬಂದಿದೆ.

ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಜೈಲಿನಲ್ಲಿದ್ದಾರೆ. ವಿಚಾರಣೆ ವೇಳೆ ಕಾರ್ತಿಕ್ ರಾಜು ಅವರು ಯಾವೆಲ್ಲ ಅಂಶಗಳನ್ನು ಬಾಯ್ಬಿಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

 

Translate »