ಕೊರೊನಾಗೆ ಬಸವ ಕಲ್ಯಾಣ ಶಾಸಕ ನಾರಾಯಣರಾವ್ ಬಲಿ
ಮೈಸೂರು

ಕೊರೊನಾಗೆ ಬಸವ ಕಲ್ಯಾಣ ಶಾಸಕ ನಾರಾಯಣರಾವ್ ಬಲಿ

September 25, 2020

ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ನಂತರ ಮತ್ತೊಬ್ಬ ಜನಪ್ರತಿನಿಧಿ ಸಾವು

ಬೆಂಗಳೂರು, ಸೆ.24(ಕೆಎಂಶಿ)-ಕೇಂದ್ರ ರೈಲ್ವೆ ಸಚಿವ ಸುರೇಶ್ ಅಂಗಡಿ ಕೊರೊನಾ ಸೋಂಕಿಗೆ ಬಲಿಯಾದ ಬೆನ್ನಲ್ಲೇ ಕಾಂಗ್ರೆಸ್‍ನ ಬಸವಕಲ್ಯಾಣದ ಶಾಸಕ ನಾರಾಯಣರಾವ್ ಇದೇ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿದ್ದಾರೆ. ಕೊರೊನಾ ಸೋಂಕು ರಾಜ್ಯದ ಪ್ರಮುಖ ಮೂವರು ಜನಪ್ರತಿನಿಧಿಗಳನ್ನು ಬಲಿ ತೆಗೆದುಕೊಂಡಿದೆ. ಕಳೆದ ವಾರ ಬಿಜೆಪಿಯ ರಾಜ್ಯಸಭಾ ಸದಸ್ಯ ಅಶೋಕ್ ಗಸ್ತಿ ನಿಧನರಾಗಿದ್ದರು. ಹಾಲಿ ವಿಧಾನಮಂಡಲದ 90ಕ್ಕೂ ಹೆಚ್ಚು ಸದಸ್ಯರಿಗೆ ಈ ರೋಗದ ಭೀತಿ ಕಂಡಿತ್ತು. ಈ ಮಹಾಮಾರಿಗೆ ಹೆದರಿ ಪ್ರಸಕ್ತ ನಡೆಯುತ್ತಿರುವ ಮಳೆಗಾಲದ ಅಧಿವೇಶನದಲ್ಲಿ ಬಹುತೇಕ ಸದಸ್ಯರು ಪಾಲ್ಗೊಳ್ಳುತ್ತಲೇ ಇಲ್ಲ. ನಾರಾಯಣ ರಾವ್ ಕಳೆದ 1 ತಿಂಗಳಿನಿಂದ ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇವರಿಗೆ ನ್ಯುಮೋನಿಯಾ, ರಕ್ತದೊತ್ತಡ, ಮಧುಮೇಹ ಸಮಸ್ಯೆಗಳಿದ್ದವು. ಅನಾರೋಗ್ಯದ ಹಿನ್ನೆಲೆಯಲ್ಲಿ ಬಸವ ಕಲ್ಯಾಣದಲ್ಲಿ ಚಿಕಿತ್ಸೆ ಪಡೆದು, ನಂತರ ಆರೋಗ್ಯ ಬಿಗಡಾಯಿಸುತ್ತಿದ್ದಂತೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಇವರ ನಿಧನಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಸಿಎಂ ಯಡಿಯೂರಪ್ಪ, ಪ್ರತಿ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿ ಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಕುಮಾರಸ್ವಾಮಿ, ಸಚಿವರು, ಶಾಸಕರು ಸೇರಿ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

 

Translate »