ಮೈಸೂರು, ಸೆ.24(ಆರ್‍ಕೆಬಿ)- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ಯಾವುದೇ ದುರುಪಯೋಗ ಆಗುವುದನ್ನು ತಡೆಗಟ್ಟುವ ಉದ್ದೇಶದಿಂದ ಶೀಘ್ರವೇ ಆನ್‍ಲೈನ್ ಖಾತಾ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಇಂದಿಲ್ಲಿ ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಗುರುವಾರ ಆಯೋಜಿ ಸಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡಿದ್ದ ಅವರು, ಆನ್‍ಲೈನ್ ಖಾತಾ ಜಾರಿಗಾಗಿ ವಿಶೇಷ ಸಾಫ್ಟ್‍ವೇರ್ ಅಭಿವೃದ್ಧಿ ತ್ವರಿತಗತಿ ಯಲ್ಲಿ ಸಾಗಿದೆ ಎಂದರು. 20-30 ವರ್ಷಗಳಿಗಿಂತ ಹೆಚ್ಚು ಕಾಲದಿಂದ ಮನೆ/ನಿವೇಶನದ ನಿರೀಕ್ಷೆಯಲ್ಲಿರುವ ವಿವಿಧ ವರ್ಗದ ಜನರ 85,000 ಅರ್ಜಿಗಳು ಬಾಕಿ ಇವೆ. ಆಧಾರ್, ಪಾನ್‍ಕಾರ್ಡ್ ಜೋಡಿಸಿ, ಜೇಷ್ಠತೆ ಆಧರಿಸಿ ನಿವೇಶನ ವಿತರಿಸಲಾಗುವುದು. ಇದರಿಂದ ಮುಡಾದಲ್ಲಿ ಭ್ರಷ್ಟಾಚಾರ ರಹಿತ ಪಾರದರ್ಶಕ ಕೆಲಸ ನಿರ್ವಹಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.
ಮುಡಾ ವ್ಯಾಪ್ತಿಯಲ್ಲಿನ ಅಕ್ರಮ ಕಟ್ಟಡ/ನಿವೇಶನಗಳ ಮಾಹಿತಿ ಪಡೆದಿದ್ದು, ಅವನ್ನು ತೆರವುಗೊಳಿಸಿ, ಗುಂಪು ಮನೆಗಳ ಯೋಜನೆಗೆ ಬಳಸಿಕೊಳ್ಳಲಾಗುವುದು. ಜೊತೆಗೆ ಒಂದಷ್ಟು ಬಿಡಿ ಮನೆಗಳನ್ನೂ ನಿರ್ಮಿಸಲಿದ್ದೇವೆ. `ನಿಮ್ಮ ಮನೆ ಗುಣಮಟ್ಟದಿಂದ ಕಟ್ಟಿಕೊಡುತ್ತೇವೆ’ ಎಂಬ ಯೋಜನೆಯನ್ನೂ ಪ್ರಾಧಿಕಾರ ಹೊಂದಿದೆ ಎಂದರು. 2012ರ ನಂತರ `ಗುಂಪು ಮನೆ’ ಯೋಜನೆ ಕಾರ್ಯಸಾಧ್ಯವಾಗಿಲ್ಲ. ಈಗ 5-6 ಸಾವಿರ ಗುಂಪು ಮನೆಗಳನ್ನು ಕಟ್ಟುವ ಪ್ರಯತ್ನದಲ್ಲಿ ದ್ದೇವೆ. ಕೆಳ ಮತ್ತು ಮಧ್ಯಮ ವರ್ಗದವರ ಸ್ವಂತ ಮನೆ ಕನಸನ್ನು ಗುಂಪುಮನೆ ಮತ್ತು ನಿವೇಶನ ರೂಪದಲ್ಲಿ ಈಡೇರಿಸುವುದು ಮುಡಾದ ಮುಖ್ಯ ಕೆಲಸ. ಸಾಕಷ್ಟು ಜನ ಸ್ವಂತ ಮನೆ/ನಿವೇಶನದ ನಿರೀಕ್ಷೆಯಲ್ಲಿದ್ದಾರೆ. ನಮಗೆ ನಿವೇಶನ ಸಿಗುವುದೇ ಇಲ್ಲ ಎಂದು ಹತಾಶೆಯಿಂದ ಕೈಚೆಲ್ಲಿದ್ದಾರೆ. ಅವರಿಗೆ ಮನೆ/ನಿವೇಶನ ಕೊಡಲಿದ್ದೇವೆ ಎಂದರು.
ಗುಣಮಟ್ಟ ನಿಗದಿಪಡಿಸಿ, ಗುಂಪುಮನೆ ನಿರ್ಮಿಸಲು ಸ್ಥಳೀಯ ಗುತ್ತಿಗೆದಾರರನ್ನೇ ಬಳಸಿಕೊಳ್ಳುವ ಬಗ್ಗೆ ಚರ್ಚೆ ನಡೆದಿದೆ. ಪ್ರಾಧಿಕಾರದ ಕೆಲಸ ಲಾಭ ಗಳಿಸುವುದಲ್ಲ. ಜನರಿಗೆ ಕಡಿಮೆ ಹಣದಲ್ಲಿ ಮನೆ, ನಿವೇಶನ ಒದಗಿಸುವುದಾಗಿದೆ ಎಂದು ಸ್ಪಷ್ಟಪಡಿಸಿದರು.
ಮೈಸೂರಿನ ಹೊರವಲಯದ ಡಿ.ಸಾಲುಂಡಿ, ಕೆರೆಹುಂಡಿ, ಉದ್ಬೂರು, ದೊಡ್ಡಹುಂಡಿ, ಬರಡನಪುರ, ಜಯಪುರ ಭಾಗದ ರೈತರೊಂದಿಗೆ ಚರ್ಚೆ ನಡೆಸಲಾಗುತ್ತಿದೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು 50:50 ಅನುಪಾತದಡಿ ಭೂಮಿ ಪಡೆದು, ನಿವೇಶನ ಅಭಿವೃದ್ಧಿ ಪಡಿಸಿ ವಿತರಿಸಲಿದ್ದೇವೆ. ಸ್ಯಾಟಲೈಟ್ ಟೌನ್, ಉಪನಗರಗಳ ನಿರ್ಮಾಣ ಉದ್ದೇಶವೂ ಇದೆ ಎಂದರು. ಹಸಿರು ಮೈಸೂರು ಯೋಜನೆಯಡಿ ಪ್ರಾಧಿಕಾರದ ವ್ಯಾಪ್ತಿಯ ಎಲ್ಲಾ ಉದ್ಯಾನಗಳನ್ನು ಹಸಿರೀಕರಣಗೊಳಿಸಲಾಗುವುದು. ಹಸಿರು ಮೈಸೂರು, ರಾಜೀವ್ ಸ್ನೇಹ ಬಳಗ ಸೇರಿದಂತೆ ವಿವಿಧ ಪರಿಸರ ಸಂಘಟನೆಗಳ ಸಹಕಾರ ಪಡೆಯಲಾಗುವುದು ಎಂದರು.
ಬಡಾವಣೆ ಹಸ್ತಾಂತರ: ಮುಡಾ ಅಭಿವೃದ್ಧಿಪಡಿಸಿದ ಬಡಾವಣೆಗಳನ್ನು ಪಾಲಿಕೆಗೆ ಹಸ್ತಾಂತರಿಸುವ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಸದ್ಯದಲ್ಲೇ ಮುಡಾ ಮತ್ತು ಪಾಲಿಕೆ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ಬಳಿಕ ಹಸ್ತಾಂತರ ಪ್ರಕ್ರಿಯೆ ಸುಸೂತ್ರವಾಗಿ ನಡೆಸಲಾ ಗುವುದು. ನನ್ನ ಅವಧಿಯಲ್ಲಿಯೇ ಮನೆ, ನಿವೇಶನ ಮಂಜೂರು ಮಾಡಿ, ಉದ್ಘಾಟನೆ ಮಾಡುವ ಇಚ್ಛೆಯಿದೆ. ಅದರಲ್ಲಿ ಯಶಸ್ವಿಯಾಗುವ ವಿಶ್ವಾಸವೂ ನನಗಿದೆ ಎಂದರು.
ಜಿಲ್ಲಾ ಪತ್ರಕರ್ತರ ಸಂಘಕ್ಕೆ ಸಿಎ ನಿವೇಶನ ನೀಡುವಂತೆ ಮಾಡಿದ ಮನವಿಗೆ ಪ್ರತಿಕ್ರಿಯಿಸಿದ ಮುಡಾ ಅಧ್ಯಕ್ಷರು, ಪ್ರಾಧಿಕಾರದ ಮೊದಲ ಸಭೆಯಲ್ಲಿಯೇ ಈ ಕುರಿತು ನಿರ್ಣಯ ಮಾಡಿ ಅಂತಿಮಗೊಳಿಸಲಾಗುವುದು ಎಂದು ಭರವಸೆ ನೀಡಿದರು. ಸಂವಾದದ ವೇಳೆ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಲೋಕೇಶ್‍ಬಾಬು ಉಪಸ್ಥಿತರಿದ್ದರು.