ಬೆಂಗಳೂರು, ಸೆ.24(ಕೆಎಂಶಿ)-ಭ್ರಷ್ಟಾಚಾರ, ವರ್ಗಾ ವಣೆ ದಂಧೆ, ರಾಜ್ಯದ ಜನತೆಯನ್ನು ಸಾಲದ ಸುಳಿಗೆ ಸಿಲುಕಿಸು ತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಮಂತ್ರಿಮಂಡಲ, ಸದನ ಹಾಗೂ ಜನರ ವಿಶ್ವಾಸ ಕಳೆದುಕೊಂಡಿದೆ. ಇಂಥ ಸರ್ಕಾರದ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ವಿಧಾನಸಭೆ ಯಲ್ಲಿ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದೆ.
ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ ನಂತರ ಸದನ ಸಮಾವೇಶಗೊಂಡಾಗ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ನಿಯಮ 167 ರಡಿಯಲ್ಲಿ ಸದನ ಸಮಾವೇಶಗೊಳ್ಳುವ ಮುನ್ನ ನೋಟಿಸ್ ನೀಡಿದ್ದೇವೆ. ಯಡಿಯೂರಪ್ಪ ನೇತೃತ್ವದ ಮಂತ್ರಿಮಂಡ ಲದ ಮೇಲೆ ಈ ಸದನ ವಿಶ್ವಾಸ ಕಳೆದುಕೊಂಡಿದೆ ಎಂದು ಹೇಳಲು ಮುಂದಾದರು. ಅಷ್ಟರಲ್ಲಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ನೀವು ನೀಡಿರುವ ನೋಟಿಸ್ ತಲುಪಿದೆ. ನಿಯಮಗಳ ಪ್ರಕಾರ ತೀರ್ಮಾನ ಮಾಡುವು ದಾಗಿ ಹೇಳಿ ವಿರೋಧ ಪಕ್ಷದ ನಾಯಕರು ನೀಡಿರುವ ಪ್ರಸ್ತಾವದ ಪರವಾಗಿರುವವರು ಎದ್ದು ನಿಲ್ಲಬೇಕು ಎಂದರು.
ಆಗ ಕಾಂಗ್ರೆಸ್ ಸದಸ್ಯರು ತಮ್ಮ ಸ್ಥಾನಗಳಲ್ಲಿ ಎದ್ದು ನಿಂತರು. ಸಿದ್ದರಾಮಯ್ಯ ಅವರು 23 ಸದಸ್ಯರ ಬೆಂಬಲ ಸಾಕು ನಾವು ಹೆಚ್ಚಾಗಿದ್ದೇವೆ ಎಂದರು. ಕಂದಾಯ ಸಚಿವ ಆರ್. ಅಶೋಕ್ ಅವರು ಹೆಚ್ಚಾದರೆ ಅಮೃತವೂ ವಿಷವಾಗಲಿದೆ ಎಂದು ಛೇಡಿಸಿದರು. ವಿರೋಧ ಪಕ್ಷದ ನಾಯಕರ ಪ್ರಸ್ತಾವಕ್ಕೆ ಸದನದ ಅನುಮತಿ ಇದೆ ಎಂದು ಘೋಷಿಸಿದ ಸಭಾಧ್ಯ ಕ್ಷರು, ಈ ವಿಷಯದ ಚರ್ಚೆಗೆ ದಿನಾಂಕ ಮತ್ತು ಸಮಯ ವನ್ನು ನಾಳೆ ನಾಡಿದ್ದರೊಳಗೆ ಮಾಡುವುದಾಗಿ ಪ್ರಕಟಿಸಿದರು.
ಅವಿಶ್ವಾಸ ಮಂಡನೆಗೂ ಮುನ್ನ ನಡೆದ ಪಕ್ಷದ ಶಾಸ ಕಾಂಗ ಸಭೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಗೊತ್ತುವಳಿ ಮಂಡಿಸಿ ಕಳೆದ 16 ತಿಂಗಳಲ್ಲಿ ಈ ಸರ್ಕಾರ ಮಾಡಿರುವ ಭ್ರಷ್ಟಾಚಾರವನ್ನು ಎಳೆ ಎಳೆಯಾಗಿ ಬಯಲಿಗೆಳೆಯಬೇಕೆಂದು ತೀರ್ಮಾನ ತೆಗೆದುಕೊಂಡಿತು.
ಸಭೆಯ ನಂತರ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸುದ್ದಿಗಾರರೊಂ ದಿಗೆ ಮಾತನಾಡಿ, ರಾಜ್ಯದ ಬಿಜೆಪಿ ಸರ್ಕಾರ ಸದನ ಹಾಗೂ ಜನರ ವಿಶ್ವಾಸ ಕಳೆದುಕೊಂಡಿದೆ. ಇಂತಹ ಸರ್ಕಾರ ಮುಂದು ವರೆಯಬಾರದು. ಮುಖ್ಯಮಂತ್ರಿ ಯಡಿಯೂರಪ್ಪ ಕುಟುಂಬ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅವರ ಪುತ್ರ ವಿಜಯೇಂದ್ರ, ಅವರ ಅಳಿಯ ಹಾಗೂ ಮೊಮ್ಮಗ ಸರ್ಕಾರದ ಆಡಳಿತ ದಲ್ಲಿ ಮೂಗು ತೂರಿಸಿ ಲಂಚಾವತಾರ ತಾಂಡವವಾಡಿಸು ತ್ತಿದೆ. ವರ್ಗಾವಣೆ ದಂಧೆ, ಅಭಿವೃದ್ಧಿ ಕಾರ್ಯಗಳ ಗುತ್ತಿಗೆ ನೀಡುವಾಗ ಶೇ.10ರಷ್ಟು ಕಮಿಷನ್, ರೈತ ಮತ್ತು ಜನ ವಿರೋಧಿ ಕಾನೂನುಗಳನ್ನು ತಂದು ಸುಲಿಗೆ ಮಾಡುತ್ತಿ ದ್ದಾರೆ. ಯಡಿಯೂರಪ್ಪ ಬಂದ ನಂತರ ಲಕ್ಷದ ಒಂದು ಸಾವಿರ ಕೋಟಿ ರೂ ಸಾಲ ಮಾಡಿ ಜನರ ಮೇಲೆ ಹೊರಿಸುತ್ತಿದ್ದಾರೆ. ಸರ್ಕಾರದಲ್ಲಿ ನಾಯಕತ್ವದ ಮೇಲೆಯೇ ವಿಶ್ವಾಸವಿಲ್ಲ. ಅವರಲ್ಲೇ ಹೊಡೆದಾಟಗಳು ನಡೆಯುತ್ತಿವೆ. ಯಾರನ್ನು ಮೇಲಕ್ಕೇರಿಸಬೇಕು, ಯಾರನ್ನು ಕೆಳಗಿಸಬೇಕು ಎಂಬ ಪ್ರಯತ್ನಗಳು ನಡೆಯುತ್ತಿವೆ.
ರೈತರನ್ನು, ರೈತ ಭೂಮಿಯನ್ನು ಮಾರುತ್ತಿದ್ದಾರೆ. ಎಲ್ಲವನ್ನೂ ಬಹುರಾಷ್ಟ್ರೀಯ ಕಂಪನಿಯ ಅಧೀನಕ್ಕೆ ಒಳಪಡಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಪುತ್ರ ವಿಜಯೇಂದ್ರ ಹಸ್ತಕ್ಷೇಪ ಮಿತಿ ಮೀರಿದೆ. ಇದರಿಂದ ಆಡಳಿತ ಪಕ್ಷದ ಶಾಸಕರೇ ರೋಸಿ ಹೋಗಿದ್ದಾರೆ. ಅಷ್ಟೇ ಅಲ್ಲ, ಅಧಿಕಾರ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಕೊರೊನಾ ಸೋಂಕು ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ವೈದ್ಯಕೀಯ ಸಾಮಗ್ರಿ, ಲ್ಯಾಪ್‍ಟಾಪ್ ಖರೀದಿಯಲ್ಲೂ ಭ್ರಷ್ಟಾಚಾರ ನಡೆದಿದೆ. ಎಲ್ಲ ಇಲಾಖೆಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅಭಿವೃದ್ಧಿಯ ಬದಲು ಜೇಬು ತುಂಬಿಸಿಕೊಳ್ಳುತ್ತಿದ್ದಾರೆಂದು ಆರೋಪಿಸಿದರು. ಅವಿಶ್ವಾಸ ಪ್ರಸ್ತಾಪದ ಸಂದರ್ಭದಲ್ಲಿ ಕಂದಾಯ ಸಚಿವ ಅಶೋಕ್ ನಿಮಗೆ (ಕಾಂಗ್ರೆಸ್) ಬಹುಮತ ಇಲ್ಲ. ದೇಶದಲ್ಲೂ ಇಲ್ಲ. ರಾಜಕೀಯಕ್ಕಾಗಿ ಈ ಪ್ರಸ್ತಾವ. ನಮಗೆ ಬಹುಮತ ಸಿಗಲಿದ್ದು, ಕಾಂಗ್ರೆಸ್‍ನವರ ಬೆಂಬಲವೂ ಸಿಗಲಿದೆ ಎಂದಾಗ ಸಿದ್ದರಾಮಯ್ಯ ಅವರು, ಮತಕ್ಕೆ ಹಾಕಿದರೆ ನಮ್ಮ ಪರ ಬಿಜೆಪಿಯವರು ಹಾಕುತ್ತಾರೆ. ಅವಿಶ್ವಾಸ ನಿರ್ಣಯ ಮಂಡನೆಗೆ ಒಪ್ಪಿಗೆ ಸಿಕ್ಕಿದೆ. ಸರ್ಕಾರ ಮಹತ್ವದ ತೀರ್ಮಾನ ಕೈಗೊಳ್ಳಬಾರದು ಎಂದರು.