ಸಾರ್ವಜನಿಕ ವೀಕ್ಷಣೆಗೆ `ರತ್ನ ಖಚಿತ ಸಿಂಹಾಸನ’ ಮುಕ್ತ 
ಮೈಸೂರು

ಸಾರ್ವಜನಿಕ ವೀಕ್ಷಣೆಗೆ `ರತ್ನ ಖಚಿತ ಸಿಂಹಾಸನ’ ಮುಕ್ತ 

September 25, 2020

ಮೈಸೂರು, ಸೆ.24(ಎಂಟಿವೈ)- ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ದರ್ಬಾರ್ ಹಾಲ್‍ನಲ್ಲಿ ಜೋಡಿಸಲಾಗಿರುವ ರತ್ನ ಖಚಿತ ಚಿನ್ನದ ಸಿಂಹಾಸನ ದರ್ಶನ ಭಾಗ್ಯ ಈ ವರ್ಷವೂ ಪ್ರವಾಸಿಗರಿಗೆ ಲಭ್ಯವಿದ್ದು, ಅರಮನೆಯ ಪ್ರವೇಶ ಶುಲ್ಕದೊಂದಿಗೆ ಹೆಚ್ಚುವರಿಯಾಗಿ 50 ರೂ. ಪಾವತಿಸಿದರೆ ಸಿಂಹಾಸನ ಕಣ್ತುಂಬಿಕೊಳ್ಳಬಹುದಾಗಿದೆ.

ಅರಮನೆಯಲ್ಲಿ ನಡೆಯಲಿರುವ ಖಾಸಗಿ ದರ್ಬಾರ್‍ಗಾಗಿ ಸಿಂಹಾಸನವನ್ನು ದರ್ಬಾರ್ ಹಾಲ್‍ನಲ್ಲಿ ಈ ಬಾರಿಯೂ ಈಗಾಗಲೇ ಜೋಡಿಸಲಾಗಿದೆ. ದಸರಾ ಮಹೋತ್ಸವ ಮುಗಿದ ನಂತರ ಸಿಂಹಾಸನವನ್ನು ಪ್ರತ್ಯೇಕ ಗೊಳಿಸಿ ಸ್ಟ್ರಾಂಗ್ ರೂಮ್‍ನಲ್ಲಿ ಸುರಕ್ಷಿತವಾಗಿ ಡುವ ಪದ್ಧತಿ ಹಿಂದಿನಿಂದಲೂ ಅನುಸರಣೆ ಆಗುತ್ತ್ತಿದೆ. ಈ ಹಿನ್ನೆಲೆಯಲ್ಲಿ ಕೇವಲ ದಸರಾ ಮಹೋ ತ್ಸವದ ಸಂದರ್ಭದಲ್ಲಿ ವರ್ಷದಲ್ಲಿ 25ರಿಂದ 35 ದಿನ ಮಾತ್ರ ಸಿಂಹಾಸನ ದರ್ಬಾರ್ ಹಾಲ್‍ನಲ್ಲಿ ರುತ್ತದೆ. ಯದುವಂಶದ ಪ್ರತೀಕವೂ, ಅರಸೊತ್ತಿಗೆ ವೈಭವಕ್ಕೆ ನೈಜ ಸಾಕ್ಷಿಯಂತಿರುವ ಸಿಂಹಾಸನ ವನ್ನು ನೋಡಲು ಜನರು ಕಾತುರದಿಂದಿರುತ್ತಾರೆ. ಈ ಹಿಂದೆಲ್ಲಾ ದಸರಾ ಸಂದರ್ಭದಲ್ಲಿ ಅರಮನೆಗೆ ಬರುವ ಪ್ರವಾಸಿಗರಿಗೆ ಸಿಂಹಾಸನ ವೀಕ್ಷಣೆಗೆ ಅವಕಾಶ ನೀಡಲಾಗುತ್ತಿತ್ತು. ಆದರೆ ಕಳೆದ 8 ವರ್ಷ ದಿಂದ ಸುರಕ್ಷತೆ ದೃಷ್ಟಿಯಿಂದ ಸಿಂಹಾಸನ ಸುರಕ್ಷತೆ ಕಾಯ್ದುಕೊಳ್ಳಲಾಗುತ್ತಿತ್ತು. ಆದರೆ ಸಾರ್ವಜನಿಕ ವಲಯದಿಂದ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಕಳೆದ 2 ವರ್ಷದಿಂದ ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಮತ್ತೆ ಸಿಂಹಾಸನ ವೀಕ್ಷಣೆಗೆ ಪ್ರತ್ಯೇಕ 50 ರೂ.ಶುಲ್ಕ ಪಡೆದು, ಅವಕಾಶ ನೀಡು ವಂತೆ ಸೂಚಿಸಿದ್ದರು. ಹಾಗಾಗಿ ಈ ಬಾರಿಯೂ ಪ್ರವಾಸಿಗರಿಗೆ ಸಿಂಹಾಸನ

ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಈ ಸಾಲಿನ ದಸರಾ ಮಹೋತ್ಸವದ ಅಂಗವಾಗಿ ಸೆ.18ರಂದು ಸಿಂಹಾಸನ ಜೋಡಿಸಲಾಗಿತ್ತು. ಪ್ರವಾಸಿಗರ ಬೇಡಿಕೆಯಂತೆ ಸೆ.22ರಿಂದಲೇ ಹೆಚ್ಚುವರಿ 50 ರೂ. ಪಾವತಿಸಿ ಟಿಕೆಟ್ ಪಡೆಯುವ ಪ್ರವಾಸಿಗರಿಗೆ ಸಿಂಹಾಸನ ವೀಕ್ಷಣೆಗೆ ಅವಕಾಶ ನೀಡಲಾಗುತ್ತಿದೆ. ಅರಮನೆಗೆ ವಯಸ್ಕರು 70 ರೂ. ಮಕ್ಕಳಿಗೆ 35 ರೂ. ಪ್ರವೇಶ ದರವಿದ್ದು, ಸಿಂಹಾಸನ ವೀಕ್ಷಣೆಗೆ 50 ರೂ. ಹೆಚ್ಚುವರಿಯಾಗಿ ಪಾವತಿಸಿದರೆ, ಕೈಗೆ ಹಸಿರು, ಕೆಂಪು ಬಣ್ಣದ ಬ್ಯಾಂಡ್ ಕಟ್ಟಲಾಗುತ್ತದೆ. (ಆದರೆ ಗುರುವಾರ ಹಳದಿ ಬಣ್ಣದ ಬ್ಯಾಂಡ್ ಕಟ್ಟಲಾಗಿತ್ತು.) ದರ್ಬಾರ್ ಹಾಲ್ ಬಳಿ ಬರುತ್ತಿದ್ದಂತೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಿ, ಸಿಂಹಾಸನ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಬಲರಾಮ, ವರಾಹ ಗೇಟ್‍ನಲ್ಲಿರುವ ಟಿಕೆಟ್ ಕೌಂಟರ್ ಮಾತ್ರವಲ್ಲದೆ, ದರ್ಬಾರ್ ಹಾಲ್ ಬಳಿಯೂ ಸಿಂಹಾಸನ ವೀಕ್ಷಣೆಗೆ ಟಿಕೆಟ್ ಹಾಗೂ ಬ್ಯಾಂಡ್ ನೀಡಲಾಗುತ್ತಿದೆ. ಸಿಂಹಾಸನ ವೀಕ್ಷಿಸಿದ ನಂತರ ಎಲ್ಲರಿಂದ ಬ್ಯಾಂಡ್ ಹಿಂಪಡೆದು ಕಸದ ಬುಟ್ಟಿಗೆ ಹಾಕಲಾಗುತ್ತಿತ್ತು.

1 ತಿಂಗಳು ವೀಕ್ಷಣೆಗೆ ಅವಕಾಶ: ಕಳೆದ 2 ದಿನದಿಂದ ಅರಮನೆಗೆ ಬರುವ ಪ್ರವಾಸಿಗರಿಗೆ ಸಿಂಹಾಸನ ವೀಕ್ಷಣೆಗೆ ಅವಕಾಶ ನೀಡಲಾಗುತ್ತಿದೆ. ಈ ವರ್ಷದಲ್ಲಿ ಅಧಿಕ ಮಾಸ ಇರುವುದ ರಿಂದ ನವರಾತ್ರಿ ಆರಂಭಕ್ಕೂ 1 ತಿಂಗಳು ಮುನ್ನವೇ ದರ್ಬಾರ್ ಹಾಲ್‍ನಲ್ಲಿ ಸಿಂಹಾಸನ ಜೋಡಣೆ ಮಾಡಲಾಗಿದೆ. ಅ.17ರಂದು ನವರಾತ್ರಿ ಆರಂಭವಾಗಲಿದ್ದು, ಅಂದು ಬೆಳಿಗ್ಗೆ ಸಿಂಹಾಸನಕ್ಕೆ `ಸಿಂಹ’ ಜೋಡಿಸಲಾಗುತ್ತದೆ. ಅಂದು ಬೆಳಿಗ್ಗೆ ಮತ್ತು ಸಂಜೆ 2 ಬಾರಿ ಖಾಸಗಿ ದರ್ಬಾರ್ ನಡೆಯಲಿರುವುದರಿಂದ ಸಿಂಹಾಸನ ವೀಕ್ಷಣೆಗೆ ಪ್ರವಾಸಿಗರಿಗೆ ನಿರ್ಬಂಧವಿದೆ. ಅ.25ರಂದು ಆಯುಧಪೂಜೆ, ಅ.26ರಂದು ವಿಜಯದಶಮಿ ದಿನ ಅರಮನೆಗೆ ಪ್ರವೇಶ ನಿರ್ಬಂಧಿಸಲಾಗುತ್ತದೆ. ಹಾಗಾಗಿ ಈ 3 ದಿನ ಸಿಂಹಾಸನ ವೀಕ್ಷಣೆಗೆ ಅವಕಾಶವಿರುವು ದಿಲ್ಲ. ಜಂಬೂಸವಾರಿ ಮುಗಿದ ನಂತರ 1 ವಾರ ಕಾಲ ಸಿಂಹಾಸನ ವೀಕ್ಷಣೆಗೆ ಅವಕಾಶ ವಿದ್ದು, ಆ ನಂತರ ಬಿಗಿ ಭದ್ರತೆಯಲ್ಲಿ ದರ್ಬಾರ್ ಹಾಲ್‍ನಲ್ಲಿರುವ ಸಿಂಹಾಸನ ಹಾಗೂ ಕನ್ನಡಿ ತೊಟ್ಟಿಯಲ್ಲಿರುವ ಭದ್ರಾಸನದ ಬಿಡಿ ಭಾಗಗಳಾಗಿ ವಿಂಗಡಿಸಿ ಅರಮನೆಯ ನೆಲಮಾಳಿಗೆ ಯಲ್ಲಿರುವ ಸ್ಟ್ರಾಂಗ್‍ರೂಮ್‍ನಲ್ಲಿ ಸುರಕ್ಷಿತವಾಗಿಡಲಾಗುತ್ತದೆ. ಕೋವಿಡ್-19 ಹಿನ್ನೆಲೆ ಯಲ್ಲಿ ಅರಮನೆಗೆ ಪ್ರವಾಸಿಗರ ಸಂಖ್ಯೆ ಕ್ಷೀಣಿಸಿದ್ದು, ದಿನಕ್ಕೆ 500-600 ಮಂದಿಯಷ್ಟೇ ಸಿಂಹಾಸನ ವೀಕ್ಷಿಸಲು ಬರುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.ಸಾವಿರಾರು ಮಂದಿ ಇಂದು ಹೆಚ್ಚುವರಿಯಾಗಿ 50 ರೂ. ಪಾವತಿಸಿ ದರ್ಬಾರ್ ಹಾಲ್‍ನಲ್ಲಿದ್ದ ರತ್ನ ಖಚಿತ ಸಿಂಹಾಸನ ವನ್ನು ವೀಕ್ಷಿಸಿದರು. ಬೆಳಿಗ್ಗೆ 9.30ರಿಂದ ಸಂಜೆ 5.30ರವರೆಗೆ ವೀಕ್ಷಣೆಗೆ ಅವಕಾಶವಿತ್ತು.

 

 

Translate »