ಭಾರೀ ವಿರೋಧದ ನಡುವೆಯೂ ಕ್ವಾರಿಗಳಿಗೆ ಸಂಸದೆ ಸುಮಲತಾ ಭೇಟಿ
ಮಂಡ್ಯ

ಭಾರೀ ವಿರೋಧದ ನಡುವೆಯೂ ಕ್ವಾರಿಗಳಿಗೆ ಸಂಸದೆ ಸುಮಲತಾ ಭೇಟಿ

July 8, 2021

ಶ್ರೀರಂಗಪಟ್ಟಣ, ಜು.7-ಮಂಡ್ಯ ಸಂಸದೆ ಸುಮಲತಾ ಅವರು ಬುಧವಾರ ಮಧ್ಯಾಹ್ನ ತಾಲೂಕಿನ ಕೆಲವು ಕಲ್ಲು ಕ್ವಾರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೆಲವೆಡೆ ಗ್ರಾಮಸ್ಥರು ಕ್ವಾರಿಯಲ್ಲಿ ಸ್ಫೋಟಕ ಬಳಸುತ್ತಿರುವುದರಿಂದ ಆಗುತ್ತಿ ರುವ ತೊಂದರೆ ಬಗ್ಗೆ ಅಳಲು ತೋಡಿ ಕೊಂಡರು. ದೊಡ್ಡವರು ಅಕ್ರಮವಾಗಿ ನಡೆಸುವ ಕ್ವಾರಿ ಬಿಟ್ಟು ಸಣ್ಣಪುಟ್ಟವರ ಮೇಲೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಗ್ರಾಮಸ್ಥರು ಸಂಸದೆ ಜೊತೆ ದೂರಿದರು. ಹಂಗರಹಳ್ಳಿಯಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರು ಜೆಡಿಎಸ್ ನವರ ಕ್ವಾರಿ ಮಾತ್ರ ಪರಿಶೀಲನೆ ಮಾಡ ಲಾಗುತ್ತಿದೆ ಎಂದು ಆಕ್ಷೇಪಿಸಿದರು.

ಕೆಲವು ಕ್ವಾರಿಗಳಿಗೆ ಸಂಸದೆ ಭೇಟಿ ನೀಡಲು ಹೋದಾಗ ಅಲ್ಲಿಗೆ ವಾಹನ ತೆರಳ ದಂತೆ ರಸ್ತೆಗೆ ಮಣ್ಣು ಗುಡ್ಡೆ ಹಾಕಲಾಗಿತ್ತು. ಆಗ ವಾಹನದಿಂದ ಕೆಳಗಿಳಿದ ಸುಮ ಲತಾ, ಕಾಲ್ನಡಿಗೆಯಲ್ಲೇ ಕ್ವಾರಿಗೆ ತೆರಳಿ ಪರಿಶೀಲಿಸಿದರು. ಅಕ್ರಮವಾಗಿ ನಡೆಯು ತ್ತಿರುವ ಕ್ವಾರಿಗಳು ಯಾರ ಒಡೆತನಕ್ಕೆ ಸೇರಿದ್ದು ಎಂದು ಗ್ರಾಮಸ್ಥರೆದುರೇ ಜಿಲ್ಲಾಧಿಕಾರಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಯನ್ನು ಕೇಳಿದಾಗ ಕ್ವಾರಿ ಯಾರ ಒಡೆತನದ್ದು ಎಂಬುದು ಗೊತ್ತಿಲ್ಲ ಎಂಬ ಉತ್ತರ ಬಂತು. ಆಗ ಗರಂ ಆದ ಸಂಸದೆ, ಇಷ್ಟು ದೊಡ್ಡ ಮಟ್ಟದಲ್ಲಿ ಅಕ್ರಮ ನಡೆಯು ತ್ತಿದೆ. ಇಂಡಿಯಾ-ಪಾಕಿಸ್ತಾನ ಗಡಿಯಲ್ಲೂ ಈ ರೀತಿ ನಡೆಯೋದಿಲ್ವೇ? ಯಾಕೆ ಹೆದರ್ತಾ ಇದ್ದೀರಿ. ಅಧಿಕಾರಿಗಳು ನೀವು, ಯಾರನ್ನ ನೋಡಿ ಹೆದರಿಕೆ ನಿಮಗೆ? ನಿಮಗೆ ಗೊತ್ತಾ ಗುತ್ತಿಲ್ಲವೇ? ಹಂಗರಹಳ್ಳಿಯಲ್ಲಿ ದಿನಕ್ಕೆ 500 ಲಾರಿ ಕಲ್ಲು ಹೋಗುತ್ತಿದೆ ಎಂದು ಜನರು ಹೇಳುತ್ತಿದ್ದಾರೆ. ಲಾರಿ ಓಡಾಡಿದ ಟಯರ್ ಗುರುತುಗಳೂ ಇವೆ. ಹೀಗಿರು ವಾಗ ನೀವು ಏನು ಕೆಲಸ ಮಾಡುತ್ತಿದ್ದೀರಿ? ಅಕ್ರಮ ಗಣಿಗಾರಿಕೆ ಮಾಡುವವರಿಗೆ ಎಷ್ಟು ದಂಡ ವಿಧಿಸಿದ್ದೀರಿ? ಎಂದು ಕೇಳಿದಾಗ ಅಧಿಕಾರಿಗಳು ಉತ್ತರಿಸಲಾಗದೆ ತಬ್ಬಿಬ್ಬಾದರು.

ಒಂದೆಡೆ ಸುಮಲತಾ ಅವರು ಹೋದಾಗ ಅವರನ್ನು ಸುತ್ತುವರಿದ ಗ್ರಾಮ ಸ್ಥರು, `ಮೇಡಂ, ನೀವು ಇಲ್ಲೆಲ್ಲಾ ನೋಡ್ದೆ ಮೇಲಕ್ಕೆ ಹೋಗಿದ್ದೀರಿ’ ಎಂದು ಪ್ರಶ್ನಿಸಿ ದಾಗ, ಸುಮಲತಾ, ನಾನು ಅಲ್ಲಿಗೆ ಹೋಗಿ ದ್ದಾಗ ಮಣ್ಣು ಹಾಕಿ ಮುಚ್ಚಿತ್ತಲ್ಲಾ, ಯಾರು ಆ ಕೆಲಸ ಮಾಡಿದ್ದು? ಸಂಸದೆ, ಡಿಸಿ ಬರುವಾಗ ಎಲ್ಲಾ ಕಡೆ ರಸ್ತೆಯನ್ನು ಮಣ್ಣು ಹಾಕಿ ಮುಚ್ಚಿದ್ದು ಯಾರು? ಎಂದು ಗ್ರಾಮ ಸ್ಥರನ್ನು ಪ್ರಶ್ನಿಸಿದರು. ಅದಕ್ಕೆ ರಸ್ತೆ ಮುಚ್ಚಿ ದವರ ಮೇಲೆ ಕ್ರಮ ತಗೊಳ್ಳಿ ಎಂದು ಗ್ರಾಮಸ್ಥರು ಹೇಳಿದಾಗ, ಅವರು ಯಾರು ಅಂತ ನೀವ್ ಹೇಳಿ ಎಂದು ಸುಮಲತಾ ಕೇಳಿದರು. ನಮಗೆ ಗೊತ್ತಿಲ್ಲ ಮೇಡಂ, ಮೇಲುಗಡೆ ಇರುವವರು, ಕೆಳಗಡೆ ಇರುವವರು, ದೊಡ್ಡವರು ರಾತ್ರಿ ಹೊತ್ನಲ್ಲಿ ಕಲ್ಲು ಒಡಿತಾರೆ. ಆದರೆ ಬಡವರು ನಾವು, ಆರ್‍ಟಿಸಿ ಇರುವ ನಮ್ಮ ಭೂಮಿಯಲ್ಲಿ ಕಲ್ಲು ಒಡೆದರೂ ಅರಣ್ಯಾಧಿಕಾರಿಗಳು ಟ್ರ್ಯಾಕ್ಟರ್ ಹಿಡಿದು ಫೈನ್ ಹಾಕ್ತಾರೆ. 6 ತಿಂಗ ಳಾದರೂ ಟ್ರ್ಯಾಕ್ಟರ್ ಬಿಡಲ್ಲ. ನಾವ್ ದಂಡ ಕಟ್ಟಬೇಕು, ಕೋರ್ಟ್‍ಗೂ ಅಲೀಬೇಕು. ಇಲ್ಲಿ 5 ವರ್ಷಕ್ಕೆ ಅಷ್ಟೇ ಲೀಸ್ ಕೊಟ್ಟಿದ್ದಾರೆ. ಲೀಸ್ ಟೈಂ ಎಲ್ಲಾ ಮುಗಿದೋಗಿದೆ. ಆದರೂ ಕ್ವಾರಿ ನಡೆಸ್ತಾ ಇದಾರೆ. ಯಾರೂ ಏನೂ ಕ್ರಮ ತಗೊಳ್ತಾ ಇಲ್ಲ. ನೀವು ದೊಡ್ಡ ವರ ತಲೆ ಮೇಲೆ ಕಲ್ ಚಪ್ಡಿ ಎಳೀರಿ. ಅವರು ಕೋಟ್ಯಾಧೀಶ್ವರರು. ಅವರ ಬಗ್ಗೆ ತಲೆ ಕೆಡಿಸ್ಕೋ ಬೇಡಿ, ಸಣ್ಣಪುಟ್ಟವರಿಗೆ ಸಹಾಯ ಮಾಡಿ ಎಂದು ಮನವಿ ಮಾಡಿದರು.

ಚನ್ನಳ್ಳಿ ಗ್ರಾಮಸ್ಥರು, ಮೇಡಂ, ನೈಟ್ ನಲ್ಲಿ ಬ್ಲಾಸ್ಟಿಂಗ್ ನಡೆಯುತ್ತೆ. ನಿದ್ದೇನೇ ಬರಲ್ಲ. ನೀವ್ ಅಕ್ರಮನಾದ್ರು ಮಾಡಿ, ಸಕ್ರಮಾನಾದ್ರೂ ಮಾಡಿ. ಮೊದಲು ಈ ಬ್ಲಾಸ್ಟಿಂಗ್ ನಿಲ್ಸಿ. 2 ವರ್ಷದಿಂದ ನಡೀ ತಿದೆ. ಗೋಡೆಯೆಲ್ಲಾ ಬಿರುಕು ಬಿಡ್ತಾ ಇದೆ ಎಂದು ಅಳಲು ತೋಡಿಕೊಂಡರು. ಆಗ ಸಂಸದರು ಇದನ್ನ ನೀವು ನಮ್ಮ ಶಾಸಕರ ಗಮನಕ್ಕೆ ತಂದಿಲ್ವಾ? ಎಂದಾಗ, ಅವರ್ಗೂ ಹೇಳೀದ್ದೀವಿ, ನಿಲ್ಲಿಸ್ತೀವಿ ಅಂತಾರೆ. ಆದ್ರೆ ಅವರೇ ಮಾಡಿಸ್ತಾರಲ್ಲಾ ಎಂದಾಗ, ಅದನ್ನ ಫೋಟೋ, ವೀಡಿಯೋ ತೆಗೆದಿಟ್ಟುಕೊಳ್ಳಿ. ಸಾಕ್ಷಿ ಸಮೇತ ಹೋರಾಟ ಮಾಡೋಣ ಎಂದು ಸುಮಲತಾ ಹೇಳಿದರು. ಒಂದೆಡೆ ಸಂಸದೆ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದರಿಂದ ಹೆಚ್.ಡಿ. ಕುಮಾರಸ್ವಾಮಿ ಮತ್ತು ರವೀಂದ್ರ ಶ್ರೀಕಂ ಠಯ್ಯ ವಿರುದ್ಧ ಹೋರಾಟ ಮಾಡಬೇಕು ಎಂದು ಕೆಲ ಗ್ರಾಮಸ್ಥರು ಹೇಳಿದಾಗ, ಅವರನ್ನು ಅವರನ್ನು ಸಮಾಧಾನಪಡಿಸಿದ ಸುಮಲತಾ, ನಗುತ್ತಲೇ ಯಾವುದೂ ಬೇಡ, ಎಲೆಕ್ಷನ್‍ನಲ್ಲಿ ಅವರಿಗೆ ಉತ್ತರ ಕೊಡಿ ಎಂದು ಹೇಳಿದರು.

Translate »