ಬೆಟ್ಟದಪುರ ಜಿಲ್ಲಾ ಪಂಚಾಯಿತಿ ಸಾಮಾನ್ಯ ಕ್ಷೇತ್ರಕ್ಕೆ ಮೀಸಲು ಗರಿಗೆದರಿದ ರಾಜಕೀಯ ಚಟುವಟಿಕೆ: ಟಿಕೆಟ್‍ಗಾಗಿ ಆಕಾಂಕ್ಷಿಗಳ ದಂಡು
ಮೈಸೂರು

ಬೆಟ್ಟದಪುರ ಜಿಲ್ಲಾ ಪಂಚಾಯಿತಿ ಸಾಮಾನ್ಯ ಕ್ಷೇತ್ರಕ್ಕೆ ಮೀಸಲು ಗರಿಗೆದರಿದ ರಾಜಕೀಯ ಚಟುವಟಿಕೆ: ಟಿಕೆಟ್‍ಗಾಗಿ ಆಕಾಂಕ್ಷಿಗಳ ದಂಡು

July 8, 2021

ಬೆಟ್ಟದಪುರ, ಜು. 7 (ಶಿವದೇವ್)- ಪಿರಿಯಾಪಟ್ಟಣ ತಾಲೂಕಿನ ಬೆಟ್ಟದ ಪುರದ ಜಿಲ್ಲಾ ಪಂಚಾಯಿತಿ ಕ್ಷೇತ್ರ ಮತ್ತೊಮ್ಮೆ ಸಾಮಾನ್ಯ ಕ್ಷೇತ್ರವಾಗಿ ಪ್ರಕಟಣೆ ಗೊಂಡಿದ್ದು, ಇಲ್ಲಿ ರಾಜಕೀಯ ಚಟುವಟಿಕೆ ಗಳು ಗರಿಗೆದರಿವೆ.

ಬೆಟ್ಟದಪುರ ಜಿಲ್ಲಾ ಪಂಚಾಯಿತಿ ಕ್ಷೇತ್ರ ದಲ್ಲಿ ಕಳೆದ ಬಾರಿಯ ಚುನಾವಣೆ ದಾಯಾದಿ ಯುದ್ಧ ಏರ್ಪಟ್ಟಿತ್ತು. ಇದೀಗ ಬೆಟ್ಟದಪುರ ಸಾಮಾನ್ಯ ಕ್ಷೇತ್ರವಾಗಿರುವುದರಿಂದ ಮತ್ತೆ ದಾಯಾದಿ ಯುದ್ಧ ನಡೆಯ ಬಹುದೇ ಎಂದು ಕಾದು ನೋಡಬೇಕಾಗಿದೆ.

ಬೆಟ್ಟದಪುರ ಜಿಪಂ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಮಾಜಿ ಶಾಸಕ ಕೆ.ವೆಂಕಟೇಶ್ ಅವರ ಪುತ್ರ ನಿತಿನ್ ವೆಂಕಟೇಶ್ ಹಾಗೂ ಮಾಜಿ ಶಾಸಕ ಕೆ.ಎಸ್. ಕಾಳಮರೀಗೌಡ ಅವರ ಮೊಮ್ಮಗ ಉದ್ಯಮಿ ಗಗನ್ ಅವರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಕೆ.ವೆಂಕ ಟೇಶ್ ಅವರು ಸಿದ್ದರಾಮಯ್ಯನವರ ಆತ್ಮೀಯರಾಗಿದ್ದರೆ, ಗಗನ್ ಅವರು ಡಿ.ಕೆ. ಶಿವಕುಮಾರ್ ಅವರ ಆತ್ಮೀಯರಾಗಿದ್ದಾರೆ. ಇವರಿಬ್ಬರಲ್ಲಿ ಟಿಕೆಟ್ ಯಾರಿಗೆ ದೊರೆ ಯುವುದೆಂಬುದನ್ನು ಮತದಾರರು ಕುತೂಹಲದಿಂದ ನಿರೀಕ್ಷಿಸುತ್ತಿದ್ದಾರೆ. ಅದೇ ರೀತಿ ಜೆಡಿಎಸ್‍ನಿಂದ ಕೆ.ಎಸ್. ಕಾಳಮರಿಗೌಡ ಅವರ ಸಹೋದರನ ಮಗ ಕಳೆದ ಚುನಾವಣೆಯಲ್ಲಿ ಗೆದ್ದಿದ್ದ ಕೆ.ಎಸ್. ಮಂಜುನಾಥ್ ಅವರು ಈ ಬಾರಿ ಟಿಕೆಟ್ ಗಾಗಿ ವರಿಷ್ಠರ ಹಾಗೂ ಸ್ಥಳೀಯ ಶಾಸಕ ಕೆ.ಮಹದೇವ್ ಮೊರೆ ಹೋಗಿದ್ದಾರೆ. ಅಲ್ಲದೆ ಜೆಡಿಎಸ್ ಟಿಕೆಟ್‍ಗಾಗಿ ಹಲವರು ಮುಗಿಬಿದ್ದಿದ್ದಾರೆ.

ಸುರಗಳ್ಳಿ ಗ್ರಾಮದ ಉದ್ಯಮಿ ರವಿ ಗೌಡ ಹಾಗೂ ಕಿತ್ತೂರು ಗ್ರಾಮದ ಗುತ್ತಿಗೆದಾರ ಅಶ್ವತ್ಥ್ ಅವರು ಟಿಕೆಟ್‍ಗಾಗಿ ಬೇಡಿಕೆ ಇಟ್ಟಿ ದ್ದಾರೆ ಎಂದು ತಿಳಿದು ಬಂದಿದೆ. ಅದರಂತೆ ಬಿಜೆಪಿಯಿಂದ ಹಾಲಿ ತಾಲೂಕು ಅಧ್ಯಕ್ಷ ರಾಜೇಗೌಡ, ಬೆಟ್ಟದಪುರದ ರಮೇಶ್, ಸಾಫ್ಟ್ ವೇರ್ ಎಂಜಿನಿಯರ್ ಸುನಿಲ್ ಕುಮಾರ್ ಹಾಗೂ ಪರಿಸರ ಹೋರಾಟಗಾರ ಕೆ.ಎನ್. ಸೋಮಶೇಖರ್, ಸಮಾಜ ಸೇವಕ ಎಸ್. ಮಲ್ಲೇಶ್ ಅವರ ನಡುವೆ ಟಿಕೆಟ್‍ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ.

ಬೆಟ್ಟದಪುರ ಜಿಪಂ ಕ್ಷೇತ್ರದಲ್ಲಿ ಒಟ್ಟು 5 ಗ್ರಾಪಂಗಳು, 3 ತಾಪಂಗಳನ್ನು ಒಳ ಗೊಂಡಿದ್ದು, ಒಕ್ಕಲಿಗ ಮತಗಳು ಹೆಚ್ಚಿನ ಸಂಖ್ಯೆಯಲ್ಲಿದೆ.
ತದನಂತರ ಕುರುಬರು, ಮುಸ್ಲಿಮರು, ನಾಯಕರು, ವೀರಶೈವರ ಮತಗಳನ್ನು ಹೊಂದಿದ್ದು, ಇಲ್ಲಿ ಒಕ್ಕಲಿಗ ಮತ್ತು ಕುರುಬರ ಮತಗಳು ನಿರ್ಣಾಯಕವಾಗ ಲಿವೆ. ಆದುದರಿಂದ ಪಕ್ಷದ ವರಿಷ್ಠರು ಯಾರಿಗೆ ಟಿಕೆಟ್ ನೀಡುತ್ತಾರೆ ಅಥವಾ ಎರಡೂ ಪಕ್ಷಗಳು ದಾಯಾದಿಗಳಿಗೆ ಟಿಕೆಟ್ ನೀಡಿದರೆ ಇಲ್ಲಿ ದಾಯಾದಿಗಳ ಕ್ಷೇತ್ರವೆಂದೇ ಹೆಸರು ಪಡೆದಿರುವ ಬೆಟ್ಟದ ಪುರ ಕ್ಷೇತ್ರ ಮತ್ತೊಮ್ಮೆ ದಾಯಾದಿಗಳ ಚುನಾವಣಾ ಯುದ್ಧಕ್ಕೆ ಕ್ಷೇತ್ರ ಕಾರಣ ವಾಗಬಹುದೆ ಎಂಬುದನ್ನು ಕಾದು ನೋಡಬೇಕಾಗಿದೆ.

Translate »