ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ) ಕಚೇರಿಯಲ್ಲಿ ಸಾರ್ವಜನಿಕ ರಿಂದ ಅಹವಾಲು ಅರ್ಜಿ ಸ್ವೀಕಾರ ಪ್ರಕ್ರಿಯೆ ಇಂದಿನಿಂದ ಆರಂಭವಾಯಿತು. ನವೆಂಬರ್ 12ರಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಅವರು ಮುಡಾ ಕಚೇರಿ ಸಭಾಂಗಣದಲ್ಲಿ ಕಚೇರಿ ಸೇವೆಗಳ ಸಂಬಂಧ ಸಾರ್ವಜನಿಕರ ಅಹ ವಾಲು ಹಾಗೂ ಕುಂದುಕೊರತೆಗಳನ್ನು ಆಲಿಸಲು ಮುಡಾ ಅದಾಲತ್ ನಡೆಸುವ ಕಾರ್ಯಕ್ರಮ ನಿಗದಿಯಾಗಿದೆ.
ಈ ಹಿನ್ನೆಲೆಯಲ್ಲಿ ಪ್ರಾಧಿಕಾರವು ಕಚೇರಿಯ ಸ್ಪಂದನ ಕೌಂಟರ್‍ನಲ್ಲಿ ನಿಗದಿತ ಅರ್ಜಿ ನಮೂನೆಯಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ಕಾರ್ಯವನ್ನು ಆರಂಭಿಸಿದೆ. ರಜಾ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಕಚೇರಿ ಕೆಲಸದ ವೇಳೆ ಅರ್ಜಿ ಸ್ವೀಕರಿಸಲಾಗುವುದು.
ನಿವೇಶನ/ಮನೆ ವರ್ಗಾವಣೆ, ನೋಂದಣಿ, ಪೌತಿ ವರ್ಗಾವಣೆ, ಮನೆ ಕಂದಾಯ ನಿಗದಿಪಡಿಸುವುದು, ಕ್ರಯ ಪತ್ರ ಕೋರಿಕೆ, ಬದಲಿ ನಿವೇಶನ ಕೋರಿಕೆ, ಮಂಜೂ ರಾತಿ ಪತ್ರ/ಸ್ವಾಧೀನ ಪತ್ರ/ಖಾತಾ/ಕಂದಾಯ ಪತ್ರಗಳ ದೃಢೀಕೃತ ನಕಲು ಕೋರಿಕೆ, ಖಾಸಗಿ ಬಡಾವಣೆ ಅಭಿ ವೃದ್ಧಿಗೆ ನಕ್ಷೆ ಅನುಮೋದನೆ ಸೇರಿದಂತೆ ಹಲವು ಸೇವೆಗಳ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ. ಅರ್ಜಿ ಜೊತೆಗೆ ಪೂರಕ ದಾಖಲೆಗಳನ್ನು ಒದಗಿಸಬೇಕೆಂಬ ಮಾಹಿತಿಯನ್ನೊಳ ಗೊಂಡ ತಿಳಿ ನೀಲಿ ಬಣ್ಣದ ಪತ್ರವನ್ನು ಸಹ ಅರ್ಜಿ ನಮೂನೆ ಜೊತೆ ಕೊಡಲಾಗುತ್ತಿದೆ. ಪಿಂಕ್ ಬಣ್ಣದ ಅರ್ಜಿ ಪಡೆದು ಭರ್ತಿ ಮಾಡಿ ಅ.31ರವರೆಗೆ ಸಲ್ಲಿಸಬಹುದಾಗಿದೆ. ಮೊದಲ ದಿನವಾದ ಇಂದು ಸಾರ್ವಜನಿಕರು ಉಚಿತವಾಗಿ ನೀಡುತ್ತಿರುವ ಅರ್ಜಿಗಳನ್ನು ಪಡೆದುಕೊಂಡು ಹೋದರು. ಆದರೆ ಭರ್ತಿ ಮಾಡಿದ ಒಂದು ಅರ್ಜಿಯೂ ಸಂಜೆವರೆಗೆ ಬಂದಿಲ್ಲ ಎಂದು ಕೌಂಟರ್‍ನಲ್ಲಿ ಕೆಲಸ ಮಾಡುವ ಸಿಬ್ಬಂದಿ ತಿಳಿಸಿದ್ದಾರೆ.