ನಂಜನಗೂಡಿನಲ್ಲಿ ಅದ್ಧೂರಿ ಗ್ರಾಮೀಣ ದಸರಾ
ಮೈಸೂರು

ನಂಜನಗೂಡಿನಲ್ಲಿ ಅದ್ಧೂರಿ ಗ್ರಾಮೀಣ ದಸರಾ

October 16, 2018

ನಂಜನಗೂಡು:  ಸ್ಥಳೀಯ ಸಂಸ್ಕೃತಿಯನ್ನು ಸಾರುವ ನಾಡಹಬ್ಬ ದಸರಾ ಮಹೋತ್ಸವದಲ್ಲಿ ಸ್ಟ್ರೀಟ್ ಫೆಸ್ಟಿವಲ್ ನಂತಹ ಪಾಶ್ಚಿಮಾತ್ಯ ಆಚರಣೆಯನ್ನು ಸೇರಿಸುವ ಮೂಲಕ ಪಾರಂಪರಿಕ ದಸರಾ ಹೊರತಾದ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಇದು ಸರಿಯಲ್ಲ ಎಂದು ಶಾಸಕ ಬಿ. ಹರ್ಷವರ್ಧನ್ ಬೇಸರಿಸಿದ್ದಾರೆ.

ಅವರು ಶ್ರೀಕಂಠೇಶ್ವರ ದೇವಾಲಯದ ಕಲಾಮಂದಿರದಲ್ಲಿ ತಾಲೂಕು ಆಡಳಿತದ ವತಿಯಿಂದ ನಡೆದ ಗ್ರಾಮೀಣ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ದರು. ರಾಜರ ಕಾಲದ ದಸರಾ ನಾಡಿನ ಕಲೆ, ಸಂಸ್ಕೃತಿ ಗ್ರಾಮೀಣ ಸೊಗಡನ್ನು ಬಿಂಬಿಸುವ, ಅದನ್ನು ಸಂರಕ್ಷಿಸುವಂತಹ ಹಬ್ಬವಾಗಿ ಆಚರಿಸಲ್ಪಡುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ದಸರಾ, ಎಂದರೆ ಬರೀ ಉತ್ಸವಗಳಿಗೆ ಮಾತ್ರ ಸೀಮಿತವಾದಂತಿದೆ ಎಂದ ಅವರು ತಾಲೂಕು ಆಡಳಿತ ಆಯೋಜಿ ಸಿರುವ ದಸರಾ ಗ್ರಾಮೀಣ ಸೊಗಡನ್ನು ಉಳಿಸುವಂತೆ ಅತ್ಯಂತ ಅಚ್ಚುಕಟ್ಟಾಗಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಸರ್ಕಾರ ಆಯೋಜಿಸಿರುವಂತಹ ದಸರಾ ಅತ್ಯಂತ ನೀರಸವಾದಂತಿದೆ. ಅಲ್ಲದೆ ಎಲ್ಲಾ ಕಾರ್ಯಕ್ರಮಗಳಿಗೂ ಬಿಜೆಪಿ ಶಾಸಕರ ಭಾಗವಹಿಸುವಿಕೆ ಇದ್ದರೆ, ಕಾಂಗ್ರೆಸ್ ಶಾಸಕರು ದಸರಾವನ್ನು ಬಹಿ ಷ್ಕರಿಸಿದ್ದಾರೆ. ಬಿಜೆಪಿ ಶಾಸಕರು ಬಂದರೂ ಕೂಡ ಇತರ ಗಣ್ಯರು ತಡವಾಗಿ ಬರುತ್ತಾರೆ. ಹಾಗಾಗಿ ಕಾರ್ಯಕ್ರಮಗಳು ತಡವಾಗಿ ಆರಂಭವಾಗುತ್ತಿವೆ. ದಸರಾ ಉದ್ಘಾಟನೆ ಸಮಾರಂಭವೂ ಸರಿಯಾದ ರೀತಿಯಲ್ಲಿ ನಡೆಯಲಿಲ್ಲ. ದಸರಾ ಪಾಸ್‍ನ್ನಾದರೂ ಸರಿಯಾಗಿ ವಿತರಿಸುವರೇ ಕಾದು ನೋಡಬೇಕಿದೆ ಎಂದು ಸರ್ಕಾರದ ವಿರುದ್ದ ಹರಿಹಾಯ್ದರು.

ಸಮಾರಂಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ನಡೆಸಿಕೊಟ್ಟ ಜಾನಪದ ನೃತ್ಯ, ಚಿಣ್ಣರ ನೃತ್ಯ ಆಕರ್ಷಕವಾಗಿದ್ದವು. ಶಿಶು ಅಭಿವೃದ್ದಿ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ತೋಟಗಾರಿಕಾ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆಗಳ ಮಳಿಗೆಗಳು ಆಕರ್ಷಕವಾಗಿದ್ದವು. ಸಮಾರಂಭದಲ್ಲಿ ಜಿಪಂ ಸದಸ್ಯರಾದ ಮಂಗಳಾ ಸೋಮಶೇಖರ್, ಸದಾನಂದ, ನಗರಸಭಾಧ್ಯಕ್ಷೆ ಪುಷ್ಪಲತಾ ಕಮಲೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ರಾಮಕೃಷ್ಣ, ತಾಪಂ ಉಪಾಧ್ಯಕ್ಷ ಗೋವಿಂದರಾಜು, ಸ್ಥಾಯಿ ಸಮಿತಿ ಅಧ್ಯಕ್ಷ ಹೆಮ್ಮರಗಾಲ ಶಿವಣ್ಣ, ಸದಸ್ಯರಾದ ಬಿ.ಎಸ್. ರಾಮು, ಮಹದೇವನಾಯ್ಕ, ಹುಲ್ಲಹಳ್ಳಿ ಶಿವಣ್ಣ, ಜಯಲಕ್ಷ್ಮಿ, ಹೇಮಾವತಿ, ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪುಟ್ಟನಿಂಗಶೆಟ್ಟಿ, ತಹಸೀಲ್ದಾರ್ ದಯಾ ನಂದ್, ತಾಪಂ ಇಓ ಶ್ರೀಕಂಠರಾಜೇ ಅರಸ್, ಸಿಡಿಪಿಓ ಗೀತಾಲಕ್ಷ್ಮಿ, ಹಿಂದುಳಿದ ವರ್ಗದ ಅಧಿಕಾರಿ ಸ್ವಾಮಿ, ಆರೋಗ್ಯಾಧಿ ಕಾರಿ ಡಾ.ಕಲಾವತಿ, ತೋಟಗಾರಿಕಾ ಅಧಿಕಾರಿ ಸುಧೀಂದ್ರಕುಮಾರ್ ಸೇರಿದಂತೆ ಹಲವಾರು ಪ್ರಮುಖರು ಇದ್ದರು.

ಇದಕ್ಕೂ ಮುನ್ನ ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ಗ್ರಾಮೀಣ ದಸರಾ ಮೆರವಣಿಗೆಗೆ ತಹಸೀಲ್ದಾರ್ ದಯಾನಂದ್ ಚಾಲನೆ ನೀಡಿದರು. ಜಾನಪದ ಕಲಾ ತಂಡಗಳಾದ ನಂದಿ ಕಂಬ, ಬೀಸು ಕಂಸಾಳೆ, ಗಾರುಡಿ ಗೊಂಬೆ, ಪೂಜಾ ಕುಣಿತ, ವೀರಗಾಸೆ, ಗೊರವರ ಕುಣಿತ, ಡೊಳ್ಳು ಕುಣಿತ, ನಾದಸ್ವರ, ಮರಗಾಲು ಕುಣಿತ, ಎತ್ತಿನ ಗಾಡಿ ಮೆರವಣಿಗೆ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ದಸರಾ ಮೆರವಣಿಗೆಗೆ ಮೆರಗು ನೀಡಿದವು. ಮೆರವಣಿಗೆ ಎಂಜಿಎಸ್ ರಸ್ತೆಯ ಮೂಲಕ ಸಾಗಿ ಶ್ರೀಕಂಠೇಶ್ವರ ದೇವಾಲಯದ ಕಲಾಮಂದಿರದಲ್ಲಿ ಅಂತ್ಯಗೊಂಡಿತು.

Translate »