ರಸ್ತೆ ಅಗಲೀಕರಣ: ಟಿಪ್ಪು ವೃತ್ತದ ಬಳಿ ಅವೈಜ್ಞಾನಿಕ ಕಾಮಗಾರಿ
ಮೈಸೂರು

ರಸ್ತೆ ಅಗಲೀಕರಣ: ಟಿಪ್ಪು ವೃತ್ತದ ಬಳಿ ಅವೈಜ್ಞಾನಿಕ ಕಾಮಗಾರಿ

October 16, 2018

ಮೈಸೂರು:  ಮೈಸೂ ರಿನ ಫೌಂಟೇನ್ ವೃತ್ತದಿಂದ ಕೊಲಂ ಬಿಯಾ ಏಷ್ಯಾ ಆಸ್ಪತ್ರೆ ಬಳಿ ಹಳೆ ಟೋಲ್ ಗೇಟ್ ವರೆಗೆ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಟಿಪ್ಪು ವೃತ್ತದ ಬಳಿ ರಸ್ತೆ ವಿಭಜಕ ನಿರ್ಮಾಣ ಅವೈಜ್ಞಾನಿಕವಾಗಿದ್ದು, ಅರ್ಧಕ್ಕೆ ಮೊಟಕು ಗೊಳಿಸಿರುವುದರಿಂದ ಅಪಘಾತಕ್ಕೆ ಆಹ್ವಾನ ನೀಡುವಂತಾಗಿದೆ.

ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ರಿಂಗ್‍ರಸ್ತೆಯ ಜಂಕ್ಷನ್ ನಿಂದ ಮೈಸೂರು ನಗರದ ಹಳೆ ಟೋಲ್ ಗೇಟ್‍ವರೆಗೆ ಈಗಾಗಲೇ 10 ಪಥವುಳ್ಳ ರಸ್ತೆ ಅಭಿವೃದ್ಧಿಪಡಿಸಲಾಗಿದೆ. ಅಲ್ಲದೆ ಹಳೆಯ ಟೋಲ್‍ಗೇಟ್‍ನಿಂದ ಫೌಂಟೇನ್ ವೃತ್ತದ ವರೆಗೆ (2 ಕಿ.ಮೀ.) 6 ಪಥವುಳ್ಳ (ಷಟ್ಪಥ) ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸುವ ಕಾಮ ಗಾರಿಯನ್ನು ಲೋಕೋಪಯೋಗಿ ಇಲಾಖೆ ಕಳೆದ ವರ್ಷ ಕೈಗೆತ್ತಿಕೊಂಡಿದೆ.

14.7 ಕೋಟಿ ರೂ ವೆಚ್ಚದಲ್ಲಿ ರಸ್ತೆ ಅಗಲೀಕರಣ ಕಾಮ ಗಾರಿಯನ್ನು 2017ರಲ್ಲಿಯೇ ಆರಂಭಿಸಲಾಗಿದ್ದು, ಅದರಲ್ಲಿ 5.50 ಕೋಟಿ ರೂ. ಗಳನ್ನು ವಿದ್ಯುತ್ ಕಾಮಗಾರಿಗೆ ವಿನಿಯೋಗಿಸ ಲಾಗುತ್ತಿದೆ. ಕಾಮಗಾರಿ ಆರಂಭವಾಗಿ ಒಂದು ವರ್ಷ ಕಳೆದರೂ ಕಾಮಗಾರಿ ಪೂರ್ಣ ಗೊಂಡಿಲ್ಲ. ಇದಕ್ಕೆ ಸಾರ್ವಜನಿಕ ವಲಯ ದಲ್ಲಿ ತೀವ್ರ ಆಕ್ರೋಷ ವ್ಯಕ್ತವಾಗಿದೆ.

ಟೋಲ್‍ಗೇಟ್‍ನಿಂದ ಮೈಸೂರಿನ ಕಡೆಗೆ ರಸ್ತೆ ಅಗಲೀಕರಣ ಕಾಮಗಾರಿ ನಡೆಸಲಾಗುತ್ತಿದ್ದು, ರಸ್ತೆ ಬದಿಯ ಹಳ್ಳಕ್ಕೆ ಮಣ್ಣನ್ನು ಸುರಿದು ದಂಡೆ ಗಟ್ಟಿಗೊಳಿಸಲಾಗಿದೆ. ರಸ್ತೆ ಮಧ್ಯಭಾಗದಲ್ಲಿಯೇ ಹಾದು ಹೋಗಿದ್ದ ಒಳಚರಂಡಿ ಮಾರ್ಗ, ಕುಡಿಯುವ ನೀರಿನ ಪೈಪ್‍ಲೈನ್, ದೂರವಾಣಿ ಕೇಬಲ್‍ಗಳನ್ನು ಸ್ಥಳಾಂತರಿಸಲಾ ಗಿದ್ದು, ಕೆಲವೆಡೆ ಕಾಮಗಾರಿ ಆರಂಭಿಸಬೇಕಾ ಗಿದೆ. ಫೌಂಟೇನ್ ವೃತ್ತದಿಂದಲೂ ರಸ್ತೆ ಅಗಲೀಕರಣ ಕಾಮಗಾರಿ ನಡೆಸಲಾಗುತ್ತಿದ್ದು, 2 ಬದಿಯಲ್ಲಿಯೂ ರಸ್ತೆಯನ್ನು ವಿಸ್ತರಿಸಲಾಗಿದೆ. ಹಳೆ ರಸ್ತೆ ವಿಭಜಕವನ್ನು ತೆಗೆದು ಕಾಂಕ್ರಿಟ್‍ನಿಂದ ಹೊಸದಾಗಿ ನಿರ್ಮಿಸಲಾಗುತ್ತಿದೆ.

ರಸ್ತೆ ವಿಭಜಕವನ್ನು ಟಿಪ್ಪು ವೃತ್ತದವರೆಗೆ ನಿರ್ಮಿಸಿ ಅವೈಜ್ಞಾನಿಕವಾಗಿ ಅರ್ಧಕ್ಕೆ ಮೊಟಕುಗೊಳಿಸಲಾಗಿದೆ. ಟಿಪ್ಪು ವೃತ್ತದ ಗೋಡೆಗೂ ಹೊಸ ವಿಭಜಕಕ್ಕೂ ಸುಮಾರು 5 ಅಡಿ ಅಂತರವಿದೆ. ರಾತ್ರಿ ವೇಳೆ ವಾಹನ ಚಾಲಕರಿಗೆ ಇದು ಅಪಾಯಕಾರಿಯಾಗಿ ಪರಿಣಮಿಸಿದ್ದು, ಕಳೆದ 15 ದಿನಗಳಲ್ಲಿ ಐದಾರು ವಾಹನಗಳು ಟಿಪ್ಪು ವೃತ್ತದ ಗೋಡೆಗೆ ಡಿಕ್ಕಿ ಹೊಡೆದಿದೆ. ಮೈಸೂರು-ಬೆಂಗಳೂರು ನಡುವೆ ಪ್ರತಿದಿನ ಸಾವಿರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಅಲ್ಲದೆ ದಸರಾ ಕಾರ್ಯಕ್ರಮಗಳನ್ನು ವೀಕ್ಷಿಸಲು ಹಾಗೂ ದೀಪಾಲಂಕಾರವನ್ನು ಕಣ್ತುಂಬಿಕೊಳ್ಳಲು ನಗರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ರಾತ್ರಿ ವೇಳೆ ಮೈಸೂರಿನಿಂದ ಬೆಂಗಳೂರಿನತ್ತ ಪ್ರಯಾಣಿಸುವ ವಾಹನ ಸವಾರರ ಪ್ರಾಣಕ್ಕೆ ಕುತ್ತಾಗುವಂತೆ ಅರ್ಧಕ್ಕೆ ಮೊಟಕುಗೊಳಿಸಿರುವ ಈ ರಸ್ತೆ ವಿಭಜಕ ಪರಿಣಮಿಸಿದೆ. ಮೇಲ್ನೋಟಕ್ಕೆ ಇದು ತೀರಾ ಅಪಾಯಕಾರಿಯಂತೆ ಕಂಡು ಬರುತ್ತಿದ್ದರೂ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ವಾಹನ ಸವಾರರಿಗೆ ಎಚ್ಚರಿಕೆ ನೀಡುವುದಕ್ಕಾಗಿ ಯಾದರೂ ಬ್ಯಾರಿಕೇಡ್ ಅಳವಡಿಸದೆ ಮೈ ಮರೆತಿದ್ದಾರೆ.

Translate »