ಮುಡಾ ಆಸ್ತಿ ರಕ್ಷಣೆಗೆ ಆಗ್ರಹ
ಮೈಸೂರು

ಮುಡಾ ಆಸ್ತಿ ರಕ್ಷಣೆಗೆ ಆಗ್ರಹ

June 17, 2021

ಮೈಸೂರು, ಜೂ.16- ಮೈಸೂರು ನಗರದಲ್ಲಿರುವ ಮುಡಾ ಆಸ್ತಿ ರಕ್ಷಣೆಗೆ ಕ್ರಮ ವಹಿಸುವಂತೆ ಮಾಜಿ ಮೇಯರ್ ಸಂದೇಶ್ ಸ್ವಾಮಿ ಆಗ್ರಹಿಸಿದ್ದಾರೆ.
ಮೈಸೂರಲ್ಲಿ ಸರ್ಕಾರಿ ಭೂಕಬಳಿಕೆ, ಅತಿಕ್ರಮಣದ ಬಗ್ಗೆ ಚರ್ಚೆ ಯಾಗುತ್ತಿದೆ. ಆದರೆ ಮೈಸೂರು ನಗರದಲ್ಲೇ ಇರುವ ಮುಡಾಗೆ ಸೇರಿದ ನೂರಾರು ಕೋಟಿ ರೂ. ಮೌಲ್ಯದ ಆಸ್ತಿ ಸಂರಕ್ಷಣೆ ಮಾಡುವಲ್ಲಿ ಯಾವುದೇ ಪ್ರಯತ್ನ ನಡೆಯುತ್ತಿಲ್ಲ. ಹಾಲಿನ ಕೇಂದ್ರಗಳು, ಮಕ್ಕಳ ಆಟದ ಮೈದಾನ ಇನ್ನಿತರ ಸದುದ್ದೇಶಗಳಿಗೆ 1932, 1936, 1938ರಲ್ಲಿ ಟ್ರಸ್ಟ್‍ಗಳು ಹಾಗೂ ವ್ಯಕ್ತಿಗಳಿಗೆ ಉಚಿತವಾಗಿ ನಿವೇಶನ ಮಂಜೂರು ಮಾಡಿಕೊಡಲಾ ಗಿತ್ತು. ಹೀಗೆ ಸಾಮಾಜಿಕ ಸೇವಾಕಾರ್ಯಕ್ಕಾಗಿ ಸಿಐಟಿಬಿ(ಇಂದಿನ ಮುಡಾ) ವತಿಯಿಂದ ನಗರದ ಹಲವೆಡೆ ನಿವೇಶನ ನೀಡಲಾಗಿದೆ. ಸದ್ಯ ಆ ಸ್ಥಳಗಳಲ್ಲಿ ಉದ್ದೇಶಿತ ಕಾರ್ಯ ನಡೆಯುತ್ತಿಲ್ಲ. ಕೆಲವೆಡೆ ಅತಿಕ್ರಮಿಸಿಕೊಳ್ಳಲಾಗಿದೆ. ಸುಮಾರು 300-400 ಕೋಟಿ ರೂ. ಮೌಲ್ಯದ ಮುಡಾ ಆಸ್ತಿ ಇದ್ದರೂ, ಸಂರಕ್ಷಣೆಗೆ ಮುಂದಾಗಿಲ್ಲ ಎಂದು ದೂರಿದ್ದಾರೆ.

ಮೈಸೂರಿನಲ್ಲಿ 26 ಸಾವಿರಕ್ಕೂ ಹೆಚ್ಚು ಖಾಲಿ ನಿವೇಶನಗಳಿದ್ದು, ಇದರಲ್ಲಿ 5,800 ಮುಡಾ ನಿವೇಶನಗಳಾಗಿವೆ. ಖಾಲಿ ನಿವೇಶನಗಳ ಸ್ವಚ್ಛತೆಗೆ ನಗರ ಪಾಲಿಕೆ ವಾರ್ಷಿಕ ಕೋಟ್ಯಾಂತರ ರೂ. ವ್ಯಯಿಸುತ್ತಿದೆ. ಇದಕ್ಕಾಗಿ ಸಾರ್ವಜನಿಕರಿಂದಲೂ ಕರ ಸ್ವೀಕರಿಸ ಲಾಗುತ್ತಿದೆ. ನಾನು ನಗರ ಪಾಲಿಕೆ ವತಿಯಿಂದ ಮುಡಾ ಸದಸ್ಯನಾಗಿದ್ದಾಗ ಹಲವು ಸಭೆಗಳಲ್ಲಿ ಪ್ರಸ್ತಾಪಿಸಿ, ನಿವೇಶನ ಹಂಚಿಕೆಯಾದ 10 ವರ್ಷದಲ್ಲಿ ನಿರ್ಮಾಣ ಕಾರ್ಯವಾಗದಿದ್ದರೆ ಅವುಗಳನ್ನು ಮುಡಾ ವಶಕ್ಕೆ ಪಡೆದು, ಮರು ಹರಾಜು ಹಾಕುವಂತೆ ಒತ್ತಾಯಿಸಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಈಗ ಲಾದರೂ ಮುಡಾ ಅಧ್ಯಕ್ಷರು ಹಾಗೂ ಆಯುಕ್ತರು ಈ ವಿಚಾರಗಳನ್ನು ಗಂಭೀರ ವಾಗಿ ಪರಿಗಣಿಸಿ, ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

Translate »