ಮುಡಾ ವ್ಯಾಪ್ತಿ ಸ್ವತ್ತುಗಳ ತೆರಿಗೆ ಪಾವತಿಗೆ ಅವಕಾಶ
ಮೈಸೂರು

ಮುಡಾ ವ್ಯಾಪ್ತಿ ಸ್ವತ್ತುಗಳ ತೆರಿಗೆ ಪಾವತಿಗೆ ಅವಕಾಶ

May 21, 2020

ಮೈಸೂರು, ಮೇ 20(ಆರ್‍ಕೆ)-ಕೋವಿಡ್-19 ಲಾಕ್‍ಡೌನ್‍ನಿಂದಾಗಿ ಸ್ಥಗಿತಗೊಂಡಿದ್ದ ನಿವೇಶನ, ಮನೆ ಕಂದಾಯ ಪಾವತಿ ಪ್ರಕ್ರಿಯೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಕಚೇರಿ ಆವರಣದಲ್ಲಿ ಪುನಾರಂಭವಾಗಿದೆ.

ಶೇ.33ರಷ್ಟು ಸಿಬ್ಬಂದಿಯೊಂದಿಗೆ ಸರ್ಕಾರಿ ಕಚೇರಿ ಗಳು ಕಾರ್ಯಾರಂಭಗೊಂಡ ಬಳಿಕ ಕಳೆದ 6 ದಿನಗಳಿಂದ ಮುಡಾ ಕಚೇರಿಯ ವಿಜಯಾ ಬ್ಯಾಂಕ್ ಕೌಂಟರ್‍ನಲ್ಲಿ ಸಾರ್ವಜನಿಕರು ಕಂದಾಯ ಪಾವತಿಗೆ ವ್ಯವಸ್ಥೆ ಮಾಡಲಾಗಿದೆ. ಪ್ರಾಧಿಕಾರದ ವ್ಯಾಪ್ತಿಯ ನಿವೇಶನ, ಕಟ್ಟಡಗಳ ವಾರ್ಷಿಕ ತೆರಿಗೆ ಪಾವತಿಸಲು ಕಚೇರಿ ಆವರಣದಲ್ಲಿ ನಿರ್ಮಿಸಿರುವ ಶೆಲ್ಟರ್ ಅಡಿ ಸಾಮಾಜಿಕ ಅಂತರ ಕಾಯ್ದುಕೊಂಡು ಆಸ್ತಿಗಳ ಮಾಲೀ ಕರು ಚಲನ್ ಮೂಲಕ ಬ್ಯಾಂಕ್‍ಗೆ ಹಣ ತುಂಬುತ್ತಿದ್ದಾರೆ. ಎಲ್ಲಾ 6 ವಲಯ ಕಚೇರಿಗಳಲ್ಲಿ ಸಿಬ್ಬಂದಿ ಈ ಹಿಂದಿನ ವರ್ಷದಲ್ಲಿ ಪಾವತಿಸಿದ ಚಲನ್ ಆಧರಿಸಿ ಕಂದಾಯವನ್ನು ಲೆಕ್ಕ ಹಾಕಿ ಚೀಟಿ ಬರೆದುಕೊಡುತ್ತಾರೆ. ಅದನ್ನು ತಂದು ಸ್ಪಂದನಾ ಕೌಂಟರ್‍ನಲ್ಲಿ ತೋರಿಸಿದರೆ ಅಲ್ಲಿನ ಸಿಬ್ಬಂದಿ ಚಲನ್ ಬರೆದುಕೊಡುತ್ತಾರೆ.

ನಂತರ ಅದಕ್ಕೆ ಹಣ ಪಾವತಿಸುವವರು ಸಹಿ ಮಾಡಿ ವಿಜಯಾ ಬ್ಯಾಂಕ್ ಕೌಂಟರ್ ನಲ್ಲಿ ಕೊಟ್ಟರೆ ಹಣ ಕಟ್ಟಿಸಿಕೊಂಡು ಸೀಲ್ ಹಾಕಿ ಕೊಡಲಾಗುತ್ತದೆ. ಮಾರ್ಚ್ ಮತ್ತು ಏಪ್ರಿಲ್ ಮಾಹೆಯಲ್ಲಿ ಜನರು ಕಂದಾಯ ಪಾವತಿಸುತ್ತಿದ್ದರು. ಆದರೆ ಲಾಕ್‍ಡೌನ್ ಆದೇಶವಿದ್ದ ಕಾರಣ ಮುಡಾ ಕಚೇರಿ ಬಂದ್ ಆಗಿದ್ದರಿಂದ ಇದೀಗ ಸಾರ್ವಜನಿಕರು ಸಾಲುಗಟ್ಟಿ ನಿಂತು ಹಣ ಪಾವತಿಸುತ್ತಿದ್ದಾರೆ. ಮೈಸೂರು ಮಹಾನಗರ ಪಾಲಿಕೆಯಂತೆ ಮುಡಾ ಕಚೇರಿಯಲ್ಲೂ ಆನ್‍ಲೈನ್ ಮೂಲಕ ತೆರಿಗೆ ಪಾವತಿಸಲು ಪ್ರಯತ್ನಿಸಲಾಗು ತ್ತಿದ್ದು, ತಂತ್ರಾಂಶ ಸಿದ್ಧಪಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ಶೀಘ್ರವೇ ಸಾರ್ವಜನಿಕರು ಮುಡಾ ವ್ಯಾಪ್ತಿಯ ಆಸ್ತಿಗಳ ತೆರಿಗೆಯನ್ನು ಮುಂದೆ ತಾವಿದ್ದೆಡೆಯೇ ಆನ್‍ಲೈನ್‍ನಲ್ಲಿ ಹಣ ಪಾವತಿಸುವ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.

Translate »