ಮೈಸೂರು, ಜೂ. 13- ಅತೀ ವೇಗ ವಾಗಿ ಬೆಳೆಯುತ್ತಿರುವ ಸಾಂಸ್ಕೃತಿಕ ನಗರಿ ಮೈಸೂರಲ್ಲಿ ನಿವೇಶನ ಮತ್ತು ಮನೆಗಳಿಗೆ ಭಾರೀ ಬೇಡಿಕೆ ಇದೆ.
ಪೆನ್ಷನರ್ಸ್ ಪ್ಯಾರಡೈಸ್ ಎಂದೇ ಕರೆ ಯುವ ಮೈಸೂರು ನಗರದಲ್ಲಿ ನೆಲೆಸಲು ಹೊರಗಿನಿಂದ ಬರುತ್ತಿರುವವರ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚಾ ಗುತ್ತಿರುವುದು ವಸತಿಗೆ ಬೇಡಿಕೆ ಹೆಚ್ಚಾಗಲು ಪ್ರಮುಖ ಕಾರಣ. ಅದೇ ಉದ್ದೇಶಕ್ಕಾಗಿ ಖಾಸಗಿ ಗೃಹ ನಿರ್ಮಾಣ ಸಹಕಾರ ಸಂಘ, ಡೆವಲಪರ್‍ಗಳು ನಿರ್ಮಿಸುವ ಬಡಾ ವಣೆಗಳು, ಅಪಾರ್ಟ್‍ಮೆಂಟ್‍ಗಳಲ್ಲಿ ನಿವೇ ಶನ ಮತ್ತು ಮನೆಗಳು ಬಿಕರಿಯಾಗುತ್ತಿರು ವುದನ್ನು ಕಾಣಬಹುದು.
ಲಕ್ಷ ಅರ್ಜಿ ಬಾಕಿ: ಮೈಸೂರಲ್ಲಿ ಕನಸಿನ ಮನೆ ಕಟ್ಟಿಕೊಳ್ಳಬೇಕೆಂಬ ಹಂಬಲದಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ಕ್ಕೆ ಸುಮಾರು 1 ಲಕ್ಷ ಮಂದಿ ನಿವೇ ಶನ ಕೋರಿ ಅರ್ಜಿ ಸಲ್ಲಿಸಿ ಕಳೆದ ಸುಮಾರು 20 ವರ್ಷಗಳಿಂದ ಕಾಯುತ್ತಿದ್ದಾರೆ. ಆ ಪೈಕಿ ಕೆಲವರು ಮೃತಪಟ್ಟಿದ್ದಾರೆ. ಮೈಸೂರಲ್ಲಿ ಒಂದು ನಿವೇಶನ ಹೊಂದ ಬೇಕೆಂಬ ಬಯಕೆಯೂ ಅವರೊಂದಿಗೆ ಸತ್ತುಹೋಗಿದೆ.
ಜಾಗದ ಕೊರತೆ: ರೈತರಿಂದ ಭೂಮಿ ಸ್ವಾಧೀನಪಡಿಸಿಕೊಂಡು ರಸ್ತೆ, ನೀರು, ವಿದ್ಯುತ್, ಒಳಚರಂಡಿ, ಉದ್ಯಾನ, ಓಪನ್ ಸ್ಪೇಸ್, ಸೀವೆಜ್ ಟ್ರೀಟ್‍ಮೆಂಟ್ ಪ್ಲಾಂಟ್ ನಂತಹ ಮೂಲ ಸೌಲಭ್ಯದೊಂದಿಗೆ ವ್ಯವ ಸ್ಥಿತವಾಗಿ ಬಡಾವಣೆ ನಿರ್ಮಿಸಿ ಲಾಭ-ನಷ್ಟವಿಲ್ಲದೇ ಫಲಾನುಭವಿಗಳಿಗೆ ನಿವೇಶನ ಹಂಚುವ ಮೂಲಕ ಮೈಸೂರು ನಗರವನ್ನು ಯೋಜನಾಬದ್ಧವಾಗಿ ಅಭಿವೃದ್ಧಿಪಡಿಸು ವುದು ಮುಡಾದ ಮೂಲ ಉದ್ದೇಶ.
ಆದರೆ ಅಧಿಕಾರಿಗಳು ಹಾಗೂ ಜನಪ್ರತಿ ನಿಧಿಗಳ ಇಚ್ಛಾಸಕ್ತಿಯ ಕೊರತೆಯಿಂದಾಗಿ ಪ್ರಾಧಿಕಾರದ ಮೂಲ ಆಶಯ ಮೂಲೆ ಗುಂಪಾಗಿದ್ದರೆ, ಮತ್ತೊಂದೆಡೆ ಬಡಾವಣೆ ಅಭಿವೃದ್ಧಿಪಡಿಸಲು ನಗರಕ್ಕೆ ಹೊಂದಿಕೊಂ ಡಂತೆ ಯಾವುದೇ ಜಮೀನುಗಳೂ ಉಳಿದಿಲ್ಲ.
ಖಾಸಗಿಯವರ ಪಾರುಪತ್ಯ: ಲಭ್ಯವಿರುವ ಕೃಷಿ ಭೂಮಿಯನ್ನು ಖಾಸಗಿ ಡೆವಲಪರ್ ಗಳು, ಗೃಹ ನಿರ್ಮಾಣ ಸಹಕಾರ ಸಂಘ ಗಳವರೇ ಖರೀದಿಸಿ ಮುಡಾದಿಂದ ನಕ್ಷೆ ಅನುಮೋದನೆ ಪಡೆದು ಬಡಾವಣೆ ಅಭಿ ವೃದ್ಧಿಪಡಿಸಿ, ಜನರಿಗೆ ಆಕರ್ಷಕ ಬೆಲೆಯಲ್ಲಿ ನಿವೇಶನ ಮಾರುತ್ತಿದ್ದಾರೆ. ಅತೀ ಶೀಘ್ರ ವಸತಿ ಬಡಾವಣೆ ನಿರ್ಮಿಸುತ್ತಿರುವ ಖಾಸಗಿ ಯವರಿಗೆ ಸುತ್ತಮುತ್ತ ಇರುವ ಮುಡಾ ಬಡಾವಣೆಗಳ ರಸ್ತೆ, ಚರಂಡಿ ಸಂಪರ್ಕ ಗಳು ವರದಾನವಾಗುತ್ತಿವೆ.
ಗುಂಪು ಮನೆ ಪರ್ಯಾಯ: ವಸತಿ ಬಡಾ ವಣೆ ನಿರ್ಮಿಸಲು ಜಾಗದ ಕೊರತೆ ಇರುವು ದರಿಂದ ಅರ್ಜಿದಾರರ ಬೇಡಿಕೆ ಪೂರೈಸಲು ಗುಂಪು ಮನೆ ಯೋಜನೆಯೊಂದೇ ಪರ್ಯಾಯ ಪರಿಹಾರ ಎಂಬ ತೀರ್ಮಾನಕ್ಕೆ ಬಂದಿದ್ದ ಮುಡಾ ಅಧಿಕಾರಿಗಳು, ಅದಕ್ಕಾಗಿ ಬೇಡಿಕೆ ಸಮೀಕ್ಷೆಯನ್ನೂ ನಡೆಸಿದ್ದರು.
ಮನೆಗಾಗಿ ಮೈಸೂರಿನಲ್ಲಿ 45,000 ಮಂದಿ ಅರ್ಜಿ ಸಲ್ಲಿಸಿದ್ದರು. ರಿಂಗ್ ರಸ್ತೆ ಒಳಗೆ ಬರುವ ವಿಜಯನಗರ 2, 3ನೇ ಹಂತ, ರಾಮಕೃಷ್ಣನಗರ, ಕುವೆಂಪುನಗರ, ಜೆಪಿ ನಗರ ಸೇರಿದಂತೆ ನಗರದಾದ್ಯಂತ ಪ್ರಮುಖ ಬಡಾವಣೆಗಳಲ್ಲಿ (Pಡಿime ಐoಛಿಚಿಣioಟಿs) 10ರಿಂದ 15 ಅಂತಸ್ತಿನ ಹೈರೈಸ್ಡ್ ಬಿಲ್ಡಿಂಗ್ ಗಳನ್ನು ನಿರ್ಮಿಸುವ ಯೋಜನೆಯನ್ನು ಪ್ರಾಧಿಕಾರ ರೂಪಿಸಿತ್ತು.
ಜಾಗ ಖರೀದಿಸಬೇಕಿಲ್ಲ, ಎಲ್ಲಾ ಮೂಲ ಸೌಲಭ್ಯಗಳೂ ಇರುವ ಸ್ಥಳವಾಗಿ ರುವುದರಿಂದ ಬೆಂಗಳೂರಿನ ಬಿಡಿಎ ಮಾದರಿ ಮೈಸೂರಲ್ಲೂ ಬಹು ಮಹಡಿ ಗಳ ಕಟ್ಟಡ ನಿರ್ಮಿಸಿ, 1 ಬಿಹೆಚ್‍ಕೆ, 2 ಬಿಹೆಚ್‍ಕೆ ಹಾಗೂ ಐಷಾರಾಮಿ ಮನೆ ಗಳನ್ನು ನಿರ್ಮಿಸಿ ಕೈಗೆಟಕುವ ಬೆಲೆಯಲ್ಲಿ ಮಾರಾಟ ಮಾಡುವ ಈ ಯೋಜನೆ ಸರ್ಕಾರದ ಸ್ಪಷ್ಟ ಮಾರ್ಗಸೂಚಿ ಇಲ್ಲದ ಕಾರಣ, ನೆನೆಗುದಿಗೆ ಬಿದ್ದಿದೆ.
ಭಾರೀ ಬೇಡಿಕೆ ಇದೆ: ಗುಂಪು ಮನೆ ನಿರ್ಮಿಸಿದಲ್ಲಿ ಖರೀದಿಸಲು ಜನರು ಮುಂದೆ ಬರುತ್ತಾರೆ. ರಿಂಗ್ ರಸ್ತೆಯಿಂದ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ನಿವೇ ಶನ ಖರೀದಿಸಲು ಆಸಕ್ತಿ ತೋರುತ್ತಿರುವ ಜನರು, ನಗರದಲ್ಲೇ ಗಗನಚುಂಬಿ ಕಟ್ಟಡ ನಿರ್ಮಿಸಿದಲ್ಲಿ ಭಾರೀ ಬೇಡಿಕೆ ಬರುತ್ತದೆ.
ರಿಂಗ್ ರಸ್ತೆ ಹೊರಭಾಗದಲ್ಲಿ ಖಾಸಗಿ ಯವರು ನಿರ್ಮಿಸುತ್ತಿರುವ ಅಪಾರ್ಟ್‍ಮೆಂಟ್ ಗಳಿಗೆ ನಕ್ಷೆ ಅನುಮೋದಿಸುತ್ತಿರುವ ಮುಡಾ, ಮೈಸೂರು ನಗರದ ಜನವಸತಿ ಬಡಾವಣೆ ಗಳಲ್ಲಿ ಗುಂಪು ಮನೆ ನಿರ್ಮಿಸಲು ಆಸಕ್ತಿ ತೋರದಿರುವುದು ಅಚ್ಚರಿ ಮೂಡಿಸಿದೆ.
ಎಸ್.ಟಿ.ರವಿಕುಮಾರ್