ಮೈಸೂರು,ಜ.17(ಎಂಟಿವೈ)- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಆಯುಕ್ತರಾಗಿ ಕೆಎಎಸ್ ಅಧಿಕಾರಿ ಜಿ.ಟಿ. ದಿನೇಶ್‍ಕುಮಾರ್ ಸೋಮವಾರ ಅಧಿ ಕಾರ ಸ್ವೀಕರಿಸಿದರು.
ಡಾ.ಡಿ.ಬಿ.ನಟೇಶ್ ವರ್ಗಾವಣೆಯಿಂದ ತೆರವಾಗಿದ್ದ ಸ್ಥಾನಕ್ಕೆ ಘಟಪ್ರಭ ಮತ್ತು ಮಲ ಪ್ರಭ ಅಚ್ಚುಕಟ್ಟು ಪ್ರದೇಶದ ಪ್ರದೇಶಾಭಿ ವೃದ್ಧಿ ಅಧಿಕಾರಿಯಾಗಿದ್ದ ಜಿ.ಟಿ.ದಿನೇಶ್ ಕುಮಾರ್ ಅವರನ್ನು ಕಳೆದ ಶುಕ್ರವಾರ ಸರ್ಕಾರ ಮುಡಾ ಆಯುಕ್ತರಾಗಿ ವರ್ಗಾ ವಣೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಸೋಮ ವಾರ ಬೆಳಿಗ್ಗೆ ಮುಡಾ ಕಚೇರಿಗೆ ಆಗಮಿ ಸಿದ ನೂತನ ಆಯುಕ್ತರು ಕಡತಕ್ಕೆ ಸಹಿ ಮಾಡುವ ಮೂಲಕ ವಿದ್ಯುಕ್ತವಾಗಿ ಅಧಿಕಾರ ಸ್ವೀಕರಿಸಿದರು. ನೂತನ ಆಯುಕ್ತರನ್ನು, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಹಾಗೂ ಸಿಬ್ಬಂದಿ ಹೂಗುಚ್ಚ ನೀಡಿ ಸ್ವಾಗತಿಸಿದರು.
ಕನಸು ಕಂಡಿದ್ದೆ: ಮುಡಾ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪತ್ರಕರ್ತ ರೊಂದಿಗೆ ಮಾತನಾಡಿದ ಜಿ.ಟಿ.ದಿನೇಶ್ ಕುಮಾರ್, ಮೈಸೂರು ನಗರಲ್ಲಿ ಕೆಲಸ ಮಾಡಬೇಕು ಎಂಬ ಕನಸನ್ನು ಹಲವು ಅಧಿಕಾರಿಗಳು ಕಾಣುವುದು ಸಹಜ. ಹಾಗೆಯೇ ನನ್ನದೂ ಆಗಿತ್ತು. ಸರ್ಕಾರ ನಾನು ಮುಡಾ ಆಯುಕ್ತರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿದೆ. ಈ ಅವಕಾಶವನ್ನು ಬಳಸಿಕೊಳ್ಳುವುದರೊಂದಿಗೆ, ನಾಗರಿಕರಿಗೆ ಉತ್ತಮ ಸೇವೆ ಒದಗಿಸುವತ್ತ ಗಮನಹರಿಸುತ್ತೇನೆ ಎಂದರು.
ಸಮನ್ವಯತೆಯಿಂದ ಕೆಲಸ: ನಾನು ಈಗಷ್ಟೇ ಅಧಿಕಾರ ಸ್ವೀಕರಿಸಿದ್ದೇನೆ. ಇನ್ನು ಮುಡಾಗೆ ಸಂಬಂಧಿಸಿದ ಕಾರ್ಯಚಟುವಟಿಕೆಗಳ ಬಗ್ಗೆ ಪೂರ್ಣ ಮಾಹಿತಿ ಪಡೆದಿಲ್ಲ. ಇಲ್ಲಿನ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಡಾ ಬಗ್ಗೆ ಇನ್ನಷ್ಟು ಮಾಹಿತಿ ಪಡೆಯುತ್ತೇನೆ. ಉತ್ತಮ ಕೆಲಸ ಕಾರ್ಯಗಳಾಗಬೇಕಾದರೆ ಅಧಿಕಾರಿ, ಸಿಬ್ಬಂದಿ ಹಾಗೂ ಸಾರ್ವಜನಿಕರ ಜೊತೆ ಸಮನ್ವಯತೆ ಸಾಧಿಸುವುದು ಬಹಳ ಮುಖ್ಯ. ಆ ನಿಟ್ಟಿನಲ್ಲಿ ನಾನು ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಸವಾಲುಗಳ ಮದ್ಯೆ ಕೆಲಸ ಮಾಡುವೆ: ರಾಜ್ಯದಲ್ಲಿ ಬೆಂಗಳೂರಿನ ನಂತರ ವೇಗ ವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರ ಮೈಸೂರಾಗಿದೆ. ಎರಡನೇ ದೊಡ್ಡ ನಗರ ಎಂಬ ಖ್ಯಾತಿಯೂ ಇದೆ. ಹಲವು ಹೊಸ ಬಡಾವಣೆಗಳು, ಖಾಸಗಿ ಬಡಾವಣೆಗಳು ನಿರ್ಮಾಣವಾಗುತ್ತಿವೆ. ಇಂತಹ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸವಾಲುಗಳು ಎದುರಾಗುವುದು ಸಹಜ. ಕೆಲಸಗಳ ಮಧ್ಯೆ ಸವಾಲುಗಳು ಇದ್ದೇ ಇರುತ್ತದೆ. ನಾನು ಅವೆಲ್ಲವನ್ನು ನಿಭಾಯಿಸಿ ಕೆಲಸ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.