ವಾಹನ ಚಾಲಕರಿಗೆ ಮಾತ್ರವಲ್ಲ; ಪಾದಚಾರಿಗಳಿಗೂ ಆದ್ಯತೆ ನೀಡಬೇಕಲ್ಲವೇ?
ಮೈಸೂರು

ವಾಹನ ಚಾಲಕರಿಗೆ ಮಾತ್ರವಲ್ಲ; ಪಾದಚಾರಿಗಳಿಗೂ ಆದ್ಯತೆ ನೀಡಬೇಕಲ್ಲವೇ?

January 18, 2022

ಮೈಸೂರು, ಜ.17- ರಸ್ತೆಯೇನೋ ಅಭಿವೃದ್ಧಿ ಆಗಿದೆ. ಇದರಿಂದ ವಾಹನ ಚಾಲಕರಿಗೆ ಅನುಕೂಲವಾಯಿತು. ಆದರೆ, ಪಾದಚಾರಿಗಳ ಪಾಡಂತೂ ಹೇಳ ತೀರದಾಗಿದೆ. ಮೈಸೂರು ಹೆಬ್ಬಾಳು ಭಾಗದ ರಿಂಗ್ ರಸ್ತೆ (ಭಾರತ್ ಕ್ಯಾನ್ಸರ್ ಆಸ್ಪತ್ರೆ ಬಳಿ)ಯಿಂದ ಮಂಚೇಗೌಡನಕೊಪ್ಪಲು ಅಭಿಷೇಕ್ ಸ್ಟೋರ್ ಸರ್ಕಲ್‍ವರೆಗೆ ರಸ್ತೆಯನ್ನು ಕಳೆದ ಆರು ತಿಂಗಳ ಹಿಂದೆ ಅಭಿವೃದ್ಧಿಪಡಿಸಲಾಗಿದೆ. ಮುಡಾ ಕಲ್ಯಾಣ ಮಂಟಪದವರೆಗೆ ದ್ವಿಪಥ ರಸ್ತೆ, ಅಲ್ಲಿಂದ ಬಾಕಿ ರಸ್ತೆಯನ್ನು ಸಿಂಗಲ್ ರಸ್ತೆಯಾಗಿ ಅಭಿವೃದ್ಧಿ ಮಾಡಿ ಸಂಚಾರಕ್ಕೆ ಮುಕ್ತ ಮಾಡಲಾಗಿದೆ.

ರಿಂಗ್ ರಸ್ತೆ ಕಡೆಯಿಂದ ಈ ರಸ್ತೆ ಎಡಭಾಗದಲ್ಲಿ ಕೆಲವೆಡೆ ಎರಡು ಅಡಿ, ಮತ್ತೆ ಕೆಲವೆಡೆ ಐದಾರು ಅಡಿ ಫುಟ್‍ಪಾತ್ ಬಿಟ್ಟು ರಸ್ತೆ ಮಾಡ ಲಾಗಿದೆ. ಈ ಎರಡು ಅಡಿ ಇರುವಲ್ಲಿ ವಿದ್ಯುತ್ ಕಂಬಗಳೇ ಫುಟ್‍ಪಾತ್ ಅತಿಕ್ರಮಿಸಿರುವುದರಿಂದ ಅಲ್ಲಿ ಪಾದಚಾರಿಗಳಿಗೆ ಅವಕಾಶವೇ ಇಲ್ಲ. ಏನಾದರೂ ಸಾಗಿಯೇ ತೀರುತ್ತೇವೆ ಎಂದು ಫುಟ್‍ಪಾತ್‍ನಲ್ಲಿ ನಡೆಯಲು ಮುಂದಾದರೆ ಒಂದೊಮ್ಮೆ ಕರೆಂಟ್ ಹೊಡೆದರೆ ಕಾಗೆ ಥರ ಅಲ್ಲೇ ಸತ್ತು ಬೀಳುತ್ತೇವೆ. ಕಾರಣ ಯಾವಾಗ ಕರೆಂಟ್ ಕಂಬಗಳಲ್ಲಿ ಶಾಕ್ ಹೊಡೆಯುತ್ತೋ ತಿಳಿಯದು!

ಇನ್ನು ಇರುವ ಫುಟ್‍ಪಾತ್ ಕಡೆ ಐದಾರು ಅಡಿ ಸಂಪೂರ್ಣ ಅತಿಕ್ರಮಣವಾಗಿದೆ. ಕೆಲವರು ತಾವು ನಡೆಸುತ್ತಿರುವ ಅಂಗಡಿ, ಹೋಟೆಲ್‍ಗಳ ಬೋರ್ಡ್‍ಗಳನ್ನು ಅಳವಡಿಸಿದ್ದಾರೆ. ಕೋಳಿ ಮಾಂಸದ ಅಂಗಡಿಯವರು ಕೋಳಿಗಳ ದೊಡ್ಡದಾದ ಪಂಜರ ಇರಿಸಿದರೆ, ಕ್ಯಾಂಟಿನ್‍ನವರು ಗ್ರಾಹಕರು ಕೂರಲು ಚಪ್ಪಡಿ ಹಾಕಿ ಆಸನ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಕೆಲ ವರು ತಮ್ಮ ಮನೆಯ ಮುಂದೆ ಪಾರ್ಕಿಂಗ್ ಇದ್ದರೂ ಫುಟ್‍ಪಾತ್‍ನಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸುತ್ತಾರೆ.
ಇನ್ನು ಕೆಲವು ಅಂಗಡಿಗಳ ಮಾಲೀಕರು ಕಬ್ಬಿಣದ ಪೈಪ್‍ಗಳ ನೆಟ್ಟು ಸೂರು ಮಾಡಿಕೊಂಡಿದ್ದಾರೆ. ಬೃಹತ್ ವಾಣಿಜ್ಯ ಕೇಂದ್ರದವರು ಫುಟ್‍ಪಾತ್‍ನಿಂದಲೇ ತಮ್ಮ ಪ್ರವೇಶಕ್ಕೆ ಮೆಟ್ಟಿಲು ಅಳವಡಿಸಿದ್ದಾರೆ.

ಇಲ್ಲಿರುವ ಸ್ನ್ಯಾಕ್ಸ್ ಅಂಗಡಿಯವರಂತೂ ತಿಂಡಿ ಕರಿಯುವ ಬಾಂಡ್ಲಿ ಒಲೆಯನ್ನು ಫುಟ್‍ಪಾತ್‍ನಲ್ಲೇ ಪ್ರತಿಷ್ಠಾಪಿಸಿದರೆ, ಹಾಲಿನ ಮಳಿಗೆಯವರು ತಮ್ಮ ಕ್ರೇಟ್‍ಗಳನ್ನು ಫುಟ್‍ಪಾತ್‍ನಲ್ಲೇ ರಾಶಿ ಹಾಕುತ್ತಿದ್ದಾರೆ. ಕೆಲವೆಡೆ ಫುಟ್‍ಪಾತ್‍ನಲ್ಲಿ ಸೋಂಪಾಗಿ ಬೆಳೆದಿದ್ದ ಮರಗಳನ್ನು ತಮಗಿಷ್ಟ ಬಂದಂತೆ ಅವುಗಳ ಸುಳಿ ಕತ್ತರಿಸಿ ಅಂಗಡಿಗಳವರು ಅನುಕೂಲ ಮಾಡಿಕೊಂಡಿ ದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪಾದಚಾರಿಗಳ ಪಾಡೇನು? ಎಲ್ಲಿ ಓಡಾಡಬೇಕು? ಅನಿವಾರ್ಯವಾಗಿ ರಸ್ತೆಗಿಳಿದರೆ ಸದಾ ವೇಗವಾಗಿ ಚಲಿಸುವ ವಾಹನ ಗಳು ಡಿಕ್ಕಿ ಹೊಡೆಯುವುದು ಗ್ಯಾರಂಟಿ. ಕಾರಣ ಹೆಬ್ಬಾಳು ಕೈಗಾರಿಕಾ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯೂ ಇದಾಗಿದೆ. ಬಸ್‍ಗಳಿಂದ ಹಿಡಿದು ಎಲ್ಲಾ ರೀತಿಯ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ.

ಈಗಂತೂ ಈ ರಸ್ತೆ ರಿಂಗ್ ರೋಡ್‍ನಿಂದ ಕಾಳಿದಾಸ ರಸ್ತೆವರೆಗೆ ಅಭಿವೃದ್ಧಿ ಗೊಂಡಿದ್ದು, ವಾಹನ ದಟ್ಟಣೆ ಹಿಂದಿಗಿಂತಲೂ ಅಧಿಕವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಪಾದಚಾರಿಗಳ ಸುರಕ್ಷತೆಯನ್ನು ಅಧಿಕಾರಿ ವರ್ಗ ಪರಿಗಣಿ ಸಿಯೇ ಇಲ್ಲ. ವಾಹನ ಚಾಲಕರಿಗೆ ನೀಡುವಷ್ಟೇ ಪ್ರಾಮುಖ್ಯತೆ, ಆದ್ಯತೆಯನ್ನು ಪಾದಚಾರಿಗಳಿಗೂ ನೀಡಬೇಕು ಎಂಬುದನ್ನು ಇಲ್ಲಿ ದಿಕ್ಕರಿಸಲಾಗಿದೆ.

ಕ್ಷೇತ್ರದ ಶಾಸಕರಾದ ಎಲ್. ನಾಗೇಂದ್ರ ಅವರು ರಸ್ತೆ ಅಭಿವೃದ್ಧಿಗೊಂಡಿ ರುವುದನ್ನೇ ಸಾಧನೆ ಎಂದು ಪರಿಗಣಿಸಿದಂತಿದೆ. ಆದರೆ ಪಾದಚಾರಿಗಳ ಸುರಕ್ಷತೆಯ ಬಗ್ಗೆ ಅವರು ಸಹ ಗಮನಹರಿಸಿದಂತಿಲ್ಲ. ಇನ್ನು ನಗರಪಾಲಿಕೆ ಇಲ್ಲವೇ ಮುಡಾ ಮತ್ತು ಸಂಚಾರಿ ಪೊಲೀಸರು ಇದರ ಬಗ್ಗೆ ಗಮನಹರಿಸಿ ಅತಿಕ್ರಮಿತ ಫುಟ್‍ಪಾತ್ ತೆರವುಗೊಳಿಸಬೇಕು. ಶಿಸ್ತು ಕ್ರಮದೊಂದಿಗೆ ಮತ್ತೆ ಮತ್ತೆ ಹೀಗೆ ಫುಟ್‍ಪಾತ್ ಅತಿಕ್ರಮಿಸಿಕೊಳ್ಳುವವರಿಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಪಾದಚಾರಿಗಳ ಆಗ್ರಹವಾಗಿದೆ.

Translate »