ಅಯ್ಯಪ್ಪ ಭಕ್ತರಿಗೆ ಹೊದಿಕೆ ವಿತರಣೆ
ಮೈಸೂರು

ಅಯ್ಯಪ್ಪ ಭಕ್ತರಿಗೆ ಹೊದಿಕೆ ವಿತರಣೆ

January 18, 2022

ಮೈಸೂರು, ಜ.17(ಆರ್‍ಕೆಬಿ)- ಕೊರೆಯುವ ಚಳಿಯಲ್ಲಿ ಅಯ್ಯಪ್ಪ ದರ್ಶನಕ್ಕೆಂದು ಶಬರಿಮಲೆಗೆ ತೆರಳುವ 40ಕ್ಕೂ ಹೆಚ್ಚು ಮಂದಿ ಬಡ ವರ್ಗದ ಅಯ್ಯಪ್ಪ ಭಕ್ತರಿಗೆ ಅಭಯಂ ಫೌಂಡೇಷನ್, ಜೀವಧಾರ ರಕ್ತನಿಧಿ ಕೇಂದ್ರ ಮತ್ತು ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಉಚಿತ ಹೊದಿಕೆ ನೀಡಿ ಬೀಳ್ಕೊಡಲಾಯಿತು.

ಮೈಸೂರು ರಾಘವೇಂದ್ರನಗರದ ಅಯ್ಯಪ್ಪ ದೇವಸ್ಥಾನದಲ್ಲಿ ನಡೆದ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮದಲ್ಲಿ ಜೀವಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಹೊದಿಕೆಗಳನ್ನು ವಿತರಿಸಿ ಮಾತನಾಡಿದರು. ಸನಾತನ ಧರ್ಮದ ಪ್ರಕಾರ ಮನುಷ್ಯನು ಭಗವಂತನಲ್ಲಿ ಐಕ್ಯವಾಗಲು ರಾಜಯೋಗ, ಭಕ್ತಿಯೋಗ, ಕರ್ಮಯೋಗ, ಜ್ಞಾನಯೋಗ ಎಂಬ ಮಾರ್ಗಗಳಿವೆ. ಅಯ್ಯಪ್ಪ ವ್ರತ ಮಾಡುವವರು ಭಕ್ತಿಯೋಗದ ಮೂಲಕ ದೈವಸ್ವರೂಪದ ಅನುಭವವನ್ನು ಪಡೆಯುತ್ತಾರೆ ಎಂದು ಹೇಳಿದರು.

ಸಾಮರಸ್ಯದ ಸಂಕೇತವಾದ ಅಯ್ಯಪ್ಪಸ್ವಾಮಿ ಆರಾಧನೆಯಲ್ಲಿ ಜಾತ್ಯತೀತ ಮನೋ ಧರ್ಮ ಅಡಗಿದೆ. ಊರಿನ ದೇವಸ್ಥಾನಗಳು ಅಭಿವೃದ್ಧಿಗೊಂಡರೆ ಸುಭೀಕ್ಷೆ ನೆಲೆಗೊಳ್ಳ ಲಿದೆ. ಧಾರ್ಮಿಕ ಪ್ರಜ್ಞೆಯಿಂದ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ಶ್ರದ್ಧಾ ಕೇಂದ್ರಗಳಿಗೆ ನಿರಂತರ ಭೇಟಿಯಿಂದ ನೆಮ್ಮದಿ ಕಾಣಲು ಸಾಧ್ಯವಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ರೇಣುಕಾ ರಾಜು, ಅಭಯಂ ಫೌಂಡೇಷನ್ ಸಂಸ್ಥೆಯ ಮುರಳಿ ಶಾಸ್ತ್ರಿ, ಮೋಹನ್ ಕುಮಾರ್, ಎಂ.ಎಸ್.ಮಾಧವ, ಚಕ್ರಪಾಣಿ, ಎಸ್.ಪಿ.ಕೃಷ್ಣಪ್ಪ ಇನ್ನಿತರರು ಉಪಸ್ಥಿತರಿದ್ದರು.

Translate »