ಕುರಿ-ಮೇಕೆಗಳಿಗೆ ಮಾರಕವಾದ ಹಿರೇಬೇನೆ ತಡೆಗೆ ಲಸಿಕಾ ಕಾರ್ಯಕ್ರಮ ಆರಂಭ
ಮೈಸೂರು

ಕುರಿ-ಮೇಕೆಗಳಿಗೆ ಮಾರಕವಾದ ಹಿರೇಬೇನೆ ತಡೆಗೆ ಲಸಿಕಾ ಕಾರ್ಯಕ್ರಮ ಆರಂಭ

January 18, 2022

ಮೈಸೂರು,ಜ.17(ಪಿಎಂ)- ಕುರಿ-ಮೇಕೆಗಳಿಗೆ ಮಾರಕ ವಾದ ಹಿರೇಬೇನೆ (ಪಿಪಿಆರ್) ಎಂಬ ವೈರಾಣು ತಡೆಗೆ ಮೈಸೂರು ಜಿಲ್ಲೆಯಲ್ಲಿ ಲಸಿಕಾ ಕಾರ್ಯಕ್ರಮ ಆರಂಭ ವಾಗಿದೆ. ನಾಲ್ಕು ಲಕ್ಷ ಮೇಕೆ ಮತ್ತು ಕುರಿಗಳಿಗೆ ಲಸಿಕೆ ನೀಡುವ ಈ ಕಾರ್ಯಕ್ರಮವು ತಿಂಗಳ ಕಾಲ ನಡೆಯಲಿದೆ.

ಜಿಲ್ಲೆಯಲ್ಲಿ 2,03,463 ಕುರಿಗಳು ಮತ್ತು 2,08,206 ಮೇಕೆಗಳಿಗೆ (ಒಟ್ಟು 4,11,669) ಲಸಿಕೆ ನೀಡಲು ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ ಮುಂದಾಗಿದೆ. ಕಾಲು ಮತ್ತು ಬಾಯಿಯಲ್ಲಿ ಹುಣ್ಣು ಆಗುವುದನ್ನು ತಡೆಗಟ್ಟಲು ಪ್ರತಿ 6 ತಿಂಗಳಿಗೊಮ್ಮೆ ಈ ಲಸಿಕೆ ನೀಡಲಾಗುತ್ತದೆ. ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ಇಲಾಖೆ ಉಪನಿರ್ದೇಶಕರ ಕಚೇರಿಯಲ್ಲಿ ಸೋಮವಾರ ಮುಖ್ಯ ಪಶುವೈದ್ಯಾಧಿಕಾರಿ ಡಾ.ಸಿ.ಆರ್. ಗೋಪಿನಾಥ್ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ಪಿಪಿಆರ್ ಲಸಿಕೆ ನೀಡುವ ಕಾರ್ಯಕ್ರಮ ಭಾನುವಾರ ದಿಂದ (ಜ.16) ಪ್ರಾರಂಭವಾಗಿದ್ದು, ಇಲಾಖೆಯ ವೈದ್ಯರು ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಲಸಿಕೆ ನೀಡಲಿದ್ದಾರೆ. ಜೊತೆಗೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಬೀಡು ಬಿಟ್ಟಿರುವ ಕುರಿ ಮಂದೆಯನ್ನೂ ಪರಿಶೀಲಿಸಿ, ಅಲ್ಲಿಯೂ ಲಸಿಕೆ ಕಾರ್ಯಕ್ರಮ ನಡೆಸಲಾಗುವುದು ಎಂದು ವಿವರಿಸಿದರು.

ಪೆಸ್ಟಿ-ಡೆಸ್-ಪೆಟಿಟ್ಸ್ ರೂಮಿನೆಂಟ್ಸ್ (ಪಿಪಿಆರ್) ಅಥವಾ ಕುರಿ ಪ್ಲೇಗ್, ಕುರಿ ಮತ್ತು ಮೇಕೆಗಳಲ್ಲಿ ಮಾರ್ಬಿಲಿ ವೈರಾಣುಗಳಿಂದ ಬರುವ ಸಾಂಕ್ರಾಮಿಕ ರೋಗ. ಒಮ್ಮೆಲೆ ಶುರುವಾಗುವ ಅತಿಯಾದ ಜ್ವರ, ಲವಲವಿಕೆ ಇಲ್ಲದಿರು ವುದು, ಆಹಾರ ತಿನ್ನದಿರುವುದು, ಕಣ್ಣು ಮತ್ತು ಮೂಗಿನಿಂದ ನೀರು ಸುರಿಯುವುದು, ನಂತರ ಗೊಣ್ಣೆಯು ರಕ್ತ ಮಿಶ್ರಿತ ವಾಗಲೂಬಹುದು. ಅಲ್ಲದೆ, ಬಾಯಿ, ನಾಲಿಗೆ ಮತ್ತು ಒಸುಡು ಗಳಲ್ಲಿ ಹುಣ್ಣಾಗುವುದು, ಕೆಮ್ಮು ಮತ್ತು ಉಸಿರಾಟಕ್ಕೆ ತೊಂದರೆ ಉಂಟಾಗುವುದು ಇದರ ಪ್ರಮುಖ ಲಕ್ಷಣ ಎಂದರು.

4.35 ಲಕ್ಷ ರಾಸುಗಳಿಗೆ ಲಸಿಕೆ: ಕಳೆದ ಡಿಸೆಂಬರ್‍ನಲ್ಲಿ ಎಮ್ಮೆ, ಹಸು, ಕೋಣ, ಎತ್ತು ಸೇರಿದಂತೆ 4,35,534 ಜಾನುವಾರುಗಳಿಗೆ ಕಾಲುಬಾಯಿ ಜ್ವರ ತಡೆಗೆ ಲಸಿಕೆ (ಎಫ್‍ಎಂಡಿ ಲಸಿಕೆ) ನೀಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 5,14,000 ರಾಸುಗಳಿದ್ದು, ಪ್ರತಿ 6 ತಿಂಗಳಿಗೊಮ್ಮೆ ಈ ಲಸಿಕಾ ಕಾರ್ಯಕ್ರಮ ನಡೆಯಲಿದೆ ಎಂದು ಡಾ. ಸಿ.ಆರ್.ಗೋಪಿನಾಥ್ ತಿಳಿಸಿದರು.

ಪ್ರತಿ ನಾಲ್ಕು ತಿಂಗಳಿಗೊಮ್ಮೆ ಹೆಣ್ಣು ಕರುಗಳಿಗೆ (8 ತಿಂಗಳು ಒಳಪಟ್ಟ ಎಮ್ಮೆ ಮತ್ತು ಹಸು ಕರುಗಳು) ಬ್ರೂಸೆಲ್ಲೋಸಿಸ್ ಲಸಿಕೆ (ಕಂದು ರೋಗ ನಿವಾರಣಾ ಲಸಿಕೆ) ನೀಡಲಾಗುತ್ತದೆ. ಅಂತೆಯೇ ಕಳೆದ ಸೆಪ್ಟೆಂಬರ್ ನಲ್ಲಿ ಪೂರ್ಣಗೊಂಡ ಮೊದಲ ಸುತ್ತಿನಲ್ಲಿ 29 ಸಾವಿರ ಕರುಗಳಿಗೆ ಈ ಲಸಿಕೆ ನೀಡಲಾಗಿದೆ. ಈಗಲೂ ಈ ಲಸಿಕಾ ಕಾರ್ಯಕ್ರಮ ನಡೆಯುತ್ತಿದ್ದು, ಈ ಮಾಸಾಂತ್ಯಕ್ಕೆ ಕೊನೆಗೊಳ್ಳಲಿದೆ ಎಂದು ವಿವರಿಸಿದರು.

ಇಲಾಖೆಯಿಂದ ಜಿಲ್ಲೆಯಲ್ಲಿ 3 ಎಫ್‍ಪಿಓ: ಕುರಿ ಮತ್ತು ಹಂದಿ ಸಾಕಾಣಿಕೆದಾರರು ತಮ್ಮ ಉತ್ಪನ್ನಗಳನ್ನು ತಾವಾ ಗಿಯೇ ಮಾರಾಟ ಮಾಡಲು ಅನುಕೂಲ ಕಲ್ಪಿಸಲು ಜಿಲ್ಲೆ ಯಲ್ಲಿ ಮೂರು `ರೈತ ಉತ್ಪಾದಕ ಸಹಕಾರ ಸಂಘ (ಎಫ್‍ಪಿಓ)’ ರಚನೆಗೆ ಇಲಾಖೆ ಕ್ರಮ ಕೈಗೊಂಡಿದೆ ಎಂದರು.
ಒಂದು ಸಹಕಾರ ಸಂಘದಲ್ಲಿ 250ರಿಂದ ಸಾವಿರ ಸದಸ್ಯರು ಒಳಗೊಂಡಿರಲು ಅವಕಾಶವಿದೆ. ಟಿ.ನರಸೀಪುರ ಮತ್ತು ನಂಜನಗೂಡು ತಾಲೂಕುಗಳಲ್ಲಿ ತಲಾ ಒಂದು ಕುರಿ ಸಾಕಾಣಿಕೆದಾರರ ಎಫ್‍ಪಿಓ ಮತ್ತು ಇಡೀ ಮೈಸೂರು ಜಿಲ್ಲಾ ವ್ಯಾಪ್ತಿಗೆ ಒಂದು ಹಂದಿ ಸಾಕಾಣಿಕೆದಾರರ ಎಫ್‍ಪಿಓ ರಚನೆಗೆ ಇಲಾಖೆ ಕ್ರಮ ಕೈಗೊಂಡಿದೆ ಎಂದು ಹೇಳಿದರು.

ಕುಂದು ಕೊರತೆ ಸಂಬಂಧ ಒಂದೂ ಕರೆಯಿಲ್ಲ: ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಕುಂದು ಕೊರತೆ ಆಲಿ ಸಲು ಸೋಮವಾರ ಬೆಳಗ್ಗೆ 10.30ರಿಂದ 11.30ರವರೆಗೆ ಉಪ ನಿರ್ದೇಶಕರ ಕಚೇರಿ ಮುಖ್ಯ ಪಶುವೈದ್ಯಾಧಿಕಾರಿ ಕೊಠಡಿ ಯಲ್ಲಿ ನೇರ ಫೋನ್‍ಇನ್ ಕಾರ್ಯಕ್ರಮ ಏರ್ಪಡಿಸ ಲಾಗಿತ್ತು. ಆದರೆ ಯಾವುದೇ ಕರೆಗಳು ಸಾರ್ವಜನಿಕರಿಂದ ಬರಲಿಲ್ಲ.

Translate »