ಹಿರಿಯ ಸಾಹಿತಿ ಮುತ್ತುಸ್ವಾಮಿ ಅವರಿಗೆ ಮುಕ್ತಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ
ಮೈಸೂರು

ಹಿರಿಯ ಸಾಹಿತಿ ಮುತ್ತುಸ್ವಾಮಿ ಅವರಿಗೆ ಮುಕ್ತಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ

March 2, 2021

ಮೈಸೂರು, ಮಾ.1(ಎಸ್‍ಪಿಎನ್)- ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ `ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ ಟ್ರಸ್ಟ್’ನ 21ನೇ ವಾರ್ಷಿಕೋತ್ಸವ ಅಂಗವಾಗಿ ಹಿರಿಯ ಸಾಹಿತಿ ಎಂ.ಮುತ್ತು ಸ್ವಾಮಿ ಅವರಿಗೆ ಈ ಸಾಲಿನ ಡಿವಿಜಿ ಮುಕ್ತಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ನಾದಬ್ರಹ್ಮ ಸಭಾಂಗಣದಲ್ಲಿ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ನಿವೃತ್ತ ಪ್ರಾಧ್ಯಾಪಕ ಲಕ್ಷ್ಮೀನಾರಾಯಣ ಅವರು, ಡಿವಿಜಿಯವರು 945 ಕಗ್ಗಗಳನ್ನು ಹಗ್ಗದಂತೆ ಹೊಸೆದಿದ್ದಾರೆ. ಡಿವಿಜಿ ಅವರು ಸಿಕ್ಕ ಸಿಕ್ಕ ಕಡೆ, ಸಣ್ಣಪುಟ್ಟ ಚೀಟಿಗಳಲ್ಲಿ ಕಗ್ಗಗಳನ್ನು ಬರೆದಿಡುತ್ತಿದ್ದರು. ಅವರು ರಚಿಸಿದ ಎಲ್ಲಾ ಕಗ್ಗಗಳು ಯುವ ಪೀಳಿಗೆಯ ಬದುಕಿಗೆ ದಾರಿ ತೋರಿಸಬಲ್ಲವಾಗಿವೆ. ಈ ವೇಳೆ ಡಿವಿಜಿಯವರ ಹೆಸರಿನಲ್ಲಿ ಮುಕ್ತಕ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಅರ್ಥಪೂರ್ಣ ಎಂದು ತಿಳಿಸಿದರು.

ಇದೇ ವೇಳೆ, ಹಿರಿಯ ಕಲಾವಿದೆ ರಾಮೇಶ್ವರಿ ವರ್ಮ, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಎಸ್.ಎ.ಮೋಹನಕೃಷ್ಣ, ಶಿಲ್ಪ ಮತ್ತು ಚಿತ್ರಕಲೆ ವಿಭಾಗದ ಎಸ್.ಶಿವಲಿಂಗಪ್ಪ, ಸುಗಮ ಸಂಗೀತ ಕ್ಷೇತ್ರದ ಕಲಾವಿದೆ ಸುನೀತಾ ಚಂದ್ರಕುಮಾರ್, ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಅವರನ್ನು ನಿವೃತ್ತ ಪ್ರಾಧ್ಯಾಪಕ ಎಚ್.ಎಸ್.ಲಕ್ಷ್ಮೀನಾರಾಯಣ ಸನ್ಮಾನಿಸಿದರು.

ಈ ವೇಳೆ ಎಂ.ಮುತ್ತುಸ್ವಾಮಿ ರಚಿತ `ಯದುಕುಲ ವೈಭವ ಗೀತೆ’ ಕೃತಿಯನ್ನು ಹಿರಿಯ ಸಾಹಿತಿ ಪ್ರೊ.ಮಲೆಯೂರು ಗುರು ಸ್ವಾಮಿ ಬಿಡುಗಡೆಗೊಳಿಸಿದರು. ವಿದುಷಿ ಶುಭ ರಾಘವೇಂದ್ರ ಅವರು ಮುಕ್ತಕ ಮತ್ತು ಕನ್ನಡ ಗೀತೆಗಳನ್ನು ಹಾಡಿದರು. ವಿದ್ವಾನ್ ಗಣೇಶ್ ಶಂಕರ್ ಕೀ ಬೋರ್ಡ್, ವಿದ್ವಾನ್ ಭೀಮಾ ಶಂಕರ ಬಿದನೂರು ತಬಲ ನುಡಿಸಿ, ಸಾಥ್ ನೀಡಿದರು.

ಈ ವೇಳೆ ಟ್ರಸ್ಟ್ ಅಧ್ಯಕ್ಷ ರಾಜಶೇಖರ ಕದಂಬ, ಗೌರವಾಧ್ಯಕ್ಷ ಎಸ್.ರಾಮಪ್ರಸಾದ್, ಪ್ರಧಾನ ಕಾರ್ಯದರ್ಶಿ ಪ್ರೊ. ನಿ.ಗಿರಿಗೌಡ, ಪ್ರೊ.ಶಶಿಕಲಾ, ಮೈಸೂರು ರಂಗನಾಥ್, ಕೆ.ಲೀಲಾ, ಎಚ್.ಎಂ. ನಾಗರಾಜ್‍ರಾವ್, ಸವಿತಾ ಪಾಂಡೆ, ಆರ್.ಎ.ಕುಮಾರ್, ಎಂ.ಎಸ್.ರುದ್ರಪ್ಪ, ಪದ್ಮಾ ಚಿಕ್ಕೇರೂರ್ ಮೊದಲಾದವರಿದ್ದರು.

Translate »