ಮಂಡ್ಯದಲ್ಲಿ ಮುಂಬೈ `ಕೊರೊನಾ ಬಾಂಬ್’: ರಾಜ್ಯದಲ್ಲಿ ಬೆಂಗಳೂರು ಬಿಟ್ಟರೆ ಎರಡನೇ ಸ್ಥಾನಕ್ಕೇರಿದ ಸಕ್ಕರೆ ನಾಡು
ಮೈಸೂರು

ಮಂಡ್ಯದಲ್ಲಿ ಮುಂಬೈ `ಕೊರೊನಾ ಬಾಂಬ್’: ರಾಜ್ಯದಲ್ಲಿ ಬೆಂಗಳೂರು ಬಿಟ್ಟರೆ ಎರಡನೇ ಸ್ಥಾನಕ್ಕೇರಿದ ಸಕ್ಕರೆ ನಾಡು

May 20, 2020
  •  ಒಂದೇ ದಿನ 71 ಮಂದಿಗೆ ಸೋಂಕು
  • ಕೆ.ಆರ್.ಪೇಟೆಯಲ್ಲಿ 50, ನಾಗಮಂಗಲದಲ್ಲಿ 21 ಪ್ರಕರಣ ಪತ್ತೆ
  • ಒಂದು ವರ್ಷದ ಇಬ್ಬರು ಸೇರಿ 14 ಮಕ್ಕಳಿಗೆ ಜಾಡ್ಯ

ಮಂಡ್ಯ, ಮೇ 19(ನಾಗಯ್ಯ)- ಮುಂಬೈ “ಕೊರೊನಾ’’ ಬಾಂಬ್‍ಗೆ ಮಂಡ್ಯ ಜಿಲ್ಲೆ ತತ್ತರಿಸಿದೆ. ಇಂದು ಒಂದೇ ದಿನ 71 ಮಂದಿಗೆ ಸೋಂಕು ದೃಢ ಪಟ್ಟಿದ್ದು, ಇದ ರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಒಟ್ಟು 160ಕ್ಕೇರಿದೆ.

ಕೊರೊನಾ ಪ್ರಕರಣಗಳ ಪಟ್ಟಿಯಲ್ಲಿ ಇಡೀ ರಾಜ್ಯದಲ್ಲಿ ನಿನ್ನೆಯವರೆಗೂ 7ನೇ ಸ್ಥಾನದಲ್ಲಿದ್ದ ಮಂಡ್ಯ ಜಿಲ್ಲೆ ಇಂದು 160 ಪ್ರಕರಣಗಳ ಗಡಿ ದಾಟುವ ಮೂಲಕ 2ನೇ ಸ್ಥಾನಕ್ಕೆ ಜಿಗಿದಿದ್ದು ರಾಜ್ಯ ರಾಜ ಧಾನಿಗೆ ಸೆಡ್ಡು ಹೊಡೆಯುವ ಸನಿಹದಲ್ಲಿದೆ. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಜಿಲ್ಲಾಧಿ ಕಾರಿ ಡಾ.ಎಂ.ವಿ. ವೆಂಕಟೇಶ್, ಇಂದಿನ ವರದಿಯಲ್ಲಿ ಕೆ.ಆರ್.ಪೇಟೆಯಲ್ಲಿ 50 ಮತ್ತು ನಾಗಮಂಗಲದಲ್ಲಿ 21 ಪ್ರಕರಣ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 71 ಪ್ರಕರಣಗಳು ಪತ್ತೆ ಯಾಗಿವೆ. ಈ ಪೈಕಿ 31 ಪುರುಷ, 26 ಮಹಿಳೆಯರು, ಒಂದು ವರ್ಷದ ಇಬ್ಬರು ಮಕ್ಕಳು ಸೇರಿ 14 ಮಕ್ಕಳಿಗೆ ಸೋಂಕು ತಗುಲಿದೆ ಎಂದು ತಿಳಿಸಿದರು. ಪಿ.1271 ರಿಂದ ಪಿ.1285 ರವರೆಗೆ 15 ಮಂದಿ, ಪಿ.1315 ರಿಂದ ಪಿ.1361 ರವರೆಗೆ 47 ಮಂದಿಗೆ ಬೆಳಗಿನ ವರದಿಯಲ್ಲಿ ಹಾಗೂ ಪಿ.1379 ರಿಂದ 1387 ರವರೆಗೆ 9 ಮಂದಿಗೆ ಸಂಜೆ ಬಂದ ವರದಿ ಯಲ್ಲಿ ಪಾಸಿಟಿವ್ ಪತ್ತೆಯಾಗಿದೆ ಎಂದರು. ಮುಂಬೈ ನಿಂದ ಕೆ.ಆರ್.ಪೇಟೆಗೆ ಬಂದ 50 ಮಂದಿ ಮುಂಬೈನ ಸಾಂತಾಕ್ರೋಸ್, ಮಿಲ್ಲೆಪಾರ್ಲೆ, ಅಂಧೇರಿ, ನೆಹರು ನಗರ, ವರೇಲಿ, ಪಾಲ್ ಚಂಬೂರು, ಮುಂಬೈ ವೆಸ್ಟ್‍ನ ವಿವಿಧ ಭಾಗಗಳಲ್ಲಿ ಹಲವು ವರ್ಷಗಳಿಂದ ವಾಸ ಮಾಡುತ್ತಿದ್ದು, ಪುರುಷರು ಹೋಟೆಲ್, ಬ್ಯಾಂಕ್, ಆಟೋ ಇನ್ನಿತರ ವಾಹನ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದರೆ, ಮಹಿಳೆಯರು ಗೃಹಿಣಿಯರಾಗಿದ್ದು, ಮಕ್ಕಳು ಸ್ಥಳೀಯ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿ ದ್ದರು ಎಂದು ವಿವರಿಸಿದರು.

ಇವರೆಲ್ಲರೂ ಮೇ 15 ಮತ್ತು 16 ರಂದು ಬಾಂಬೆಯಿಂದ ನಿಪ್ಪಾಣಿ ಚೆಕ್‍ಪೋಸ್ಟ್ ಮೂಲಕ ಕೆ.ಆರ್.ಪೇಟೆಯ ಆನೆÀಗೊಳ ಚೆಕ್‍ಪೋಸ್ಟ್‍ಗೆ ಬಂದಿದ್ದು ಅಂದೇ ಇವರನ್ನೆಲ್ಲಾ ಕ್ವಾರಂಟೈನ್‍ಗೆ ಒಳಪಡಿಸಿದ್ದು ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ಬಂದ ವರದಿಯಲ್ಲಿ ಈ 50 ಮಂದಿಗೂ ಪಾಸಿಟಿವ್ ಫಲಿತಾಂಶ ಬಂದಿದೆ ಎಂದರು. ಸೋಂಕಿತರು ಸಂತೇಬಾಚಹಳ್ಳಿ ಹೋಬಳಿಯವರೇ ಹೆಚ್ಚಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡರ ತವರೂರು ಕೈಗೋನಹಳ್ಳಿ, ಸಾರಂಗಿ, ಜಾಗಿನಕೆರೆ, ದೊಡ್ಡಸೋಮನಹಳ್ಳಿ, ಚಿಕ್ಕಸೋಮನಹಳ್ಳಿ, ಮಲಗೂಡು, ಹದ್ದಿ ಹಳ್ಳಿ, ಚಿಕ್ಕಸಂದ್ರ, ಅಪ್ಪನಹಳ್ಳಿ, ದೊಡ್ಡಕ್ಯಾತನಹಳ್ಳಿ, ಕೊತ್ತಗಾನಹಳ್ಳಿ, ಸಾರಳ್ಳಿ, ಭಾರತೀಪುರ, ಮರವನಹಳ್ಳಿ ಸೇರಿದಂತೆ ಹಲವು ಗ್ರಾಮಗಳಿಗೆ ಸೇರಿದವರಾಗಿದ್ದಾರೆ.

ಇನ್ನೂ ನಾಗಮಂಗಲಕ್ಕೆ ಬಂದ 21 ಮಂದಿಯೂ ಸಹ ಮುಂಬೈನ ಸಾಂತಾಕ್ರೋಸ್, ಮಿಲ್ಲೆಪಾರ್ಲೆ, ಅಂದೇರಿ, ನೆಹರು ನಗರ, ವರೇಲಿ ಸೇರಿದಂತೆ ಹಲವು ಗ್ರಾಮಗಳಲ್ಲಿ ವಾಸವಿದ್ದು ಹೋಟೆಲ್, ಬ್ಯಾಂಕ್, ಆಟೋ ಸೇರಿದಂತೆ ವಿವಿಧ ವೃತ್ತಿಯಲ್ಲಿ ತೊಡಗಿದ್ದರು. ಇವರೆಲ್ಲರೂ ಮೇ 14 ರಂದು ನಿಪ್ಪಾಣಿ ಚೆಕ್‍ಪೋಸ್ಟ್ ಮೂಲಕ ಗಡಿಭಾಗದ ಆನೆಗೊಳÀಕ್ಕೆ ಆಗಮಿಸಿದ್ದು, ಅಂದೇ ಇವರೆಲ್ಲರನ್ನೂ ಕ್ವಾರಂಟೈನ್‍ಮಾಡಿ ತಪಾಸಣೆಗೊಳ ಪಡಿಸಲಾಗಿತ್ತು, ಇಂದು ಬಂದ ಫಲಿತಾಂಶದಲ್ಲಿ ಪಾಸಿಟಿವ್ ಫಲಿತಾಂಶ ಬಂದಿದೆ, ಇವರೆಲ್ಲರೂ ನಾಗಮಂಗಲ ತಾಲೂಕಿನ ತುಪ್ಪದ ಮಡು, ಸಾತೇನಹಳ್ಳಿ, ತಿರುವನಹಳ್ಳಿ, ಸುಕಧರೆ, ಹೆಚ್.ಕೋಡಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಸೇರಿದವರಾಗಿದ್ದಾರೆ ಎಂದರು. ಇಂದಿನ ವರದಿಯಲ್ಲಿ ಪತ್ತೆಯಾದ 71 ಸೋಂಕಿತರನ್ನು ಮಂಡ್ಯ ಮಿಮ್ಸ್‍ನ ಐಸೋಲೇಷನ್‍ಗೆ ದಾಖಲಿಸಲಾಗಿದೆ, ಸೋಂಕಿತರ ಪ್ರಥಮ ಸಂಪರ್ಕಿತರನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ ಎಂದರು. ದಿನೇ ದಿನೆ ಪ್ರಕರಣಗಳು ಹೆಚ್ಚಾಗುತ್ತಿದೆ ಎಂಬ ಆತಂಕ, ಭಯ, ತಲ್ಲಣ, ಗೊಂದಲ ಬೇಡ, ಮಿಮ್ಸ್‍ನ 350 ಬೆಡ್‍ಗಳ ಕೋವಿಡ್ ವಾರ್ಡ್‍ನ್ನು ಹೆಚ್ಚಳ ಮಾಡಲಾಗುತ್ತಿದ್ದು, ಪ್ರತಿ ತಾಲೂಕಿನಲ್ಲಿಯೂ ಸಹ ಕ್ವಾರಂಟೈನ್ ಸೆಂಟರ್‍ಗಳನ್ನು ಹೆಚ್ಚಳ ಮಾಡಿ ಅಧಿಕಾರಿಗಳನ್ನು ನಿಯೋಜಿಸಲಾಗುತ್ತಿದೆ. ಈ ವರೆಗೆ 8 ಸಾವಿರ ಮಂದಿಯನ್ನು ತಪಾಸಣೆ ಮಾಡಲಾಗಿದ್ದು, ಬಾಂಬೆಯಿಂದ ಬಂದವರಿಗೆ ಕಡ್ಡಾಯವಾಗಿ ಪರೀಕ್ಷೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಕ್ವಾರಂಟೈನ್‍ನಲ್ಲಿದ್ದ ಮಹಿಳೆ ಸಾವು
ಮಂಡ್ಯ, ಮೇ 19(ನಾಗಯ್ಯ)- ನಾಗಮಂಗಲ ತಾಲೂಕಿನ ಸೋಮನಾಳಮ್ಮ ದೇವಾಲಯದ ಬಳಿಯ ವಸತಿ ಶಾಲೆ ಕ್ವಾರಂಟೈನ್‍ನಲ್ಲಿದ್ದ ಮಹಿಳೆ ಯೋರ್ವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಮೂಲತಃ ನಾಗಮಂಗಲ ತಾಲೂಕು ಹೊಣಕೆರೆ ಹೋಬಳಿ ಜುಟ್ಟನಹಳ್ಳಿ ಗ್ರಾಮದ 60 ವರ್ಷ ಮಹಿಳೆ ಮೃತಪಟ್ಟಿದ್ದಾರೆ. ಹಲವು ವರ್ಷಗಳಿಂದ ಪತಿ ಮತ್ತು ಮಕ್ಕಳೊಂದಿಗೆ ಮುಂಬೈನಲ್ಲಿ ವಾಸವಿದ್ದ ಈಕೆ ಲಾಕ್ ಡೌನ್ ಹಿನ್ನೆಲೆಯಲ್ಲಿ ಪತಿ ಜೊತೆ ಇದೇ ಮೇ 17 ರಂದು ಕೆ.ಆರ್.ಪೇಟೆಯ ಆನೆಗೊಳ ಚೆಕ್‍ಪೋಸ್ಟ್‍ಗೆ ಆಗಮಿಸಿದ್ದರು. ಅಂದೇ ಈಕೆಯೂ ಸೇರಿದಂತೆ ಪತಿ, ಜೊತೆಯಲ್ಲಿಯೇ ಬಂದಿದ್ದಮತ್ತೊಬ್ಬ ವ್ಯಕ್ತಿಯೂ ಸೇರಿದಂತೆ ಮೂವರನ್ನು ನಾಗಮಂಗಲ ತಾಲೂಕಿನ ಹೊಣಕೆರೆ ಹೋಬಳಿಯ ಸೋಮನಳ್ಳಮ್ಮ ದೇವಾಲಯದ ಬಳಿಯ ವಸತಿ ಶಾಲೆಯ ಕ್ವಾರಂಟೈನ್‍ನಲ್ಲಿರಿಸಲಾಗಿತ್ತು. ಇಂದು ಮಧ್ಯಾಹ್ನವಷ್ಟೇ ಈಕೆಯೂ ಸೇರಿದಂತೆ ಜೊತೆಯಲ್ಲಿದ್ದವರಿಗೆಲ್ಲಾ ಕೊರೊನಾ ಟೆಸ್ಟ್‍ಗೆ ಗಂಟಲು ದ್ರವವನ್ನು ತೆಗೆಯಲಾಗಿತ್ತು. ಆದರೆ ಸಂಜೆ ಶೌಚಾಲಯಕ್ಕೆ ಹೋಗಿ ಬಂದ ವೇಳೆ ಇದ್ದಕ್ಕಿದಂತೆ ಎದೆನೋವು ಕಾಣಿಸಿಕೊಂಡು ಮೃತಪಟ್ಟಿದ್ದಾರೆ. ಈಕೆಗೆ ಆಗಾಗ ಹೃದಯ ಸಂಬಂಧಿ ಕಾಯಿಲೆಯಿತ್ತೆಂದು ಆಕೆಯ ಪತಿಯೇ ತಿಳಿಸಿದ್ದಾರೆ. ಹೀಗಾಗಿ ಈಕೆ ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಆದರೂ ಈಕೆಯ ಕೊರೊನಾ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವೆಂಕಟೇಶ್ ಮತ್ತು ಜಿಲ್ಲಾ ಆರೋಗ್ಯಾಧಿಕಾರಿ ಡಾ..ಕೆ.ಮಂಚೇಗೌಡ `ಮೈಸೂರುಮಿತ್ರ’ನಿಗೆ ತಿಳಿಸಿದ್ದಾರೆ.

Translate »