ಸ್ವಚ್ಛ ನಗರಿ ಮೈಸೂರಿಗೆ ಮತ್ತೆ `ಫೈವ್ ಸ್ಟಾರ್’ ಹಿರಿಮೆ
ಮೈಸೂರು

ಸ್ವಚ್ಛ ನಗರಿ ಮೈಸೂರಿಗೆ ಮತ್ತೆ `ಫೈವ್ ಸ್ಟಾರ್’ ಹಿರಿಮೆ

May 20, 2020

ಮೈಸೂರು, ಮೇ 19(ಎಂಕೆ)- ವರ್ಷಗಳ ಹಿಂದೆ `ದೇಶದ ಅತ್ಯಂತ ಸ್ವಚ್ಛನಗರಿ’ ಖ್ಯಾತಿಗೆ ಪಾತ್ರವಾಗಿದ್ದ ಮೈಸೂರಿಗೆ ಮತ್ತೊಮ್ಮೆ 5 ಸ್ಟಾರ್ (ಪಂಚತಾರಾ) ಗರಿಮೆ ಲಭಿಸಿದೆ. ಆ ಮೂಲಕ `ದಕ್ಷಿಣ ಭಾರತದ ತ್ಯಾಜ್ಯಮುಕ್ತ ನಗರಗಳಲ್ಲಿ 5 ಸ್ಟಾರ್ ಪಡೆದ ಏಕಮಾತ್ರ ನಗರ’ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

ಭಾರತ ಸರ್ಕಾರದ ನಗರಾಭಿವೃದ್ಧಿ ಮಂತ್ರಾಲ ಯವು (ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ) ಆಯೋಜಿಸಿದ್ದ `ತ್ಯಾಜ್ಯ ಮುಕ್ತ ನಗರ’ ಸಮೀಕ್ಷೆಯಲ್ಲಿ ಮೈಸೂರಿನ ಜತೆಗೇ ಗುಜ ರಾತ್‍ನ ರಾಜ್‍ಕೋಟ್ ಮತ್ತು ಸೂರತ್, ಮಧ್ಯ ಪ್ರದೇಶದ ಇಂದೋರ್, ಛತ್ತೀಸ್‍ಗಢದ ಅಂಬಿಕಾ ಪುರ ಹಾಗೂ ಮಹಾರಾಷ್ಟ್ರದ ನವೀ ಮುಂಬಯಿ ನಗರಗಳು `5 ಸ್ಟಾರ್’ ಪಡೆದುಕೊಂಡಿವೆ. ಸ್ವಚ್ಛ ಭಾರತ ಅಭಿಯಾನದ ತ್ಯಾಜ್ಯ ಮುಕ್ತ ನಗರಗಳ ಸಮೀಕ್ಷೆಯಲ್ಲಿ ದೇಶದ ಒಟ್ಟು 1435 ನಗರಗಳು ಭಾಗವಹಿಸಿದ್ದವು. ನಿಗದಿಪಡಿಸಿದ 1000 ಅಂಕ ಗಳಲ್ಲಿ ಮೈಸೂರು ನಗರವು 800 ಅಂಕಗಳನ್ನು ಪಡೆದು 5 ಸ್ಟಾರ್ ಗರಿಮೆಯನ್ನು ಮತ್ತೊಮ್ಮೆ ಮುಡಿಗೇರಿಸಿ ಕೊಂಡಿದೆ ಎಂದು ಮೇಯರ್ ತಸ್ನೀಂ ತಿಳಿಸಿದರು.

ನಗರಪಾಲಿಕೆ ಹಳೆ ಕೌನ್ಸಿಲ್ ಸಭಾಂಗಣದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಜನವರಿ ಮತ್ತು ಫೆಬ್ರವರಿಯಲ್ಲಿ ದೇಶಾದ್ಯಂತ ನಡೆದ ಸಮೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಿದ್ದು, ಅದರಲ್ಲಿ ದೇಶದ ಒಟ್ಟು 141 ನಗರಗಳು ತ್ಯಾಜ್ಯಮುಕ್ತ ನಗರಗಳಾಗಿವೆ.

ಮೈಸೂರು ನಗರ ಸೇರಿದಂತೆ 6 ನಗರಗಳು ಮಾತ್ರ 5 ಸ್ಟಾರ್ ಗರಿಮೆ ಪಡೆದುಕೊಂಡಿವೆ ಎಂದು ಹರ್ಷ ವ್ಯಕ್ತಪಡಿಸಿದರು. ಮೈಸೂರಿಗೆ ತ್ಯಾಜ್ಯ ಮುಕ್ತ ನಗರವೆಂಬ ಗರಿಮೆ ಮತ್ತೊಮ್ಮೆ ಲಭಿಸಲು ಹಗಲಿರುಳು ಶ್ರಮಿಸಿದ ಪೌರಕಾರ್ಮಿಕರು, ನಗರ ಪಾಲಿಕೆ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿಗಳು, ಸ್ವಚ್ಛತಾ ರಾಯಭಾರಿಗಳು, ಸಂಘ-ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಮತ್ತು ಸಾರ್ವಜನಿಕರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಪಾಲಿಕೆ ಆಯುಕ್ತ ಗುರುದತ್ ಹೆಗಡೆ ಮಾತನಾಡಿ, ಮೈಸೂರಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದರಿಂದ ತ್ಯಾಜ್ಯ ಮುಕ್ತ ನಗರಗಳ ಪಟ್ಟಿಯಲ್ಲಿ ಪುನಃ 5 ಸ್ಟಾರ್ ಪಡೆದಿದೆ. ಇದರಿಂದ ಮೈಸೂರಿನ ಬ್ರಾಂಡ್ ಹೆಚ್ಚಾಗಲಿದ್ದು, ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ. ನಗರ ಸ್ವಚ್ಛವಾಗಿದ್ದರೆ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗುತ್ತದೆ ಎಂದು ಹೇಳಿದರು. ದಕ್ಷಿಣ ಭಾರತದಲ್ಲೇ 5 ಸ್ಟಾರ್ ಪಡೆದಿರುವ ಏಕೈಕ ನಗರ ಮೈಸೂರು ಮುಂದೆ 7 ಸ್ಟಾರ್ ಪಡೆಯುವ ಎಲ್ಲಾ ಅರ್ಹತೆ ಹೊಂದಿದೆ. ಮುಂದಿನ ದಿನಗಳಲ್ಲಿ 7 ಸ್ಟಾರ್ ಪಡೆಯಲು ಹೆಚ್ಚಿನ ಶ್ರಮವಹಿಸಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಅಲ್ಲದೆ ಇಲ್ಲಿಯವರೆಗೆ ದೇಶದ ಯಾವ ನಗರವೂ 7 ಸ್ಟಾರ್ ಗರಿಮೆಗೆ ಪಾತ್ರವಾಗಿಲ್ಲ ಎಂದು ಹೇಳಿದರು.

ಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜು ಮಾತನಾಡಿ, ಭಾರತ ಸರ್ಕಾರದ ನಗರಾಭಿವೃದ್ಧಿ ಮಂತ್ರಾಲಯವು ಪ್ರತಿ ವರ್ಷವು ಸ್ಚಚ್ಛ ಸರ್ವೆಕ್ಷಣಾ ಕಾರ್ಯವನ್ನು ಹಮ್ಮಿಕೊಂಡು ಸಮೀಕ್ಷೆಯ ಮೂಲಕ ದೇಶದ ಸ್ವಚ್ಛ ನಗರಗಳನ್ನು ಆಯ್ಕೆ ಮಾಡುತ್ತಿದೆ. ಮೈಸೂರು ನಗರವು ಈಗಾಗಲೇ ನಂಬರ್ 1 ಸ್ವಚ್ಛ ನಗರವೆಂಬ ಪಟ್ಟವನ್ನು ಪಡೆದಿದ್ದು, ಕಳೆದ ಸಾಲಿನಲ್ಲಿ ದೇಶದ ಮೂರನೇ ಸ್ವಚ್ಛ ನಗರವೆಂಬ ಗರಿಮೆಯ ಜೊತೆಗೆ ಬಯಲು ಶೌಚಮುಕ್ತ ನಗರದ ಸಮೀಕ್ಷೆಯಲ್ಲಿ ಹಾಗೂ ತ್ಯಾಜ್ಯ ಮುಕ್ತ ನಗರ ಸಮೀಕ್ಷೆಯಲ್ಲಿ 5 ಸ್ಟಾರ್ ಗರಿಮೆಯನ್ನು ಪಡೆದು ಕೊಂಡಿತ್ತು. ಸದ್ಯದಲ್ಲಿ ಯೇ 2020ನೇ ಸಾಲಿನ ಸ್ವಚ್ಛ ನಗರಗಳ ಪಟ್ಟಿಯೂ ಹೊರಬೀಳಲಿದೆ ಎಂದು ಹೇಳಿದರು.

Translate »