ಮುಂಬೈ ಈ ಬಾರಿಯೂ ಐಪಿಎಲ್ ಚಾಂಪಿಯನ್
ಮೈಸೂರು

ಮುಂಬೈ ಈ ಬಾರಿಯೂ ಐಪಿಎಲ್ ಚಾಂಪಿಯನ್

November 11, 2020

ದುಬೈ, ನ.10- ಮರಳುಗಾಡಿನ ಮಹಾಸಮರ ಗೆದ್ದ ಮುಂಬೈ ಇಂಡಿಯನ್ಸ್ 13ನೇ ಆವೃತ್ತಿಯ ಐಪಿಎಲ್ -2020 ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಮೂಲಕ ಐಪಿಎಲ್ ಟ್ರೋಫಿ ಹಾಗೂ 10 ಕೋಟಿ ರೂ. ನಗದು ಬಹುಮಾನವನ್ನು ತನ್ನದಾಗಿಸಿಕೊಂಡಿದೆ. ಇನ್ನು ಸೋಲು ಅನುಭವಿಸಿದ ಡೆಲ್ಲಿ ಕ್ಯಾಪಿಟಲ್ಸ್ 6.35 ಕೋಟಿ ರೂ. ನಗದು ಬಹುಮಾನ ಪಡೆಯುವ ಮೂಲಕ ರನ್ನರ್ ಆಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಅಲ್ಲದೇ ಚೊಚ್ಚಲ ಟ್ರೋಫಿ ಗೆಲ್ಲುವ ಕನಸು ಕಂಡಿದ್ದ ಡೆಲ್ಲಿ ಆಸೆ ನುಚ್ಚು ನೂರಾಯಿತು. ಈ ಮೂಲಕ ಒಂದೂ ವರೆ ತಿಂಗಳ ಟೂರ್ನಿಗೆ ತೆರೆಬಿದ್ದಿತು.

ಇಲ್ಲಿನ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಂಗಳ ವಾರ ನಡೆದ ಫೈನಲ್ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಅವರ ಅಬ್ಬರದ ಬ್ಯಾಟಿಂಗ್ ಹಾಗೂ ಟ್ರೆಂಟ್ ಬೌಲ್ಟ್ ಮಾರಕ ಬೌಲಿಂಗ್ ದಾಳಿ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಒಟ್ಟಾರೆ 5 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿದ ಮುಂಬೈ ಸತತ ಎರಡನೇ ಹಾಗೂ 5ನೇ ಬಾರಿಗೆ ಐಪಿಎಲ್ ಟ್ರೋಫಿ ಎತ್ತಿ ಹಿಡಿಯುವ ಮೂಲಕ ಅತೀ ಹೆಚ್ಚು ಬಾರಿ ಚಾಂಪಿಯನ್ ಆದ ಕೀರ್ತಿಗೆ ಭಾಜನವಾಯಿತು.

ಇಂದು ನಡೆದ ಫೈನಲ್ ಹಣಾಹಣಿಯಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ನಿಗದಿತ 20 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 156 ರನ್ ಗಳಿ ಸಿತು. ಆರಂಭಿಕ ಆಘಾತಕ್ಕೆ ಒಳ ಗಾಯಿತು.

ತಂಡದ ಮೊತ್ತ 22 ಆಗುವಷ್ಟರಲ್ಲೇ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಮೊದಲ ಓವರ್‍ನ ಮೊದಲ ಎಸೆತದಲ್ಲೇ ಮಾರ್ಕಸ್ ಸ್ಟಾಯಿನಿಸ್ ಶೂನ್ಯ ಸಾಧನೆಯೊಂದಿಗೆ ಟ್ರೆಂಟ್ ಬೌಲ್ಟ್‍ಗೆ ವಿಕೆಟ್ ಒಪ್ಪಿಸಿದರು. ಇನ್ನು 2 ರನ್ ಗಳಿಸಿದ್ದ ಅಜಿಂಕ್ಯಾ ರಹಾನೆ ಕೂಡ ಬೌಲ್ಟ್‍ಗೆ ಬಲಿಯಾದರು. ಆದರೆ ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಫಾರ್ಮ್‍ಗೆ ಮರಳಿದ್ದ ಶಿಖರ್ ಧವನ್ 15 ರನ್ ಗಳಿಸಿ ಜಯಂತ್ ಯಾದವ್ ಸ್ಪಿನ್ ಬಲೆಗೆ ಬೀಳುವ ಮೂಲಕ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು.
ಈ ವೇಳೆ ಜೊತೆಯಾದ ನಾಯಕ ಶ್ರೇಯಸ್ ಅಯ್ಯರ್ ಹಾಗೂ ರಿಷಬ್ ಪಂತ್ ಎಚ್ಚರಿಕೆಯ ಆಟವಾಡುವ ಮೂಲಕ ನಿಧಾನವಾಗಿ ತಂಡದ ರನ್ ಗತಿ ಏರಿಸಿದರು. ಬಳಿಕ ಅಬ್ಬರಿಸಿದ ರಿಷಬ್ ಪಂತ್ ಅರ್ಧಶತಕ ಸಿಡಿಸಿ ಮಿಂಚಿದರು. ಆದರೆ 38 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಬಾರಿಸಿದ್ದ ಪಂತ್ 56 ರನ್ ಗಳಿಸಿ ಕೌಲ್ಟರ್‍ನೆಲ್‍ಗೆ ವಿಕೆಟ್ ಒಪ್ಪಿಸಿ ಹೊರ ನಡೆದರು. ಈ ವೇಳೆಗೆ ಅಯ್ಯರ್ ಹಾಗೂ ಪಂತ್ 4ನೇ ವಿಕೆಟ್‍ಗೆ 96ರನ್‍ಗಳ ಕಾಣಿಕೆ ನೀಡಿದ್ದರು. ಬಳಿಕ ಬಂದ ಶಿಮ್ರೋನ್ ಹೆಟ್ಮೇರ್ ಕೂಡ 5 ರನ್‍ಗೆ ನಿರ್ಗಮಿಸಿದರು.

ಇನ್ನಿಂಗ್ಸ್ ಕೊನೆವರೆಗೂ ಇದ್ದು ನಾಯಕನಿಗೆ ತಕ್ಕ ಆಟವಾಡಿದ ಅಯ್ಯರ್ ಅರ್ಧಶತಕ ಸಿಡಿಸಿದರು. ಆದರೆ ಮುಂಬೈ ಬೌಲರ್‍ಗಳ ಕರಾರುವಾಕ್ ಬೌಲಿಂಗ್ ದಾಳಿ ಹಾಗೂ ಇತರ ಬ್ಯಾಟ್ಸ್‍ಮನ್‍ಗಳು ಉತ್ತಮ ಸಾಥ್ ನೀಡದಿದ್ದರಿಂದ ಡೆಲ್ಲಿ ಬೃಹತ್ ಮೊತ್ತ ದಾಖಲಿಸಲು ಸಾಧ್ಯವಾಗಲಿಲ್ಲ. ಒಟ್ಟಾರೆ ಅಯ್ಯರ್ 50 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಒಳಗೊಂಡ 65 ರನ್ ಬಾರಿಸಿ ಅಜೇಯರಾಗೇ ಉಳಿದರು. ಅಂತಿಮವಾಗಿ ಡೆಲ್ಲಿ 20 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತು. ಮುಂಬೈ ಪರ ಟ್ರೆಂಟ್ ಬೌಲ್ಟ್ 3, ನಥನ್ ಕಲ್ಟರ್ 2 ಹಾಗೂ ಜಯಂತ್ ಯಾದವ್ 1 ವಿಕೆಟ್ ಪಡೆದರು.

ಡೆಲ್ಲಿ ನೀಡಿದ 157 ರನ್‍ಗಳ ಸಾಧಾರಣ ಮೊತ್ತ ಬೆನ್ನತ್ತಿದ ಮುಂಬೈಗೆ ಆರಂಭಿಕರಾದ ನಾಯಕ ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿಕಾಕ್ 45 ರನ್‍ಗಳ ಜೊತೆಯಾಟ ಭರ್ಜರಿ ಆರಂಭ ಒದಗಿಸಿತು. ಆದರೆ ಈ ವೇಳೆ 20 ಎಸೆತಗಳಲ್ಲಿ 1 ಸಿಕ್ಸರ್, 3 ಬೌಂಡರಿ ಒಳಗೊಂಡ 20 ರನ್ ಗಳಿಸಿ ಸ್ಟೋಯಿನಿಸ್‍ಗೆ ವಿಕೆಟ್ ಒಪ್ಪಿಸಿದರು. ನಂತರ ರೋಹಿತ್ ಶರ್ಮಾಗೆ ಜೊತೆಯಾದ ಸೂರ್ಯ ಕುಮಾರ್ ಯಾದವ್ ಕೂಡ ಸಲ್ಲದ ರನ್ ಕದಿಯಲು ಹೋಗಿ 19 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ಮತ್ತೊಂದೆಡೆ ಡೆಲ್ಲಿ ಬೌಲರ್‍ಗಳನ್ನು ಬೆಂಡೆತ್ತಿದ ರೋಹಿತ್ ಶರ್ಮಾ ಅರ್ಧಶತಕ ಸಿಡಿಸಿ ಫೈನಲ್ ಪಂದ್ಯದಲ್ಲಿ ಅಬ್ಬರಿಸಿದರು. 51 ಎಸೆತಗಳಲ್ಲಿ 4 ಸಿಕ್ಸರ್, 5 ಬೌಂಡರಿ ಒಳಗೊಂಡ 68 ರನ್‍ಗಳಿಸಿ ಔಟಾದರು. ನಂತರ ಬಂದ ಕೈರಾನ್ ಪೋಲ್ಲಾರ್ಡ್ 9, ಹಾರ್ದಿಕ್ ಪಾಂಡ್ಯ 3, ಇಶಾನ್ ಕಿಶನ್ 31 ರನ್ ಗಳಿಸಿದರು. ಅಂತಿಮವಾಗಿ ಮುಂಬೈ 18.4 ಓವರ್‍ಗಳಲ್ಲಿ 5 ವಿಕೆಟ್ ನಷ್ಟಕ್ಕೆ 157 ರನ್ ಗಳಿಸುವ ಜಯ ಸಾಧಿಸಿತು. ಡೆಲ್ಲಿ ಪರ ಬೌಲಿಂಗ್‍ನಲ್ಲಿ ಆನ್ರಿಚ್ ನಾಡ್ರ್ಜ 2, ರಬಾಡ ಹಾಗೂ ಸ್ಟಾಯಿನಿಸ್ ತಲಾ ಒಂದೊಂದು ವಿಕೆಟ್ ಉರುಳಿಸಿದರು.

ಆರೆಂಜ್, ಪರ್ಪಲ್ ಕ್ಯಾಪ್: ಪಂದ್ಯಾವಳಿಯಲ್ಲಿ ಅತೀ ಹೆಚ್ಚು ರನ್(630) ಗಳಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ನಾಯಕ ಕೆ.ಎಲ್.ರಾಹುಲ್ ಆರೆಂಜ್ ಕ್ಯಾಪ್ ಹಾಗೂ ಅತೀ ಹೆಚ್ಚು ವಿಕೆಟ್(29) ಉರುಳಿಸಿದ ಕಗಿಸೋ ರಬಾಡ ಪರ್ಪಲ್ ಕ್ಯಾಪ್ ಜೊತೆಗೆ ತಲಾ 10 ಲಕ್ಷ ರೂ.ಗಳ ಬಹುಮಾನ ತಮ್ಮದಾಗಿಸಿಕೊಂಡರು. ಇನ್ನು ಈ ಬಾರಿ ದುಬೈ, ಅಬುದಾಬಿ ಹಾಗೂ ಶಾರ್ಜಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯಗಳಲ್ಲಿ ಒಟ್ಟು 1582 ಬೌಂಡರಿ ಹಾಗೂ 734 ಸಿಕ್ಸರ್ ಸಿಡಿದವು.

Translate »