ರಂಗನತಿಟ್ಟು ಬಳಿ ರೌಡಿಶೀಟರ್ ಬರ್ಬರ ಹತ್ಯೆ
ಮೈಸೂರು

ರಂಗನತಿಟ್ಟು ಬಳಿ ರೌಡಿಶೀಟರ್ ಬರ್ಬರ ಹತ್ಯೆ

October 24, 2020

ಮಂಡ್ಯ, ಅ.23-ದುಷ್ಕರ್ಮಿಗಳ ಗುಂಪೊಂದು ಕಾರಿನಲ್ಲಿ ತೆರಳುತ್ತಿದ್ದ ರೌಡಿ ಶೀಟರ್ ಅನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ತಲೆಗೆ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿ ರುವ ಘಟನೆ ಶ್ರೀರಂಗಪಟ್ಟಣ ತಾಲೂಕು ರಂಗನತಿಟ್ಟು ಕ್ರಾಸ್‍ನಲ್ಲಿ ಗುರುವಾರ ರಾತ್ರಿ ನಡೆದಿದೆ. ಶ್ರೀರಂಗಪಟ್ಟಣ ತಾಲೂಕು ಪಾಲಹಳ್ಳಿ ಗ್ರಾಮದ ನಿವಾಸಿ ರೌಡಿ ಶೀಟರ್ ಹರೀಶ್ ಅಲಿಯಾಸ್ ಕಳ್ಳಪಚ್ಚಿ(30) ಹತ್ಯೆಗೀಡಾದವನಾಗಿದ್ದು, ಗುರುವಾರ ರಾತ್ರಿ ಈತ ಶ್ರೀರಂಗಪಟ್ಟಣದಿಂದ ತನ್ನ ಸ್ವಗ್ರಾಮ ಪಾಲ ಹಳ್ಳಿಗೆ ಇಯಾನ್ ಕಾರಿನಲ್ಲಿ ತೆರಳುತ್ತಿದ್ದಾಗ ಮತ್ತೊಂದು ಕಾರಿನಲ್ಲಿ ಬಂದ ದುಷ್ಕರ್ಮಿಗಳು ರಂಗನತಿಟ್ಟು ಕ್ರಾಸ್ ಬಳಿ ಈತನ ಕಾರಿಗೆ ಗುದ್ದಿ, ಕಳ್ಳಪಚ್ಚಿಯನ್ನು ಹೊರಗೆಳೆದು ಮಚ್ಚಿನಿಂದ ತಲೆ ಭಾಗಕ್ಕೆ 20ಕ್ಕೂ ಹೆಚ್ಚು ಬಾರಿ ಕೊಚ್ಚಿ ಬರ್ಬರವಾಗಿ ಹತ್ಯೆಗೈಯ್ದಿದ್ದಲ್ಲದೇ ಆತನ ಕಾರನ್ನು ಪಕ್ಕದ ಕಬ್ಬಿನ ಗದ್ದೆಗೆ ತಳ್ಳಿ ಪರಾರಿಯಾಗಿದ್ದಾರೆ.

ಗಬ್ಬಿನ ಗದ್ದೆಯಲ್ಲಿ ಕಾರು ಉರುಳಿ ಬಿದ್ದಿರುವುದನ್ನು ಕಂಡ ಸಾರ್ವಜನಿಕರು ಅಪಘಾತ ವಾಗಿದೆ ಎಂದು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ತೆರಳಿದ ಪೊಲೀಸರಿಗೆ ರೌಡಿಶೀಟರ್ ಕಳ್ಳಪಚ್ಚಿ ಹತ್ಯೆಯಾಗಿರುವುದು ಕಂಡು ಬಂದಿದೆ. ಆತನ ಕಾರಿನ ಬಳಿಯೇ ದುಷ್ಕರ್ಮಿ ಗಳು ಹತ್ಯೆಗೆ ಬಳಸಿದ್ದ ಮಚ್ಚು ರಕ್ತಸಿಕ್ತವಾಗಿ ದೊರೆತಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಎಸ್ಪಿ ಕೆ.ಪರಶುರಾಂ, ಅಡಿಷನಲ್ ಎಸ್ಪಿ ಧನಂಜಯ, ಶ್ರೀರಂಗಪಟ್ಟಣ ಡಿವೈಎಸ್‍ಪಿ ಅರುಣ್ ನಾಗೇಗೌಡ, ಮುಂತಾದವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಂತಕರ ಪತ್ತೆಗಾಗಿ ಡಿವೈಎಸ್‍ಪಿ ಅರುಣ್ ನಾಗೇಗೌಡ ನೇತೃತ್ವದಲ್ಲಿ ಜಿಲ್ಲಾ ಎಸ್ಪಿ ಕೆ.ಪರಶುರಾಂ ಅವರು ಮೂರು ವಿಶೇಷ ತಂಡಗಳನ್ನು ರಚಿಸಿದ್ದಾರೆ.

ಹತ್ಯೆಗೀಡಾದ ಕಳ್ಳಪಚ್ಚಿ ಹಿನ್ನೆಲೆ: 2015ರ ಜನವರಿ ತಿಂಗಳಿನಲ್ಲಿ ಕೆಆರ್‍ಎಸ್ ಪೊಲೀಸ್ ಠಾಣೆ ವ್ಯಾಪ್ತಿಯ ಹುಲಿಕೆರೆ ಗ್ರಾಮದಲ್ಲಿ ರೌಡಿಶೀಟರ್ ದೀಪು ಎಂಬಾತನ ಹತ್ಯೆ ಪ್ರಕರಣದಲ್ಲಿ ಕಳ್ಳಪಚ್ಚಿ ಪ್ರಮುಖ ಆರೋಪಿಯಾಗಿದ್ದಾನೆ. ಬೆತ್ತನಗೆರೆ ಶಂಕರನ ಸಹಚರನಾಗಿದ್ದ ರೌಡಿಶೀಟರ್ ದೀಪು ತನ್ನ ಮನೆಯಲ್ಲಿ ಟಿವಿ ನೋಡುತ್ತಿದ್ದ ವೇಳೆ ಕಳ್ಳಪಚ್ಚಿ, ಎನ್‍ಕೌಂಟರ್ ಗಿರಿ ಮತ್ತವರ ತಂಡ ಹಾಡಹಗಲೇ ಮನೆಗೆ ನುಗ್ಗಿ ದೀಪುವನ್ನು ಬರ್ಬರವಾಗಿ ಕೊಚ್ಚಿ ಹತ್ಯೆ ಮಾಡಿತ್ತು. ಈ ಹತ್ಯೆಯ ದೃಶ್ಯಾವಳಿಗಳು ದೀಪುವಿನ ಮನೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ದಾಖಲಾಗಿತ್ತು ಎಂದು ಹೇಳಲಾಗಿದೆ. ಈ ಹತ್ಯೆ ಪ್ರಕರಣ ಮಂಡ್ಯ ಜಿಲ್ಲೆಯಲ್ಲಿ ಸಂಚಲನ ಮೂಡಿಸಿತ್ತು. ಆ ಸಂದರ್ಭದಲ್ಲಿ 27 ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ದ್ದರು. ಆ ಪ್ರಕರಣದ ಎರಡನೇ ಆರೋಪಿಯಾಗಿದ್ದ ರೌಡಿಶೀಟರ್ ಪ್ರಕಾಶ್ ಅಲಿಯಾಸ್ ಪಿಟ್ಟೆ ಎಂಬಾತನನ್ನು ಕಳೆದ ವರ್ಷ ಬಂಧಿಸಲಾಗಿತ್ತು.

ಯುವತಿಯೋರ್ವಳನ್ನು ಪ್ರೀತಿಸಿ ಈತ ವಿವಾಹವಾಗಿದ್ದನಾದರೂ, ಆಕೆ ಕೌಟುಂಬಿಕ ಕಲಹದಿಂದ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಅಲ್ಲದೇ ದೀಪುವಿನ ಅಣ್ಣ ಅಕ್ಕಿಕಾಳು ಚಂದ್ರನ ಕೊಲೆ ಪ್ರಕರಣದ ಆರೋಪಿ ಮುಜು ಎಂಬಾತನೊಂದಿಗೆ ಜೂಜಾಟದ ವಿಚಾರವಾಗಿ ಕೆಲ ದಿನಗಳ ಹಿಂದೆ ಮೈಸೂರಿನಲ್ಲಿ ಕಳ್ಳಪಚ್ಚಿ ಗಲಾಟೆ ಮಾಡಿಕೊಂಡಿದ್ದ ಎಂಬ ಮಾಹಿತಿಯೂ ಕೂಡ ಪೊಲೀಸರಿಗೆ ಲಭ್ಯವಾಗಿದೆ. ರೌಡಿಶೀಟರ್ ದೀಪು ಹತ್ಯೆಗೆ ಪ್ರತೀಕಾರವಾಗಿ ಈತನ ಹತ್ಯೆ ನಡೆದಿದೆಯೇ? ಅಥವಾ ಜೂಜಾಟ ವಿಚಾರವಾಗಿ ಮುಜು ಜೊತೆ ಕೆಲ ದಿನಗಳ ಹಿಂದೆ ಗಲಾಟೆ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಹತ್ಯೆ ನಡೆದಿದೆಯೇ? ಇಲ್ಲವೇ ಈತನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದ ಕಾರಣದಿಂದಾಗಿ ಪ್ರತೀಕಾರ ತೀರಿಸಿಕೊಳ್ಳಲು ಹತ್ಯೆ ಮಾಡಲಾಗಿದೆಯೇ? ಎಂಬುದೂ ಸೇರಿದಂತೆ ಹಲವಾರು ಕೋನಗಳಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಕಳ್ಳಪಚ್ಚಿಯನ್ನು ಮೈಸೂರು ಅಥವಾ ಬೆಂಗಳೂರಿನ ರೌಡಿಗಳು ಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿದೆ.