ಸೋಂಕಿತರ ಸುಲಿಗೆ ಮಾಡಿದರೆ ಕಠಿಣ ಕ್ರಮ
ಮೈಸೂರು

ಸೋಂಕಿತರ ಸುಲಿಗೆ ಮಾಡಿದರೆ ಕಠಿಣ ಕ್ರಮ

October 24, 2020

ಮೈಸೂರು, ಅ.23(ಎಂಟಿವೈ)- ಕೊರೊನಾ ಸೋಂಕಿತರ ಚಿಕಿತ್ಸೆಗೆ ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಶುಲ್ಕ ಪಡೆಯುವ ಖಾಸಗಿ ಆಸ್ಪತ್ರೆಗಳ ಮೇಲೆ ಹದ್ದಿನ ಕಣ್ಣಿಡಲು ತಂಡವೊಂದನ್ನು ರಚಿಸಲಾಗಿದೆ. ರೋಗಿ ಕಡೆಯವರು ದೂರು ನೀಡಿದರೆ ಹೆಚ್ಚುವರಿ ಹಣ ವಾಪಸ್ ಕೊಡಿಸುವ ಜವಾಬ್ದಾರಿ ಜಿಲ್ಲಾಡಳಿತದ್ದಾಗಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಭರವಸೆ ನೀಡಿದ್ದಾರೆ.

ಮೈಸೂರು ಡಿಸಿ ಕಚೇರಿ ಸಭಾಂಗಣದಿಂದ ಆನ್‍ಲೈನ್ ಮೂಲಕ ಸುದ್ದಿಗೋಷ್ಠಿ ನಡೆಸಿದ ಅವರು, ಮೈಸೂರನ್ನು ಕೊರೊನಾ
ಮುಕ್ತ ಜಿಲ್ಲೆಯಾಗಿಸಲು ಕ್ರಮ ಕೈಗೊಳ್ಳಲಾಗಿದೆ. ಈ ನಡುವೆ ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಹಣ ಸುಲಿಗೆ ಮಾಡಲಾಗು ತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಹೆಚ್ಚಿನ ಹಣ ಪಡೆದ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.

ಇಂಥ ಆಸ್ಪತ್ರೆಗಳ ಮೇಲೆ ಹದ್ದಿನ ಕಣ್ಣಿಡಲು ಆರೋಗ್ಯಾಧಿಕಾರಿ, ಪೊಲೀಸ್ ಅಧಿಕಾರಿಗಳ ಒಳಗೊಂಡ ತಂಡ ರಚಿಸಲಾಗಿದೆ. ಅಲ್ಲದೇ, ಆಸ್ಪತ್ರೆಯಿಂದ ಹೆಚ್ಚುವರಿ ಹಣವನ್ನು ಸೋಂಕಿ ತರ ಕಡೆಯವರಿಗೆ ವಾಪಸ್ ಕೊಡಿಸಲು ಜಿಲ್ಲಾಡಳಿತ ಬದ್ಧವಾಗಿದೆ. ಅಲ್ಲದೆ ಹೆಚ್ಚಿನ ಹಣ ವಸೂಲಿ ಮಾಡುವ ಆಸ್ಪತ್ರೆಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ಲಿಕ್ವಿಡ್ ಹ್ಯಾಂಡಲಿಂಗ್ ಸಿಸ್ಟಮ್: ನಗರದಲ್ಲಿ ಕೋವಿಡ್ ಪರೀಕ್ಷೆಗೆಂದು ಗಂಟಲು ದ್ರವ ಸಂಗ್ರಹಿ ಸಿದ ಬಳಿಕ ಫಲಿತಾಂಶ ಬರಲು ಸದ್ಯ 3-4 ದಿನ ಕಾಯುವ ಸ್ಥಿತಿ ಇದೆ. ಮೈಸೂರಂತಹ ನಗರ ದಲ್ಲಿ ಇಷ್ಟು ದಿನ ಕಾಯುವುದು ಸರಿಯಾದ ಕ್ರಮವಲ್ಲ. ಮೈಸೂರು ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ(ಎಂಎಂಸಿಆರ್‍ಐ) ಹಾಗೂ ಸಿಎಫ್‍ಟಿಆರ್‍ಐ ಪ್ರಯೋಗಾಲಯದಿಂದ ಪ್ರತಿದಿನ 1500 ಮಂದಿಯ ಸ್ವ್ಯಾಬ್ ಸ್ಯಾಂಪಲ್ ಪರೀಕ್ಷೆ ನಡೆಯುತ್ತಿದೆ. ಆದರೆ ಮೈಸೂರಲ್ಲಿ ನಿತ್ಯವೂ 4 ಸಾವಿರ ಮಂದಿಯ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಲಾಗುತ್ತಿದೆ. 2500ದಷ್ಟು ಸ್ವ್ಯಾಬ್ ಸ್ಯಾಂಪಲನ್ನು ಬೆಂಗಳೂರಿನ ಜೆನ್ಸ್ ಹಾಗೂ ಎನ್‍ಐವಿ ಸಂಸ್ಥೆಗೆ ಕಳುಹಿಸಲಾಗುತ್ತಿದೆ. ಹಾಗಾಗಿಯೇ ಫಲಿತಾಂಶ ಬರಲು 3-4 ದಿನ ತೆಗೆದುಕೊಳ್ಳುತ್ತಿದೆ. ಹಾಗಾಗಿಯೇ ಮೈಸೂರಲ್ಲಿಯೇ ಹೆಚ್ಚಿನ ಸ್ವ್ಯಾಬ್ ಟೆಸ್ಟ್‍ಗೆ ವ್ಯವಸ್ಥೆ ಮಾಡಿ ಕೊಡುವಂತೆ ಆರೋಗ್ಯ ಸಚಿವರಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ದಸರಾ ಮುಗಿದ ಬಳಿಕ ಎಂಎಂಸಿಆರ್‍ಐನಲ್ಲಿಯೇ ಲಿಕ್ವಿಡ್ ಹ್ಯಾಂಡಲಿಂಗ್ ಸಿಸ್ಟಮ್ ಮೂಲಕ ಸ್ವ್ಯಾಬ್ ಟೆಸ್ಟ್ ಪ್ರಕ್ರಿಯೆ ಆರಂಭಿಸಲಾಗುತ್ತದೆ. ಈ ವ್ಯವಸ್ಥೆ ಜಾರಿಗೆ ತಂದ ಬಳಿಕ ದಿನಕ್ಕೆ 4 ಸಾವಿರ ಸ್ವ್ಯಾಬ್ ಸ್ಯಾಂಪಲ್ ಪರೀಕ್ಷೆ ಮಾಡಬಹುದಾಗಿದ್ದು, 24 ಗಂಟೆಯಲ್ಲೇ ಫಲಿತಾಂಶ ಹೊರಬೀಳಲಿದೆ ಎಂದು ತಿಳಿಸಿದರು.

ಸರ್ಕಾರದ ನಿರ್ದೇಶನದ ಮೇರೆಗೆ ಮೈಸೂರು ಜಿಲ್ಲೆಯ ವಿವಿಧ ಕೇಂದ್ರಗಳಲ್ಲಿ ನಡೆಸುತ್ತಿರುವ ಕೋವಿಡ್ ಟೆಸ್ಟ್‍ನಲ್ಲಿ ಶೇ.90ರಷ್ಟು ಮಂದಿಗೆ ಆರ್‍ಟಿಪಿಸಿಆರ್ ಪರೀಕ್ಷೆ ನಡೆಸಿದರೆ, ಶೇ.10 ಮಂದಿಗೆ ರ್ಯಾಪಿಡ್ ಆಂಟಿಜನ್ ಟೆಸ್ಟ್ ಮಾಡಲಾಗುತ್ತಿದೆ. ತುರ್ತಾಗಿ ಫಲಿತಾಂಶ ಬೇಕಿರುವವರಿಗಷ್ಟೇ ಆರ್‍ಎಟಿ ಟೆಸ್ಟ್ ಮಾಡಲಾಗುತ್ತಿದೆ ಎಂದರು.