ಸರ್ಕಾರ ಕೊಡುವ ದುಡ್ಡು ದಾನವಲ್ಲ-ಪರಿಷತ್ತು, ಸಮ್ಮೇಳನ ಸಮಿತಿ ಕೃತಜ್ಞರಾಗಿರಬೇಕಾಗಿಲ್ಲ: ಪ್ರೊ.ಎಂ.ಕೃಷ್ಣೇಗೌಡ
ಮೈಸೂರು

ಸರ್ಕಾರ ಕೊಡುವ ದುಡ್ಡು ದಾನವಲ್ಲ-ಪರಿಷತ್ತು, ಸಮ್ಮೇಳನ ಸಮಿತಿ ಕೃತಜ್ಞರಾಗಿರಬೇಕಾಗಿಲ್ಲ: ಪ್ರೊ.ಎಂ.ಕೃಷ್ಣೇಗೌಡ

October 24, 2020

ಮೈಸೂರು, ಅ.23(ಆರ್‍ಕೆಬಿ)- ಕನ್ನಡ ಸಾಹಿತ್ಯ ಪರಿಷತ್ತಿಗೆ, ಸಾಹಿತ್ಯ ಸಮ್ಮೇಳನಗಳಿಗೆ ಸರ್ಕಾರ ದುಡ್ಡು ಕೊಟ್ಟರೆ ಅದು ದಾನ ಅಲ್ಲ. ದುಡ್ಡು ಕೊಟ್ಟಾಕ್ಷಣ ಪರಿಷತ್ತಾಗಲೀ, ಸಮ್ಮೇಳನ ಸಮಿತಿಗಳಾಗಲೀ ಸರ್ಕಾರಕ್ಕೆ ಕೃತಜ್ಞರಾಗಿರಬೇಕಾದ ಅಗತ್ಯವೂ ಇಲ್ಲ. ಕವಿಗಳು ಹಂಗು ಮತ್ತು ದಾಕ್ಷಿಣ್ಯಗಳಿಗೆ ಒಳಗಾಗಬೇಕಾಗಿಲ್ಲ ಎಂದು ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ ಅಭಿಪ್ರಾಯಪಟ್ಟರು.

ಮೈಸೂರಿನ ವಿಜಯನಗರದ 1ನೇ ಹಂತ ದಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ಕಸಾಪ ಜಿಲ್ಲಾ ಘಟಕ ಶುಕ್ರವಾರ ಆಯೋಜಿಸಿದ್ದ ದಸರಾ ಕವಿಗೋಷ್ಠಿಯ 2ನೇ ದಿನ ಪ್ರಧಾನ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು

ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಇತ್ತೀಚೆಗೆ ಕಾರ್ಯಕ್ರಮವೊಂದ ರಲ್ಲಿ ಮಾತನಾಡುತ್ತಾ, ಇಂದು ಸಾಹಿತ್ಯ ಸಮ್ಮೇಳನಗಳಲ್ಲಿ ರಾಜಕೀಯವನ್ನು ಹೊರಗಿಟ್ಟಿ ದ್ದಾರೆ. ರಾಜಕೀಯ ಗೋಷ್ಠಿಗಳನ್ನು ಮಾಡ ಬೇಕು. ನಮ್ಮ ಮನೆ ಹತ್ತಿರ ದುಡ್ಡಿಗೆ ಬರುತ್ತಾರೆ. ರಾಜಕಾರಣಿಗಳ ದುಡ್ಡು ಬೇಕು. ರಾಜಕಾರಣಿ ಗಳಿಗೆ ಸಾಹಿತ್ಯ ಸಮ್ಮೇಳನಗಳಲ್ಲಿ ಆದ್ಯತೆ ಕೊಡಬಾರದೇ? ಎಂಬ ಪ್ರಶ್ನೆ ಎತ್ತಿದ್ದಾರೆ. ಇದಕ್ಕೆ ನನ್ನ ತಕರಾರಿದೆ ಎಂದು ಕೃಷ್ಣೇಗೌಡ ನುಡಿದರು.

ವಿಶ್ವನಾಥ್ ಹಿರಿಯರು, ಅನುಭವಿ ರಾಜ ಕಾರಣಿ, ಸಾಹಿತಿ ಸಹ. ಸಾಹಿತ್ಯದ ಕೋಟಾ ದಡಿಯೇ ಶಾಸನಸಭೆಗೆ ಹೋದವರು. ಆದರೆ ಅವರು ಬಳಸುವ ಭಾಷೆಯಲ್ಲಿ ವಿವೇಚನೆ ಇಲ್ಲ. ಏಕೆ ಹಾಗೆ ಹೇಳಿದರೋ ತಿಳಿಯಲಿಲ್ಲ? ಅಧಿಕಾರಸ್ಥರು ಮಾತನಾಡುವಾಗ ಸ್ವಲ್ಪ ವಿವೇಕ ಇರಬೇಕು ಎಂದು ಪ್ರೊ.ಎಂಕೆ ಟೀಕಿಸಿದರು.

ಅಂತರ್ಜಾತಿ ವಿವಾಹವಾದವರಿಗೆ ಸರ್ಕಾರ ಪ್ರೋತ್ಸಾಹಧನ ಕೊಡುತ್ತದೆ. ಹಾಗೆಂದು ನಮ್ಮ ಬಳಿ ದುಡ್ಡು ತೆಗೆದುಕೊಂಡು ಮದು ವೆಗೆ ಆಗಿದ್ದೀರಿ, ಎಂಎಲ್‍ಎ ಕರೆಯದೇ ಹೇಗೆ ಮದುವೆ ಆಗುತ್ತಾರೆ ಎಂದು ಕೇಳಿದ ಹಾಗಾಯಿತು ಎಂದು ಕುಟುಕಿದರು

ಇಂದು ರಾಜಕಾರಣ ಎಲ್ಲ ಕ್ಷೇತ್ರ ಗಳಲ್ಲೂ ತಲೆ ಹಾಕುತ್ತಿದೆ. ಸಂಸಾರಿಗರು ನಡೆಸಬೇಕಾದ್ದೆಲ್ಲವನ್ನೂ ನಾನೇ ನಡೆಸು ತ್ತೇನೆ ಎನ್ನುತ್ತದೆ. ಸೀರೆ, ಪಂಚೆ, ತಾಳಿ ಕೊಟ್ಟು ಮದುವೆ ಮಾಡಿಸುತ್ತೇವೆ. ಮಕ್ಕಳಿಗೆ ಬೂಟು, ಸೂಟು ಕೊಡುತ್ತೇವೆ. ಬಟ್ಟೆ, ಮೊಟ್ಟೆ ಹಾಲು ಕೊಡುತ್ತೇವೆ ಅಂತ ಎಲ್ಲವನ್ನೂ ಕೊಟ್ಟು ಸೀಮಂತವನ್ನೂ ಅವರೇ ಮಾಡು ತ್ತಾರೆ. ಸರ್ಕಾರದ್ದು ಇದೊಂದು ರೀತಿಯ ಒತ್ತುವರಿ ಇದ್ದಂತೆ ಎಂದು ಆಕ್ಷೇಪಿಸಿದರು.

ಸಾಹಿತ್ಯ ಸಮ್ಮೇಳನಗಳು ಇವರ ಹಂಗಲ್ಲೇ ನಡೆಯಬೇಕು. ಜಿಲ್ಲಾ, ತಾಲೂಕು ಸಮ್ಮೇಳನ ಆದರೆ ಹಾಲಿನ ಸೊಸೈಟಿ ಅಧ್ಯಕ್ಷ, ದರ ಕಾಸ್ತು ಸಮಿತಿ ಅಧ್ಯಕ್ಷ, ನಾಮಕರಣ ಸದ ಸ್ಯರು ಎಲ್ಲರನ್ನು ಕರೆಯಬೇಕು. ಗ್ರಾಪಂ ಮಾಜಿ ಸದಸ್ಯರನ್ನೂ ಬಿಡುವಂತಿಲ್ಲ. ಅಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‍ನವರು ಎಲ್ಲರೂ ಸಮನಾಗಿ ಇರಬೇಕು ಎಂಬ ರೀತಿ ಹಂಗನ್ನು ಸೃಷ್ಟಿಸಿದ್ದಾರೆ. ಸರ್ಕಾರ ಕೊಡುವ ಅನುದಾನ ಹಂಗೂ ಅಲ್ಲ, ದಾನವೂ ಅಲ್ಲ ಎಂದು ಪ್ರತಿಪಾದಿಸಿದರು.

ವಿಶ್ವನಾಥ್ ಹಿರಿಯರು, ಅನುಭವಿ, ಭಾಷೆ ಯನ್ನು ಚೆನ್ನಾಗಿ ತಿಳಿದಿರುವವರು, ಚೆನ್ನಾ ಗಿಯೂ ಮಾತನಾಡಬಲ್ಲವರು. ಆದರೂ ಅವರು ಹೀಗೇಕೆ ಮಾತನಾಡಿದರು ಎಂಬುದೇ ತಿಳಿಯಲಿಲ್ಲ. ಆದ್ದರಿಂದ ಅವರ ಹೇಳಿಕೆಗೆ ಪ್ರತಿಕ್ರಿಯಿಸುವುದು ನನ್ನ ಧರ್ಮವಾಗಿತ್ತು. ಹಾಗಾಗಿ ಕನ್ನಡ ಸಾಹಿತ್ಯ ಪರಿಷತ್‍ನ ಕವಿ ಗೋಷ್ಠಿ ವೇದಿಕೆಯಲ್ಲಿಯೇ ದೃಢವಾಗಿ ಪ್ರತಿ ಕ್ರಿಯಿಸಿದ್ದೇನೆ ಎಂದು ಪ್ರೊಫೆಸರ್ ಹೇಳಿದರು.

ಕಸಾಪ ಜಿಲ್ಲಾಧÀ್ಯಕ್ಷ ವೈ.ಡಿ.ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ವಾಸು, ಕಸಾಪ ಜಿಲ್ಲಾ ಘಟಕ ಮಾಜಿ ಅಧ್ಯಕ್ಷ ಎಂ.ಚಂದ್ರಶೇಖರ್, ಪದಾಧಿಕಾರಿಗಳಾದ ಜಯಪ್ಪ ಹೊನ್ನಾಳಿ, ಕೆ.ಎಸ್.ನಾಗರಾಜು, ರಾಜಶೇಖರ ಕದಂಬ ಇನ್ನಿತರರಿದ್ದರು.

 

Translate »