ಮುರುಘಾ ಶರಣರ ಈ ಸ್ಥಿತಿಗೆ  ಪ್ರಗತಿಪರರ ಸಹವಾಸವೇ ಕಾರಣ!
ಮೈಸೂರು

ಮುರುಘಾ ಶರಣರ ಈ ಸ್ಥಿತಿಗೆ ಪ್ರಗತಿಪರರ ಸಹವಾಸವೇ ಕಾರಣ!

September 4, 2022

ಮೈಸೂರು, ಸೆ.3- ಮುರುಘಾ ಶರಣರ ಈ ಸ್ಥಿತಿಗೆ ಪ್ರಗತಿ ಪರರ ಸಹವಾಸವೇ ಕಾರಣ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಗಳಿಗೆ ಪ್ರತಿಕ್ರಿಯಿಸಿರುವ ಅವರು, ಪ್ರಗತಿಪರರೇ ಮುರುಘಾ ಶರಣರನ್ನು ಹಾಳು ಮಾಡಿದ್ದು. ಬುದ್ಧಿ ಜೀವಿಗಳು ಹಾಗೂ ಪ್ರಗತಿಪರರು ಎಂದು ಕೊಂಡವರೇ ಈ ದೇಶ ಹಾಳು ಮಾಡಿದವರು. ಅವರೇ ಇಂತಹವರನ್ನು ಸೃಷ್ಟಿ ಮಾಡಿದರು. ಈಗ ಅವರೊಳಗೆ ಬೆಂಕಿ ಹೊತ್ತಿದೆ. ಆದರೆ ಯಾರ ಪರವಾಗಿ ಯಾರೂ ನಿಲ್ಲುವುದಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಕಠಿಣ ಕ್ರಮ ಕೈಗೊಳ್ಳಬೇಕೆಂದು ಹೇಳಿಲ್ಲವೇ? ಎಂದು ವ್ಯಂಗ್ಯವಾಡಿದರು. ಮುರುಘಾ ಶರಣರು ಹಿಂದೂ ಧರ್ಮದ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದರು. ಟಿಪ್ಪು ಸುಲ್ತಾನನ
ಪ್ರತಿಮೆಯನ್ನು ಮಠದಲ್ಲಿಟ್ಟಿದ್ದರು. ಗೋವುಗಳನ್ನು, ಅವೂ ಹಂದಿ-ನಾಯಿ ಇದ್ದಂತೆ ಎಂದು ಹೇಳಿದ್ದರು. ಹಿಂದು ಧರ್ಮದ ರಕ್ಷಣೆ ಬಗ್ಗೆ ಮಾತನಾಡುವುದನ್ನು ಬಿಟ್ಟು ಇಸ್ಲಾಂ ಧರ್ಮದ ವರ್ಣನೆ, ಗುಣಗಾನ ಮಾಡಿದ್ದರು. ಇದಕ್ಕಾಗಿ ನೀವು ಸ್ವಾಮಿ ಗಳಾಗಿರಲಿಲ್ಲ. ಹಿಂದೂ ಧರ್ಮದ ಗುಣಗಾನ ಮಾಡಿ, ಧರ್ಮವನ್ನು ಬೆಳೆಸಬಹುದಿತ್ತು, ಬೇರೆ ಧರ್ಮದವರನ್ನೂ ಆಹ್ವಾನಿಸಬಹುದಿತ್ತು, ಲವ್ ಜಿಹಾದ್ ತಪ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಬಹುದಿತ್ತು. ಆದರೆ ಅವರು ವಿಭೂತಿ, ತಿಲಕ ಹಚ್ಚಿಕೊಂಡು ಟಿಪ್ಪು ಸುಲ್ತಾನ್ ವರ್ಣನೆ ಮಾಡಿದ್ದರು ಎಂದು ಶ್ರೀಗಳ ಧೋರಣೆ ಖಂಡಿಸಿದರು. ಟಿಪ್ಪು ವರ್ಣನೆ ಮಾಡಿದವರೆಲ್ಲಾ ಕಷ್ಟ-ನಷ್ಟಕ್ಕೆ ತುತ್ತಾಗಿದ್ದಾರೆ. ಟಿಪ್ಪು ಕುರಿತು ಒಬ್ಬ ಸಿನಿಮಾ ಚಿತ್ರೀಕರಣ ಮಾಡಿದಾಗ ದೊಡ್ಡ ಅಗ್ನಿ ದುರಂತವೇ ಸಂಭವಿಸಿತು. ವಿದೇಶದಲ್ಲಿದ್ದ ಟಿಪ್ಪು ಖಡ್ಗ ತೆಗೆದುಕೊಂಡು ಬಂದ ವಿಜಯ್ ಮಲ್ಯ ದೇಶವನ್ನೇ ಬಿಟ್ಟುಹೋದ. ಸಿದ್ದರಾಮಯ್ಯನವರು ಟಿಪ್ಪು ಜಯಂತಿ ಮಾಡಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ 30 ಸಾವಿರ ಮತಗಳ ಅಂತರದಿಂದ ಸೋತರು. ಈಗ ಇವರ(ಮುರುಘಾ ಶರಣರು) ಪಾಳಿ ಎಂದು ಟೀಕಿಸಿದರು. ಮುರುಘಾ ಮಠ, ಒಂದು ವೀರಶೈವ ಮಠ ಹಾಗೂ ಹಿಂದೂ ಮಠ. ಅಲ್ಲಿ ಶಿವಾಜಿ ಮಹಾರಾಜ್, ರಾಣಾ ಪ್ರತಾಪ್, ಬಸವಣ್ಣ, ಚೆನ್ನಮ್ಮ, ಆದಿ ಶಂಕರಾಚಾರ್ಯರು ಸೇರಿದಂತೆ ಹಿಂದೂ ದರ್ಮದ ಮಹನೀಯರ ಪ್ರತಿಮೆ ಸ್ಥಾಪಿಸಬಹುದಿತ್ತು. ಅವರನ್ನೆಲ್ಲಾ ಬಿಟ್ಟು ಲಕ್ಷಾಂತರ ಹಿಂದೂಗಳ ಕಗ್ಗೊಲೆ ಮಾಡಿದ ಟಿಪ್ಪು ಪ್ರತಿಮೆ ಇಟ್ಟಿದ್ದಾರೆ. ಅದರಲ್ಲೂ ಚಿತ್ರದುರ್ಗ, ಮದಕರಿ ನಾಯಕರು ಆಳಿದ ಪ್ರದೇಶ. ಅಲ್ಲಿ ಮದಕರಿ ನಾಯಕರು ಹಾಗೂ ಒನಕೆ ಓಬವ್ವ ಅವರ ಹೆಮ್ಮೆಯ ಇತಿಹಾಸವಿದೆ. ಆ ನೆಲದ ಮೇಲೆ ಟಿಪ್ಪು ಸುಲ್ತಾನ್ ಅಪ್ಪ(ಹೈದರಾಲಿ) ದಾಳಿ ಮಾಡಿದ್ದ. ಮದಕರಿ ನಾಯಕರ ವಂಶದವರೇ ಮಠಕ್ಕೆ ಸಾವಿರಾರು ಎಕರೆ ಭೂಮಿ ನೀಡಿದ್ದಾರೆ. ಹೀಗಿರುವಾಗ ಅಲ್ಲಿ ಟಿಪ್ಪು ಪ್ರತಿಮೆ ಮಾಡಿದ್ದು ಅನ್ಯಾಯ ಹಾಗೂ ಪಾಪದ ಕೆಲಸ ಎಂದು ಹೇಳಿದರು.

Translate »